More

    ತಲೆಮರೆಸಿಕೊಂಡಿದ್ದ ‘ಕುರಾನ್ ಸರ್ಕಲ್‌’ನ ಶಂಕಿತ ಉಗ್ರ ಎನ್‌ಐಎ ಬಲೆಗೆ, ‘ಭವಿಷ್ಯದ ಐಸಿಸ್’ ಕುರಿತು ಬೆಂಗಳೂರಿನಲ್ಲಿ ಪ್ಲ್ಯಾನ್!

    ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಗೆ ಯುವಕರನ್ನು ಕಳುಹಿಸುತ್ತಿದ್ದ ‘ಕುರಾನ್ ಸರ್ಕಲ್’ ಗ್ಯಾಂಗ್‌ನ ಮತ್ತೊಬ್ಬ ಶಂಕಿತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

    ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಜುಹೇಬ್ ಹಮೀದ್ ಶಕೀಲ್ ಮುನ್ನಾ ಅಲಿಯಾಸ್ ಜುಹೇಬ್ ಮುನ್ನಾ (32) ಬಂಧಿತ. 2020ರ ಸೆಪ್ಟೆಂಬರ್‌ನಲ್ಲಿ ಐಸಿಸ್ ಸಂಘಟನೆಗೆ ಯುವಕರ ನೇಮಕ ಮತ್ತು ದೇಣಿಗೆ ಸಂಗ್ರಹ ಪ್ರಕರಣದಲ್ಲಿ ಎನ್‌ಐಎ ಕಾರ್ಯಾಚರಣೆ ನಡೆಸಿ ಫ್ರೇಜರ್ ಟೌನ್‌ನ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್ ಮತ್ತು ತಮಿಳುನಾಡಿನ ಬ್ಯಾಂಕ್ ನೌಕರ ಅಹಮ್ಮದ್ ಅಬ್ದುಲ್ ಖಾದರ್, ದಂತ ವೈದ್ಯ ಡಾ.ಮಹಮ್ಮದ್ ತೌಕೀರ್ ಮೆಹಬೂಬ್ ಎಂಬುವರನ್ನು ಬಂಧಿಸಿದ್ದರು. ಈ ಗ್ಯಾಂಗ್‌ನ ಜುಹೇಬ್ ಹಮ್ಮಿದ್ ತಲೆಮರೆಸಿಕೊಂಡಿದ್ದ. 1 ವರ್ಷದ ಬಳಿಕ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಿದ್ದಾರೆ.

    ಬಂಧಿತ ಶಂಕಿತರು ಮುಸ್ಲೀಂ ಯುವಕರನ್ನು ಸಿರಿಯಾಗೆ ಕಳುಹಿಸಲು ಹಲವು ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದರು. ಇದಕ್ಕಾಗಿ ಹಿಜ್ಬ್ ಉತ್ ತಹ್ರೀರ್ ಸಂಘಟನೆ ಕಟ್ಟಿಕೊಂಡು ‘ಕುರಾನ್ ಸರ್ಕಲ್’ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದರು. ಸಿರಿಯಾದ ಐಸಿಸ್ ಭಯೋತ್ಪಾದಕ ಸಂಘಟನೆ ನಾಯಕರ ಜತೆ ಸಂಪರ್ಕ ಹೊಂದಿದ್ದ ಶಂಕಿತರು ಹಣಕಾಸಿನ ನೆರವು ಪಡೆಯುತ್ತಿದ್ದರು.

    ಸಿಲಿಕಾನ್ ಸಿಟಿಯ ಮುಸ್ಲಿಂ ಯುವಕರನ್ನು ಸಂಪರ್ಕ ಮಾಡಿ ಧರ್ಮ ಬೋಧನೆ ನೆಪದಲ್ಲಿ ಐಸಿಸ್ ಒಲವು ಮೂಡಿಸುತ್ತಿದ್ದರು. ಉಗ್ರ ಚಟುವಟಿಕೆಗಳಿಗೆ ಪ್ರಚೋಧನೆ ನೀಡಿ ಐಸಿಸ್ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು. ತಮ್ಮಬಲೆಗೆ ಬಿದ್ದು ಮೂಲಭೂತವಾದಿಗಳ ಮನ ಪರಿವರ್ತನೆ ಮಾಡಿ ಹಣಕಾಸಿನ ನೆರವು ನೀಡಿ ತುರ್ಕಿ ವೀಸಾ ಕೊಟ್ಟು ಸಿರಿಯಾಗೆ ಕಳುಹಿಸಿ ಐಸಿಸ್ ತರಬೇತಿ ಕೊಡಿಸುತ್ತಿದ್ದರು. ಸಿರಿಯಾ ಗಡಿ ಭಾಗವನ್ನು ದಾಟಿಸುವವರೆಗೂ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಆರೇಳು ಗುಂಪನ್ನು ಸಿರಿಯಾಗೆ ಕಳುಹಿಸಿರುವುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

    ಬೆಂಗಳೂರು ಹೊರವಲಯದಲ್ಲಿ ಕ್ಯಾಂಪ್ :

    ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ ಕೆಲ ಶಂಕಿತರು ಕುರಾನ್ ಸರ್ಕಲ್‌ಗೆ ಆರ್ಥಿಕ ನೆರವು ನೀಡುತ್ತಿದ್ದ. ಯಾವ ವ್ಯಕ್ತಿಯನ್ನು ಟಾರ್ಗೆಟ್ ಮಾಡಬೇಕೆಂದು ಸೂಚನೆ ಸಹ ಕೊಡುತ್ತಿದ್ದರು. ಬೆಂಗಳೂರು ಹೊರ ವಲಯದಲ್ಲಿ ‘ಇಕ್ರಾ ಕ್ಯಾಂಪ್’ ನಡೆಸಿ ಉಗ್ರ ಚಟುವಟಿಕೆ ಕುರಿತು ತರಬೇತಿ ನೀಡಿದ್ದಾರೆ. ಕ್ಯಾಂಪ್‌ನಲ್ಲಿ ‘ಭವಿಷ್ಯದ ಐಸಿಸ್’ ನಿರ್ಮಾಣ ಕುರಿತು ಪ್ಲ್ಯಾನ್ ಮಾಡುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಕುರಾನ್ ಸರ್ಕಲ್ ವಾಟ್ಸ್‌ಆ್ಯಪ್ ಗ್ರೂಪ್ :

    ಐಸಿಸ್ ಬಲವರ್ಧನೆ ಕುರಿತು ಯುವಕರನ್ನು ಸೆಳೆಯುವ ಸಲುವಾಗಿ ಕುರಾನ್ ಸರ್ಕಲ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡಿದ್ದರು. ಉಗ್ರವಾದದ ಬಗ್ಗೆ ಅನುಕಂಪ ಇರುವ ಯುವಕರನ್ನು ಸೇರಿಸಿಕೊಂಡು ಮುಸ್ಲೀಂ ಧರ್ಮಿಯರ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ತೋರಿಸಿ ಪ್ರಚೋಧನೆ ನೀಡುತ್ತಿದ್ದರು. ಸಂದೇಶ ರವಾನೆ ಮತ್ತು ವಾಟ್ಸ್‌ಆ್ಯಪ್ ಕರೆಗಳ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.

    ರಂಗೇರಿದ ರಾಜ್ಯ ಒಕ್ಕಲಿಗರ ಸಂಘ ಚುನಾವಣೆ; ನಿರ್ದೇಶಕರ ಸ್ಥಾನಕ್ಕೆ ನಿರ್ಮಾಪಕ ಉಮಾಪತಿ ಸ್ಪರ್ಧೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts