More

    ಎಫ್​ಡಿಎ ಮಾಯಣ್ಣರ ಬಳಿ 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿ? ಎಸಿಬಿ ಅಧಿಕಾರಿಗಳೇ ಶಾಕ್​

    ಬೆಂಗಳೂರು: ಸವಿನಿದ್ದೆಯಲ್ಲಿದ್ದ ರಾಜ್ಯದ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್​ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿ ಭ್ರಷ್ಟರಾಗುತ್ತಿರುವ ಅಧಿಕಾರಿಗಳಿಗೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಿಸಿ ಮುಟ್ಟಿಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟೂ 60 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯ ತಂಡದಿಂದ 15 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿದೆ. ಶೋಧ ವೇಳೆ ಅಪಾರ ಪ್ರಮಾಣದಲ್ಲಿ ಅಕ್ರಮ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ.

    ಬಿಬಿಎಂಪಿ ಮೂಲ ಸೌಕರ್ಯ ವಿಭಾಗದಲ್ಲಿ 198 ವಾರ್ಡ್​ಗಳಿಗೂ ಇದ್ದ ಏಕೈಕ ಎಫ್.ಡಿ.ಎ ಮಾಯಣ್ಣ. ಮಾಯಣ್ಣ ಬಿಬಿಎಂಪಿಯ ರಸ್ತೆ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯದ ಎಫ್​ಡಿಎ ನೌಕರ. ಮಾಯಣ್ಣ ತಂಗಿ, ಬಾಮೈದ ಹಾಗೂ ತಮ್ಮಂದಿರ ಮನೆ ಸೇರಿ ಒಟ್ಟು ಎಂಟು ಕಡೆ ದಾಳಿ ಮಾಡಲಾಗಿದೆ. ಕತ್ರಿಗುಪ್ಪೆ, ನಾಯಂಡಳ್ಳಿ, ವಿದ್ಯಾಪೀಠ ಸೇರಿ ಒಟ್ಟು ಎಂಟು ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಮಾಯಣ್ಣ ಬಳಿ 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. ಮಾಯಣ್ಣ ಕಳೆದ 11 ವರ್ಷಗಳಿಂದ ಸಾವಿರಾರು ಕೋಟಿ ಅನುದಾನ ನಿರ್ವಹಣೆ ಮಾಡಿದ್ದರು. ತನ್ನ ಸಂಬಂಧಿಕರ ಮೂಲಕ ಬಿಬಿಎಂಪಿಯಲ್ಲಿ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪವಿದೆ. ಕನ್ನಡ ಸಾಹಿತ್ಯ ಪರಿಷತ್​ನಲ್ಲೂ ಅಕ್ರಮ ಎಸಗಿದ್ದ ಆರೋಪ ಮಾಯಣ್ಣರ ಮೇಲಿದೆ. ಕನ್ನಡ ಸಾಹಿತ್ಯ ಸಂಸ್ಥೆಯಲ್ಲಿ ರಾಜಕಾರಣ, ಗುಂಪುಗಾರಿಕೆ ಲಾಬಿ ಮಾಡ್ತಾರೆ ಅನ್ನೊ ಆರೋಪ ಕೇಳಿಬಂದಿದೆ. 2019ರ ಜುಲೈ‌ನಲ್ಲಿ ಬಿಬಿಎಂಪಿ ಆಯುಕ್ತರಿಗೆ ಮಾಯಣ್ಣನ ವಿರುದ್ದ ದೂರು ನೀಡಲಾಗಿತ್ತು. ಪರಿಷತ್ ಚುನಾವಣೆಯಲ್ಲಿ ಗೆಲ್ಲಬೇಕೆಂದು ಅಪಾರ ಹಣ ಹಂಚಿಕೆ ಮಾಡ್ತಿದ್ದಾರೆಂದು ದೂರಲಾಗಿತ್ತು.

    ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತರಾಗಿರೋ ಮಾಯಣ್ಣ, ಬೆಂಗಳೂರಿನ ಹಲವು ಕಡೆ ಹತ್ತಾರು ಮನೆ, ಸೈಟ್‌ ಹಾಗೂ ಕೋಟ್ಯಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ ಎನ್ನಲಾಗಿದೆ. ಕಳೆದ ಏಳು ವರ್ಷದಿಂದ ಒಂದೇ ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ. ವರ್ಗಾವಣೆಯಾಗಿದ್ದರೂ ಮತ್ತದೇ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಎಸಿಬಿ ದಾಳಿ ನಡೆಸಿದೆ.

    ಮಾಯಣ್ಣ ಅವರು ಕನ್ನಡ ಸಾಹಿತ್ಯ ಪರಿಷತ್​ನ ಮಾಜಿ ಜಿಲ್ಲಾಧ್ಯಕ್ಷರಾಗಿದ್ದರು. ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ರು. ಮಾಯಣ್ಣರ ಅಕ್ರಮ ಆಸ್ತಿ ಕಂಡು ಎಸಿಬಿ ಬೆಚ್ಚಿಬಿದ್ದಿದೆ ಎಂದು ಹೇಳಲಾಗಿದೆ. ಈ ಹಿಂದೆ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಾಂತರ ರೂ. ನಷ್ಟ ಮಾಡಿರುವ ಆರೋಪ ಮಾಯಣ್ಣನ ಮೇಲಿದೆ. ನಕಲಿ ಸಹಿ, ಬಿಲ್‌, ದಾಖಲೆ ಸೃಷ್ಟಿಸಿ ವಂಚನೆ ಮಾಡಿದ್ದಾರೆಂಬ ಆರೋಪವಿದೆ. ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಮಾಯಣ್ಣ ಮನೆ ಮೇಲೆ ದಾಳಿ ವೇಳೆ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ದಾಖಲೆಯಿಲ್ಲದ ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ಸದ್ಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ಮಾಯಣ್ಣನ ವಿರುದ್ಧ ಮೀಟು ಆರೋಪಾನೂ ಕೇಳಿ ಬಂದಿತ್ತು. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಮೀಟು ಆರೋಪಕ್ಕೆ ಕುರಿತಂತೆ ಬಿಬಿಎಂಪಿ ಆಯುಯಕ್ತರಿಗೂ ದೂರು ನೀಡಲಾಗಿತ್ತು. ಆದರೆ, ದೂರು ನೀಡಿದ್ದರೂ ಹಿಂದಿನ ಆಯುಕ್ತರು ಕ್ರಮ ಕೈಗೊಂಡಿರಲಿಲ್ಲ. (ದಿಗ್ವಿಜಯ ನ್ಯೂಸ್​)

    BREAKING: ಸವಿನಿದ್ದೆಯಲ್ಲಿದ್ದ ರಾಜ್ಯದ ಅಧಿಕಾರಿಗಳಿಗೆ ಶಾಕ್‌ ನೀಡಿದ ಎಸಿಬಿ; 60 ಸ್ಥಳಗಳಲ್ಲಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts