More

    ಕಳಂಕಿತ ನಾಯಕರು, ಅಧಿಕಾರಿಗಳು ಸರ್ಕಾರ ಮುನ್ನಡೆಸಲು ಬಿಡುವುದಿಲ್ಲ: ರಾಜೀನಾಮೆ ಬೆನ್ನಲ್ಲೇ ಗುಡುಗಿದ ಸಿಧು

    ಚಂಡೀಗಢ: ಕೆಲವೇ ದಿನಗಳ ಹಿಂದೆ ಪಂಜಾಬ್​ ಕಾಂಗ್ರೆಸ್​ನ ಅಧ್ಯಕ್ಷರಾಗಿ ನೇಮಕವಾಗಿದ್ದ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್​ ಸಿಧು ಇದ್ದಕ್ಕಿದ್ದಂತೆ ನಿನ್ನೆ (ಸೆ.28) ರಾಜೀನಾಮೆ ನೀಡುವ ಮೂಲಕ ಪಂಜಾಬ್​ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸಾಕಷ್ಟು ಊಹಾಪೋಹಗಳ ನಡುವೆ ಸಿಧು ತಮ್ಮ ಟ್ವಿಟರ್​ನಲ್ಲಿ ವಿಡಿಯೋವೊಂದು ಪೋಸ್ಟ್​ ಮಾಡಿದ್ದು, ನನ್ನ ಕೊನೆಯ ಉಸಿರು ಇರೋವರೆಗೂ ಸತ್ಯಕ್ಕಾಗಿ ಹೋರಾಟ ಮಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

    ಪಂಜಾಬ್​ ಕಲ್ಯಾಣಕ್ಕೆ ಶ್ರಮಿಸುವುದಾಗಿ ಹೇಳಿರುವ ಸಿಧು, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ. ನನ್ನ ವೈಯಕ್ತಿಕ ಅಜೆಂಡಾಗಾಗಿ ನಾನು ಫೈಟ್​ ಮಾಡುವುದಿಲ್ಲವೆಂದು ತಿಳಿಸಿದ್ದಾರೆ.

    ನಾನು ಕಾಂಗ್ರೆಸ್ ಹೈಕಮಾಂಡ್​ ಅನ್ನು ದಾರಿ ತಪ್ಪಿಸಿಲ್ಲ.​ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಾಗಿದ್ದೇನೆಂದು ಸಿಧು ಹೇಳಿದ್ದಾರೆ. ಬಹುಕಾಲದಿಂದಲೂ ಪಂಜಾಬ್​ ಸಮಸ್ಯೆಗಳ ಮೇಲಿನ ಕಳವಳದಿಂದ ನಾನು ಹೋರಾಡುತ್ತಿದ್ದೇನೆ. ಕಳಂಕಿತ ನಾಯಕರು, ಅಧಿಕಾರಿಗಳ ಅವ್ಯವಸ್ಥೆಯ ವಿರುದ್ಧದ ಹೋರಾಟ ನನ್ನದಾಗಿದ್ದು, ಅದೇ ವ್ಯವಸ್ಥೆಯನ್ನು ನೀವು ಮುಂದುವರಿಸಲು ಸಾಧ್ಯವಿಲ್ಲ. ನಾನು ನನ್ನ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಸಿಧು ಇದೀಗ ಪಂಜಾಬ್‌ನಲ್ಲಿ ಹೊಸ ಅಡ್ವೊಕೇಟ್ ಜನರಲ್ ನೇಮಕವನ್ನು ವಿರೋಧಿಸಿದ್ದಾರೆ. ಮಾಜಿ ಡಿಜಿಪಿ ಸುಮೇದ್ ಸೈನಿ ಅವರ ಸಲಹೆಗಾರರಾಗಿ, ಪ್ರತಿಭಟನಾಕಾರರ ಮೇಲೆ ಪೊಲೀಸ್ ಫೈರಿಂಗ್‌ಗೆ ಆದೇಶಿಸಿರುವ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿರುವುದು ಸರಿಯಲ್ಲ ಎಂಬುದು ಸಿಧು ಅಭಿಪ್ರಾಯವಾಗಿದೆ.

    ಪಂಜಾಬ್​ ರಾಜ್ಯದ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹೊತ್ತಿನಲ್ಲೇ ಪಂಜಾಬ್​ ಕಾಂಗ್ರೆಸ್​ ಪಕ್ಷದೊಳಗಿನ ಆಂತರಿಕ ಸಮರ ಸ್ಫೋಟಗೊಂಡಿದೆ. ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಸಿಧು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಮಂಗಳವಾರ (ಸೆ.28) ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ​ ಸೋನಿಯಾ ಗಾಂಧಿಯವರಿಗೆ ಅವರು ರಾಜೀನಾಮೆ ಪತ್ರ ರವಾನಿಸಿದ್ದು, ಸಿಧು ಆಮ್​ ಆದ್ಮಿ ಪಕ್ಷವನ್ನು ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

    ಅಂದಹಾಗೆ ನವಜೋತ್​ ಸಿಂಗ್​ ಸಿಧು ಮತ್ತು ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಅವರದ್ದು ಎರಡು ಬಣಗಳಾಗಿದ್ದವು. ಪಾಕಿಸ್ತಾನದ ಪ್ರೇಮಿಯಾಗಿರುವ ಸಿಧು ಅವರನ್ನು ಯಾವುದೇ ಕಾರಣಕ್ಕೆ ಮುಖ್ಯಮಂತ್ರಿ ಮಾಡಬಾರದು ಎಂದು ಅಮರೀಂದರ್‌ ಸಿಂಗ್‌ ಆಗ್ರಹಿಸಿದ್ದರು. ಒಂದು ವೇಳೆ ಸಿಧು ಮುಖ್ಯಮಂತ್ರಿಯಾದರೆ ದೇಶಕ್ಕೆ ಅಪಾಯ ಕಟ್ಟಿಟ್ಟದ್ದೇ ಎಂದಿದ್ದರು. ಆದರೆ ಸಿಧು ಸಿಎಂ ಗಾದಿಯನ್ನು ಒಲಿಸಿಕೊಳ್ಳುವ ತವಕದಲ್ಲಿದ್ದರು. ಆದರೆ ಕಾಂಗ್ರೆಸ್‌ ಚರಂಜೀತ್​ ಸಿಂಗ್​ ಚನ್ನಿಯವರನ್ನು ಸಿಎಂ ಮಾಡಿತು.

    ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ ಚನ್ನಿ ಅವರು ಕೂಡ ಸಿಧು ಬಣದಲ್ಲಿದ್ದರು. ಆದ್ದರಿಂದ ಅವರ ಸಿಎಂ ಆದರೆ ಸಿಧು ಪಂಜಾಬ್​ನ ಸೂಪರ್​ ಸಿಎಂ ಆಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನ ಏರುತ್ತಲೇ ಚನ್ನಿ ಅವರು ಸಿಧು ಅವರ ಮಾತನ್ನು ಕೇಳುವುದನ್ನು ನಿಲ್ಲಿಸಿದ್ದರು. ಇದರಿಂದ ಸಿಧು ಕೋಪ ತಾರಕ್ಕೇರಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. (ಏಜೆನ್ಸೀಸ್​)

    ಕಾಂಗ್ರೆಸ್‌ನಲ್ಲಿ ಅಲ್ಲೋಲ- ಕಲ್ಲೋಲ: ಸಿಂಗ್‌ ಹಾದಿ ತುಳಿದ ಸಿಧು! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

    1 ರಿಂದ 5ನೇ ತರಗತಿ ಪುನಾರಂಭ ಯಾವಾಗ? ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದು ಹೀಗೆ…​

    2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ನ 30-35 ಟಿಕೆಟ್​ ಮಹಿಳೆಯರಿಗೆ ಮೀಸಲು: ಎಚ್​ಡಿಕೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts