More

    ಅಗ್ನಿಪಥ ಯೋಜನೆಗೆ ತೀವ್ರ ವಿರೋಧದ ಬೆನ್ನಲ್ಲೇ ಮೀಸಲಾತಿ ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

    ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ 8 ರಾಜ್ಯಗಳಿಗೆ ಹರಡಿದೆ. ಕಳೆದ ಮೂರು ದಿನಗಳಿಂದ ತೀವ್ರ ರೂಪದಲ್ಲಿದ್ದ ಪ್ರತಿಭಟನೆ ಇಂದು ಸ್ವಲ್ಪ ತಣ್ಣಗಾಗಿದೆ. ಆದರೂ, ಸರ್ಕಾರದ ಯೋಜನೆ ವಿರುದ್ಧ ಅಸಮಾಧಾನ ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯಲ್ಲಿ ಮತ್ತಷ್ಟು ಬದಲಾವಣೆಯನ್ನು ಮಾಡಿದೆ.

    ಅಗ್ನಿವೀರರಿಗೆ ಕೇಂದ್ರ ಸಶಸ್ತ್ರ ಪೊಲೀಸ್​ ಪಡೆ (ಸಿಎಪಿಎಫ್​) ಮತ್ತು ಅಸ್ಸಾಂ ರೈಫಲ್ಸ್​ನಲ್ಲಿ ಶೇ. 10 ರಷ್ಟು ಮೀಸಲಾತಿಯನ್ನು ಕೇಂದ್ರ ಗೃಹ ಸಚಿವಾಲಯ ಘೋಷಣೆ ಮಾಡಿದೆ. ಇದಿಷ್ಟೇ ಅಲ್ಲದೇ, ಎರಡೂ ಅರೆಸೇನಾ ಪಡೆಗಳಲ್ಲಿನ ನೇಮಕಾತಿಯಲ್ಲಿ ಅಗ್ನಿವೀರರಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಕೆಯನ್ನು ನೀಡಲಾಗಿದೆ. ಅಗ್ನಿವೀರರ ಮೊದಲ ಬ್ಯಾಚ್​ಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಸಡಿಲಿಕೆಯನ್ನು ನೀಡುವುದಾಗಿ ಗೃಹ ಸಚಿವಾಲಯ ಟ್ವೀಟ್​ ಮೂಲಕ ತಿಳಿಸಿದೆ.

    ಸಿಎಪಿಎಫ್​ಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಮಹತ್ವದ ಘೋಷಣೆ ಹೊರಬಿದ್ದಿದೆ. ಈಗಾಗಲೇ ಅಗ್ನಿಪಥ ಯೋಜನೆಯ ವಯೋಮಿತಿಯನ್ನು ಕೇಂದ್ರ ಸರ್ಕಾರ 21 ರಿಂದ 23ಕ್ಕೆ ಏರಿಸಿದೆ. ಈ ಮೊದಲು 17 ರಿಂದ 21ರವರೆಗೆ ಇತ್ತು. ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದ ಕಾರಣ ವಯೋಮಿತಿಯನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಪ್ರಸ್ತುತ, ಅರೆಸೈನಿಕ ಪಡೆಗಳ ಐದು ವಿಭಾಗಗಳಾದ ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಶಸ್ತ್ರ ಸೀಮಾ ಬಲ (SSB) ಮತ್ತು ಕೇಂದ್ರ ಕೈಗಾರಿಕಾ ಭದ್ರತೆ ಫೋರ್ಸ್ (ಸಿಐಎಸ್ಎಫ್)ಯಲ್ಲಿ ಒಟ್ಟು 73,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಿಎಪಿಎಫ್‌ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಒಟ್ಟು 73,219 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿ-ಅಂಶಗಳು ಸೂಚಿಸುತ್ತವೆ. ಅಲ್ಲದೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳಲ್ಲಿ 18,124 ಹುದ್ದೆಗಳು ಖಾಲಿ ಇವೆ.

    ಏನಿದು ಅಗ್ನಿಪಥ ಯೋಜನೆ?
    ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಕುರಿತ ಸಂಪುಟ ಉಪಸಮಿತಿ ಅಗ್ನಿಪಥ ಯೋಜನೆಗೆ ಅನುಮೋದನೆ ನೀಡಿದೆ. ಈ ಸಂಗತಿಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ 46 ಸಾವಿರ ಜನರನ್ನು 4 ವರ್ಷಗಳ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷದಲ್ಲಿ ಆರು ತಿಂಗಳ ತರಬೇತಿ ಅವಧಿಯೂ ಸೇರಿದೆ. ನೇಮಕಾತಿ ಪ್ರಕ್ರಿಯು ಇಂದಿನಿಂದ ಮೂರು ತಿಂಗಳಲ್ಲಿ ಮುಗಿಯಲಿದ್ದು, 2023ರ ಜುಲೈನಲ್ಲಿ ಮೊದಲ ಬ್ಯಾಚ್ ಸೇವೆಗೆ ಸಿದ್ಧವಾಗಲಿದೆ ಎಂದು ಸಿಂಗ್ ಹೇಳಿದರು. ಅರ್ಹತೆ ಆಧಾರದಲ್ಲಿ ಪ್ರತಿ ಬ್ಯಾಚ್​ನಲ್ಲಿ ಶೇ.25ರಷ್ಟು ಯೋಧರಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ ಮತ್ತು ಇಂಥವರು ಅಧಿಕಾರೇತರ ಶ್ರೇಣಿಯಲ್ಲಿ 15 ವರ್ಷ ಸೇವೆ ಸಲ್ಲಿಸಬಹುದು ಎಂದರು. ಆದರೆ, ಪಿಂಚಣಿಯಾಗಲಿ ಅಥವಾ ಗ್ರಾಚ್ಯುಟಿ ಹಣವನ್ನು ಸರ್ಕಾರ ನೀಡುವುದಿಲ್ಲ.

    ಈ ನೇಮಕಾತಿಯಿಂದ ಸೇನೆಯ ವಾರ್ಷಿಕ ವೆಚ್ಚದಲ್ಲಿ ದೊಡ್ಡ ಉಳಿತಾಯ ಆಗಲಿದೆ. ಸೇನೆಗೆ ಸರ್ಕಾರ ನೀಡುವ ಬಜೆಟ್​ನಲ್ಲಿ ಅರ್ಧದಷ್ಟು ಭಾಗ ವೇತನ ಮತ್ತು ಪಿಂಚಣಿಗೆ ಖರ್ಚಾಗುತ್ತದೆ. ‘ಅಗ್ನಿಪಥ’ ಯೋಜನೆಯಿಂದ ದೊಡ್ಡ ಮಟ್ಟದ ಉಳಿತಾಯ ಸಾಧ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಈ ಯೋಜನೆಯು ಬಿಹಾರದ ಸೇನಾ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಯೋಜನೆ ಕೈಬಿಡಬೇಕೆಂದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಕೇಂದ್ರ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಿದೆ. ಆದರೂ ಪ್ರತಿಭಟನಾಕಾರರ ಮನಸ್ಸಿಗೆ ಇದು ಇಷ್ಟವಿಲ್ಲ. ಸಂಪೂರ್ಣ ಯೋಜನೆಯನ್ನೇ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ.

    ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್‌ವರೆಗೆ, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಬಿಜೆಪಿ ಆಡಳಿತದ ಇಂದೋರ್‌ವರೆಗೆ, ನೂರಾರು ಯುವ ಸೇನಾ ಆಕಾಂಕ್ಷಿಗಳು ಬೀದಿಗಿಳಿದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡುವ ಮೂಲಕ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಮಾರ್ಗ ಮಧ್ಯೆ ಲೈಂಗಿಕ ಬಯಕೆ ಈಡೇರಿಸಿ! ಅಮಲಾ​ರನ್ನು ಮಂಚಕ್ಕೆ ಕರೆದವರಿಗೆ ಬಿಗ್​ ಶಾಕ್​

    ಕೋಟಿ ಒಡೆಯ ಮಾದಪ್ಪ,‌ 35 ದಿನದಲ್ಲಿ 2 ಕೋಟಿ‌ಗೂ ಅಧಿಕ ಹಣ ಸಂಗ್ರಹ

    VIDEO| 100ನೇ ವಸಂತಕ್ಕೆ ಕಾಲಿಟ್ಟ ತಾಯಿ ಹೀರಾಬೆನ್​ರ ಪಾದಪೂಜೆ ಮಾಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts