More

    ಕೊಡ ನೀರಿಗೆ ಸರದಿ ಸಾಲು

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನ ಜೋಯಿಸರಹರಳಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಶುರುವಾಗಿದ್ದು, ಗ್ರಾಮಸ್ಥರು ಒಂದು ಕೊಡ ನೀರಿಗಾಗಿ ಕಿಲೋಮೀಟರ್​ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ವಣವಾಗಿದೆ.

    ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ನೀರಿಗಾಗಿ ಪರದಾಡುವ ಸ್ಥಿತಿ ಬಂದಿರುವುದು ಗ್ರಾಮಸ್ಥರಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ. ಬ್ಯಾಡಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 5 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಜನರು ನಿತ್ಯದ ಕಾಯಕ ಬಿಟ್ಟು ಒಂದು ಕೊಡ ನೀರಿಗಾಗಿ ಸರದಿ ಸಾಲಿನಲ್ಲಿ ತಾಸುಗಟ್ಟಲೆ ನಿಲ್ಲುವ ಅನಿವಾರ್ಯತೆ ಉಂಟಾಗಿದೆ.

    ಈ ಭಾಗದಲ್ಲಿ ನೂರಾರು ಅಡಿ ಆಳದವರೆಗೆ ಬೋರ್​ವೆಲ್ ಕೊರೆಯಿಸಿದರೂ ನೀರು ದೊರೆಯುತ್ತಿಲ್ಲ. ಅಕ್ಕಪಕ್ಕದ ಗ್ರಾಮದ ಬಳಿ ಬೋರ್​ವೆಲ್ ಕೊರೆಯಿಸಿ ನೀರು ಪೂರೈಕೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ದಿನ ಬೆಳಗಾದರೆ ನೀರು ಹಿಡಿದುಕೊಳ್ಳಲು ಸರದಿ ಸಾಲಿನಲ್ಲಿ ನಿಂತುಕೊಳ್ಳಬೇಕಾಗಿದೆ.

    ಬತ್ತಿದ ಬೋರ್​ವೆಲ್​ಗಳು: ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಉದ್ದೇಶದಿಂದ 18ರಿಂದ 20 ಬೋರ್​ವೆಲ್​ಗಳನ್ನು ಕೊರೆಯಿಸಲಾಗಿದೆ. ಆದರೆ, ನೀರಿನ ಮಟ್ಟ ಕಡಿಮೆಯಿರುವ ಪರಿಣಾಮ ಎಲ್ಲ ಬೋರ್​ವೆಲ್​ಗಳಲ್ಲಿ ನೀರು ಕಡಿಮೆಯಾಗಿದೆ. ಕೇವಲ 2-3 ಬೋರ್​ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವುಗಳಿಂದ ಕೇವಲ ಅರ್ಧದಿಂದ ಒಂದು ಇಂಚಿನಷ್ಟು ನೀರು ಮಾತ್ರ ಬರುತ್ತಿದೆ. ಇದರಿಂದ ನೀರು ಸಮರ್ಪಕವಾಗಿ ದೊರೆಯದೆ ಜನತೆ ಕಂಗಾಲಾಗಿದ್ದಾರೆ.

    ಶುದ್ಧ ನೀರು ಇಲ್ಲ

    ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ನಿರ್ವಿುಸಲಾಗಿದೆ. ನೀರು ಲಭ್ಯವಿದ್ದ ಸಮಯದಲ್ಲಿ ಎರಡು ಘಟಕದಲ್ಲಿಯೂ ನೀರಿನ ಸೌಲಭ್ಯವಿತ್ತು. ಆದರೀಗ ನೀರಿನ ಲಭ್ಯತೆಯಿಲ್ಲದ ಕಾರಣ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಬಂದ್ ಆಗಿದೆ. ಇದರಿಂದ ಗ್ರಾಮಸ್ಥರು ಬೋರ್​ವೆಲ್ ನೀರು ಕುಡಿಯಬೇಕಾದ ಸ್ಥಿತಿಯಿದೆ. ಇಲ್ಲವಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ನೀರು ತರಬೇಕು.

    ಗ್ರಾಮದಲ್ಲಿ ಬಹಳಷ್ಟು ಜನತೆ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಾರೆ. ಆದರೆ, ಕುಡಿಯುವ ನೀರು ತರಲು ನಿತ್ಯವೂ ನಲ್ಲಿ ಕಟ್ಟೆ ಎದುರು ಗಂಟೆಗಟ್ಟಲೆ ಕಾಯ್ದು ನಿಲ್ಲಬೇಕಾಗಿದೆ. ಹೀಗಾದರೆ ಕೂಲಿ ಕೆಲಸಕ್ಕೆ ಹೋಗುವುದಾದರೂ ಹೇಗೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

    ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಒಂದು ಕೊಡ ನೀರಿಗಾಗಿ ಎರಡ್ಮೂರು ಗಂಟೆ ಕಾಯ್ದು ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಆದ್ದರಿಂದ ಕ್ಷೇತ್ರದ ಶಾಸಕರು, ತಾಲೂಕು ಆಡಳಿತ ಕೂಡಲೆ ಸೂಕ್ತ ಕ್ರಮ ಕೈಗೊಂಡು ಸಮರ್ಪಕವಾಗಿ ನೀರು ಪೂರೈಸಬೇಕು.

    | ರಮೇಶ ಎಂ., ಗ್ರಾಮಸ್ಥ

    ಜೋಯಿಸರಹರಳಹಳ್ಳಿಯಲ್ಲಿ ಖಾಸಗಿ ಬೋರ್​ವೆಲ್​ಗಳಲ್ಲೂ ನೀರು ಲಭ್ಯವಾಗದ ಕಾರಣ ತೊಂದರೆಯಾಗಿದೆ. ಹೊಸದಾಗಿ ಕೊರೆಯಿಸಿದ ಬೋರ್​ವೆಲ್​ನಲ್ಲಿ ನೀರು ದೊರೆಯುತ್ತಿಲ್ಲ. ಸದ್ಯ ಚಾಲ್ತಿಯಲ್ಲಿರುವ ಕೆಲ ಬೋರ್​ವೆಲ್​ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಸಮಸ್ಯೆ ಅಧಿಕವಾದರೆ ಬೇರೆಡೆಯಿಂದ ನೀರು ಪೂರೈಸಲು ಕ್ರಮ ಜರುಗಿಸಲಾಗುವುದು.

    | ಟಿ.ಆರ್. ಮಲ್ಲಾಡದ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts