More

    ಮರವಂತೆ ಬಂದರು ಅಭಿವೃದ್ಧಿಗೆ ಶೀಘ್ರ ಟೆಂಡರ್

    ಗಂಗೊಳ್ಳಿ: ಮರವಂತೆಯಲ್ಲಿ ಕೇರಳ ಮಾದರಿ ಹೊರಬಂದರು ನಿರ್ಮಾಣ ಕಾರ್ಯ ನಡೆದಿದ್ದು, ಈ ಬಂದರನ್ನು ತಾಂತ್ರಿಕವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ 85 ಕೋಟಿ ರೂಪಾಯಿ ಮೀಸಲಿರಿಸಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಪ್ರಾರಂಭಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೀನುಗಾರಿಕಾ ಸಚಿವರನ್ನು ಕರೆಸಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

    ಮರವಂತೆ ಹೊರಬಂದರು ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಯ ನೀಲಿ ನಕಾಶೆ ವೀಕ್ಷಿಸಿ ಮಾತನಾಡಿದರು.

    ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರೂ, ದೇಶದ ರಕ್ಷಣೆ ಜತೆಗೆ ಗ್ರಾಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಜಲಜೀವನ ಮಿಷನ್ ಅಡಿಯಲ್ಲಿ ದೊಡ್ಡ ಅನುದಾನ ನೀಡಿದ್ದು, ಆತ್ಮನಿರ್ಭರ್ ಯೋಜನೆಯಡಿ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡಿದೆ. ಮುಂದಿನ ದಿನಗಳಲ್ಲಿ ಮೀನುಗಾರರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

    ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಮರವಂತೆ ಹೊರಬಂದರು ಎರಡನೇ ಹಂತದ ಕಾಮಗಾರಿಗೆ 85 ಕೋಟಿ ಮತ್ತು ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣಕ್ಕೆ 12 ಕೋಟಿ ಹಾಗೂ ಕೊಡೇರಿ ಬಂದರು ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಕುಡಿಯುವ ನೀರಿನ ಯೋಜನೆಗೆ 550 ಕೋಟಿ ರೂ. ಮಂಜೂರಾಗಿದೆ ಎಂದರು.

    ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ರಾಜಪ್ಪ, ತಾಂತ್ರಿಕ ಸಲಹೆಗಾರ ರಮೇಶ, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ಬೈಂದೂರು ತಹಸೀಲ್ದಾರ್ ಬಸಪ್ಪ ಪೂಜಾರ್, ಬಂದರು ಇಲಾಖೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಚಂದ್ರಶೇಖರ, ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಚೇಗೌಡ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿಪಂ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ತಾಪಂ ಸದಸ್ಯರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಸ್ಥಳೀಯ ಮೀನುಗಾರರ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮತ್ತು ರಾಜಪ್ಪ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts