More

    ದುಬಾರಿ ಸೈಕಲ್ ಕಳ್ಳರ ಸೆರೆ: ಕದ್ದ ಸೈಕಲ್​ ಮಾರಲು ಸರ್ಕಾರಿ ಅಧಿಕಾರಿಯೇ ಏಜೆಂಟ್..!

    ಬೆಂಗಳೂರು: ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದು ದುಬಾರಿ ಮೌಲ್ಯದ ಸೈಕಲ್ ಕಳವು ಮಾಡುತ್ತಿದ್ದ ಕುಖ್ಯಾತ ಇಬ್ಬರು ಕಳ್ಳರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಆತಂಕಕಾರಿ ವಿಚಾರವೆಂದರೆ ಸೈಕಲ್​ ಮಾರಾಟ ಮಾಡಲು ಸರ್ಕಾರಿ ಅಧಿಕಾರಿಯೇ ಏಜೆಂಟ್​ ರೀತಿ ಕಳ್ಳರಿಗೆ ಸಹಾಯ ಮಾಡಿರುವುದು ವಿಪರ್ಯಾಸವಾಗಿದೆ.

    ಸಿಟಿ ಮಾರ್ಕೆಟ್ ಕೂಲಿ ಕಾರ್ಮಿಕ ರಫೀಕ್ ಮತ್ತು ದೊಡ್ಡಬಳ್ಳಾಪುರದ ಆದಿಲ್ ಬಂಧಿತರು. 10 ಸಾವಿರದಿಂದ 80 ಸಾವಿರ ರೂ. ಮುಖಬೆಲೆಯ 10 ಲಕ್ಷ ರೂ. ಮೌಲ್ಯದ ಒಟ್ಟು 45 ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯ ವಿವರಣೆಗೆ ಬರುವುದಾದರೆ, ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸಗಾರ ರಫೀಕ್, ಪ್ರತಿಷ್ಠಿತ ಕಂಪನಿಯ ಸೈಕಲ್‌ಗಳನ್ನು ಕಳವು ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಮತ್ತು ಪೊಲೀಸರು ಸಹ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ಲ್ಯಾನ್ ಮಾಡಿ ದೊಡ್ಡಬಳ್ಳಾಪುರದ ತನ್ನ ಸ್ನೇಹಿತ ಆದಿಲ್‌ಗೆ ಹಣದ ಆಮಿಷವೊಡ್ಡಿದ್ದ. ಆನಂತರ ಇಬ್ಬರು ಸೇರಿಕೊಂಡು ಕೆಲ ತಿಂಗಳಿಂದ ಸಂಜೆ ವೇಳೆ ಶ್ರೀಮಂತರ ಬಡಾವಣೆಗಳಲ್ಲಿ ಸುತ್ತಾಡಿಕೊಂಡು ಮನೆ ಬಳಿ ನಿಲ್ಲಿಸಿರುವ ಸೈಕಲ್‌ಗಳನ್ನು ಗುರುತಿಸಿ ರಾತ್ರಿ ಸಮಯದಲ್ಲಿ ಹೋಗಿ ಕಳವು ಮಾಡುತ್ತಿದ್ದರು. ಸಂಜಯನಗರ, ಹೆಬ್ಬಾಳ, ಮಾರತ್ತಹಳ್ಳಿ, ನಂದಿನಿಲೇಔಟ್, ಯಲಹಂಕ ನ್ಯೂಟೌನ್, ಅಮೃತಹಳ್ಳಿ, ಹೈಗ್ರೌಂಡ್ ಸೇರಿದಂತೆ ನಗರದ ವಿವಿಧೆಡೆ ಬೆಲೆ ಬಾಳುವ ಸೈಕಲ್ ಕಳವು ಮಾಡುತ್ತಿದ್ದರು. ಆನಂತರ ಕೇಂದ್ರ ಸರ್ಕಾರಿ ನೌಕರನ ಸಹಾಯದಿಂದ ಸೆಕೆಂಡ್ ಹ್ಯಾಡ್ ಸೈಕಲ್ ಸೋಗಲ್ಲಿ ಮಾರಾಟ ಮಾಡುತ್ತಿದ್ದರು. ಸರ್ಕಾರಿ ನೌಕರ, ಪರಿಚಯಸ್ಥರಿಗೆ ಮಾರಾಟ ಮಾಡಿಸಿ ಕಮಿಷನ್ ಪಡೆಯುತ್ತಿದ್ದ.

    ಇದರ ನಡುವೆ ಸಂಜಯನಗರ ಇನ್‌ಸ್ಪೆಕ್ಟರ್ ಭರತ್ ನೇತೃತ್ವದ ತಂಡ ಪುಂಡ-ಪೊಕರಿಗಳ ಹಾವಳಿಗೆ ಬ್ರೇಕ್ ಹಾಕಲು ಸೆ.19ರಂದು ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಿ 50 ಮಂದಿಯನ್ನು ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದ್ದರು. ಈ ಪೈಕಿ ರಫೀಕ್ ಸಹ ಸೆರೆಸಿಕ್ಕಿದ್ದ. ಪರಿಶೀಲನೆ ನಡೆಸಿದಾಗ ಜೇಬಿನಲ್ಲಿ ಕಟರ್ ದೊರೆತ್ತಿದ್ದು, ವಿಚಾರಿಸಿದಾಗ ಸೈಕಲ್ ಲಾಕ್ ಕತ್ತರಿಸಿ ಕಳವು ಮಾಡಲು ಬಳಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

    ತೀವ್ರ ವಿಚಾರಣೆ ನಡೆಸಿದಾಗ ಸೆ.13ರಂದು ಸಂಜಯನಗರ ಎಇಸಿಎಸ್ ಲೇಔಟ್‌ನಲ್ಲಿ ಇಂಡಿಯನ್ ಏರ್ ಫೋರ್ಸ್‌ನಲ್ಲಿ ಹವಲ್ದಾರ್ ಅನಿಲ್ ಕುಮಾರ್ ಸಿಂಗ್ ಮನೆಯಲ್ಲಿ ನಿಲ್ಲಿಸಿದ್ದ ಹರ್ಕ್ಯುಲಸ್ ರೋಡಿಯೋ ಎ-475 ಸೈಕಲ್‌ನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಐಎಎಸ್ ಅಧಿಕಾರಿಯ ಸೈಕಲ್ ಸಹ ಕಳವು ಮಾಡಿದ್ದರು. ಇದೇ ರೀತಿ ನಗರದ ಎಲ್ಲೆಡೆ ದುಬಾರಿ ಮೌಲ್ಯದ ಸೈಕಲ್ ಕಳವು ಮಾಡಿರುವುದ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಳ್ಳರಿಗೆ ಸರ್ಕಾರಿ ಅಧಿಕಾರಿ ಏಜೆಂಟ್ :
    ಬಂಧಿತ ಆರೋಪಿಗಳು 10 ಲಕ್ಷ ರೂ. ಮೌಲ್ಯದ ಕೆಸ್ಟೋ, ಹರ್ಕ್ಯೂಲೆಸ್, ರೋಡಿಯೋ, ಡಾಟೂ, ಮೋನ್ಟ್ರಾ, ಎಕ್ಸ್ಟಲ್, ಗಿಂಟ್ರಾ, ಬಿಎಂಡಬ್ಲ್ಯೂ, ಸ್ಕಾಟ್, ಆಟ್ಲಾಸ್ ಕೋಡ್, ಬಿ-ಟ್ವೀನ್, ಪೈರ್‌ಫಾಕ್ಸ್ ಮುಂತಾದ ಕಂಪನಿಗಳ ಟಾಪ್ ಎಂಡ್ ಮಾಡೆಲ್‌ನ 45 ಸೈಕಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

    ಕದ್ದ ಸೈಕಲ್‌ನ್ನು ಸರ್ಕಾರಿ ಅಧಿಕಾರಿ ಮೂಲಕ ಸೆಕೆಂಡ್ ಹ್ಯಾಡ್ ನೆಪದಲ್ಲಿ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಸರ್ಕಾರಿ ಅಧಿಕಾರಿ ಬೇರೆಡೆ ವರ್ಗಾವಣೆ ಆಗಿದ್ದು, ಅವರನ್ನು ಆರೋಪಿ ಮಾಡಲಾಗಿದೆ. ಬಹುತೇಕ ಸೈಕಲ್‌ಗಳು ಸರ್ಕಾರಿ ಅಧಿಕಾರಿಯೇ ಬೇರೆಯವರಿಗೆ ಮಾರಾಟ ಮಾಡಿಸಿದ್ದರು. ವಶಕ್ಕೆ ಪಡೆದ ಸೈಕಲ್‌ಗಳ ಪೈಕಿ 15 ಪ್ರಕರಣಗಳಲ್ಲಿ 19 ಸೈಕಲ್‌ಗಳ ವಾರಸುದಾರರನ್ನು ಪತ್ತೆ ಮಾಡಲಾಗಿದೆ. ಉಳಿದ 26 ಸೈಕಲ್‌ಗಳ ವಾರಸುದಾರರು ಪತ್ತೆಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈತ ಆಟೋದಲ್ಲಿ ಬರ್ತಾನೆ, ಸೈಕಲ್​ನಲ್ಲಿ ಹೋಗ್ತಾನೆ!; ಇವನೊಬ್ಬ ದುಬಾರಿ ‘ಬೈಸಿಕಳ್ಳ’

    ಅಪ್ಪಿತಪ್ಪಿ ಗೂಗಲ್​ನಲ್ಲಿ ಇವುಗಳನ್ನು ಹುಡುಕಬೇಡಿ: ಒಂದು ವೇಳೆ ಹುಡುಕಿದ್ರೆ ಬೆಲೆ ತೆರಬೇಕಾಗುತ್ತೆ ಹುಷಾರ್..!​

    ಆರ್​ಟಿಒ ಸಿಬ್ಬಂದಿಯ ವಸೂಲಿ ದಂಧೆ ಹೇಗಿರುತ್ತೆ ಗೊತ್ತಾ? ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts