More

    ಹಾರ್ಡ್ ಕ್ವಾರಂಟೈನ್‌ಗೆ ಟೀಮ್ ಇಂಡಿಯಾ ಹಿಂದೇಟು, ತೂಗುಯ್ಯಲೆಯಲ್ಲಿ ಬ್ರಿಸ್ಬೇನ್ ಟೆಸ್ಟ್

    ಮೆಲ್ಬೋರ್ನ್: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಬ್ರಿಸ್ಬೇನ್‌ನಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್‌ಗೆ ಒಳಪಡಬೇಕಾಗಿರುವ ಬಗ್ಗೆ ಭಾರತ ತಂಡ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಗಾಬಾ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯ ನಡೆಯುವ ಬಗ್ಗೆಯೇ ಅನುಮಾನ ಮೂಡಿದೆ.

    ಸರಣಿಯ 3ನೇ ಟೆಸ್ಟ್ ಗುರುವಾರದಿಂದ ಸಿಡ್ನಿಯಲ್ಲಿ ನಡೆದರೆ, ಅಂತಿಮ ಟೆಸ್ಟ್ ಬ್ರಿಸ್ಬೇನ್‌ನಲ್ಲಿ ಜನವರಿ 15ರಿಂದ ನಡೆಯಬೇಕಿದೆ. ಆದರೆ ಕಠಿಣ ಕ್ವಾರಂಟೈನ್‌ಗೆ ಒಳಪಡಲು ನಿರಾಕರಿಸಿ ಭಾರತ ತಂಡ ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕಿದರೆ ಪಂದ್ಯ ತೂಗುಯ್ಯಲೆಯಲ್ಲಿ ಸಿಲುಕಲಿದೆ. ಆಗ ಸಿಡ್ನಿಯಲ್ಲೇ ಅಂತಿಮ ಟೆಸ್ಟ್ ಪಂದ್ಯವೂ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

    ನ್ಯೂ ಸೌತ್ ವೇಲ್ಸ್ (ಸಿಡ್ನಿ) ಮತ್ತು ಕ್ವೀನ್ಸ್‌ಲ್ಯಾಂಡ್ (ಬ್ರಿಸ್ಬೇನ್) ರಾಜ್ಯ ಸರ್ಕಾರಗಳ ಗಡಿ ನಿರ್ಬಂಧಗಳು ಈ ಸಮಸ್ಯೆಗೆ ಮೂಲ ಕಾರಣವಾಗಿವೆ. ಆದರೆ ಭಾರತ ತಂಡಕ್ಕೆ ಹಾರ್ಡ್ ಕ್ವಾರಂಟೈನ್‌ನಿಂದ ವಿನಾಯಿತಿ ದೊರೆತರಷ್ಟೇ ಬ್ರಿಸ್ಬೇನ್‌ಗೆ ಪ್ರಯಾಣಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಬಿಸಿಸಿಐ, ಪಂದ್ಯವನ್ನು ಬ್ರಿಸ್ಬೇನ್‌ಗೆ ಬದಲಾಗಿ ಸಿಡ್ನಿಯಲ್ಲೇ ಆಡಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಇನ್ನೂ ಅಧಿಕೃತವಾಗಿ ಮನವಿ ಸಲ್ಲಿಸಿಲ್ಲ. ಹೀಗಾಗಿ ಸದ್ಯದ ಮಾಹಿತಿ ಪ್ರಕಾರ, ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಕೆಲ ದಿನಗಳ ಕಾಲ ಕಾದುನೋಡಲಾಗುತ್ತದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

    ಇದನ್ನೂ ಓದಿ: ಮಗುವಿನ ಆಟಿಕೆ ಖರೀದಿಗಾಗಿ ಬಯೋ-ಬಬಲ್ ಬ್ರೇಕ್ ಮಾಡಿದ್ದರೇ ಕೊಹ್ಲಿ, ಪಾಂಡ್ಯ?

    ನಿಯಮ ಪಾಲಿಸುವುದಾದರೆ ಮಾತ್ರ ಬನ್ನಿ!
    ಭಾರತ ತಂಡ ಬ್ರಿಸ್ಬೇನ್‌ಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಕ್ವೀನ್ಸ್‌ಲ್ಯಾಂಡ್‌ನ ಆರೋಗ್ಯ ಸಚಿವೆ ರೋಸ್ ಬೇಟ್ಸ್, ‘ಭಾರತೀಯರು ನಮ್ಮ ನಿಯಮಗಳನ್ನು ಪಾಲಿಸಿ ಆಡುವುದಾದರೆ ಮಾತ್ರ ಬನ್ನಿ, ಇಲ್ಲದಿದ್ದರೆ ಬರಬೇಡಿ’ ಎಂದು ಕಟುವಾಗಿ ಹೇಳಿದ್ದಾರೆ. ಕ್ವೀನ್ಸ್‌ಲ್ಯಾಂಡ್ ಕ್ರೀಡಾ ಸಚಿವ ಟಿಮ್ ಮಂಡರ್ ಕೂಡ, ಭಾರತ ತಂಡಕ್ಕೆ ಮಾರ್ಗಸೂಚಿ ಸಡಿಲಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಇಂದು ಸಿಡ್ನಿಗೆ ಪ್ರಯಾಣ
    ಭಾರತ ತಂಡದ ಆಟಗಾರರು ಸೋಮವಾರ ಮೆಲ್ಬೋರ್ನ್‌ನಿಂದ ಸಿಡ್ನಿಗೆ ಪ್ರಯಾಣಿಸಲಿದ್ದಾರೆ. ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಯ ಆರೋಪದ ಮೇರೆಗೆ ಮುನ್ನಚ್ಚರಿಕೆಯ ಕ್ರಮವಾಗಿ ಐಸೋಲೇಷನ್‌ನಲ್ಲಿರುವ ಉಪನಾಯಕ ರೋಹಿತ್ ಶರ್ಮ ಸಹಿತ ಐವರು ಕ್ರಿಕೆಟಿಗರ ಪ್ರಯಾಣಕ್ಕೂ ಅವಕಾಶ ನೀಡಲಾಗಿದ್ದು, ತಂಡದ ಇತರ ಸದಸ್ಯರ ಜತೆಗೆ ಅವರೂ ವಿಶೇಷ ವಿಮಾನದಲ್ಲಿ ಸಿಡ್ನಿಗೆ ತೆರಳಲಿದ್ದಾರೆ. ಬಯೋ-ಬಬಲ್ ಉಲ್ಲಂಘನೆ ಪ್ರಕರಣದ ಬಗ್ಗೆ ತನಿಖೆ ಮುಂದುರಿದಿರುವ ನಡುವೆ ರೋಹಿತ್, ರಿಷಭ್ ಪಂತ್, ಶುಭಮಾನ್ ಗಿಲ್, ನವ್‌ದೀಪ್ ಸೈನಿ ಮತ್ತು ಪೃಥ್ವಿ ಷಾಗೆ ಪ್ರಯಾಣ ನಿರ್ಬಂಧ ಹೇಳಲಾಗಿಲ್ಲ. ರೋಹಿತ್, ಪಂತ್, ಗಿಲ್ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಡುವ ನಿರೀಕ್ಷೆಯೂ ಇದೆ. ಪ್ರಕರಣವನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿಭಾಯಿಸಿದ ರೀತಿಯ ಬಗ್ಗೆ ಟೀಮ್ ಇಂಡಿಯಾ ಅಸಮಾಧಾನಗೊಂಡಿದೆ ಎಂದೂ ಹೇಳಲಾಗಿದೆ.

    ಅಭಿಮಾನಿ ವಿರುದ್ಧ ಅಸಮಾಧಾನ
    ರಿಷಭ್ ಪಂತ್ ತನ್ನನ್ನು ತಬ್ಬಿಕೊಂಡಿದ್ದರು ಎಂದು ಸುಳ್ಳು ಹೇಳಿರುವ ಮತ್ತು ಅನುಮತಿ ಇಲ್ಲದೆ ವಿಡಿಯೋ ತೆಗೆದಿದ್ದಲ್ಲದೆ, ಆಟಗಾರರ ಬಿಲ್ ಪಾವತಿಸಿ ಪ್ರಚಾರಕ್ಕಾಗಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಟೀಮ್ ಇಂಡಿಯಾಗೆ ಸಂಕಷ್ಟ ತಂದಿರುವ ನವಲ್‌ದೀಪ್ ಸಿಂಗ್ ಎಂಬ ಕ್ರಿಕೆಟ್ ಪ್ರೇಮಿಯ ವಿರುದ್ಧ ಬಿಸಿಸಿಐ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಸುಳ್ಳು ಹೇಳಿ, ನಂತರ ಹೇಳಿಕೆ ಬದಲಿಸಿದ ವ್ಯಕ್ತಿಯ ವಿಡಿಯೋ ಆಧರಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ನಿರ್ಧಾರ ಕೈಗೊಳ್ಳುವುದು ಸರಿ ಎನಿಸದು ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

    ಮಳೆಯಿಂದಾಗಿ ಒಳಾಂಗಣ ಪ್ರವೇಶ
    ಕೋವಿಡ್-19 ಮಾರ್ಗಸೂಚಿಯ ಪ್ರಕಾರ, ಬಯೋ-ಬಬಲ್‌ನಲ್ಲಿರುವ ಕ್ರಿಕೆಟಿಗರು ಒಳಾಂಗಣ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಅವಕಾಶವಿಲ್ಲ. ಆದರೆ ಮಳೆಯಿಂದಾಗಿ ಆಟಗಾರರು ರೆಸ್ಟೋರೆಂಟ್‌ನೊಳಗೆ ಪ್ರವೇಶಿಸಿದ್ದರು ಎನ್ನಲಾಗಿದೆ. ಮಾರ್ಗಸೂಚಿಗಳ ಬಗ್ಗೆ ಆಟಗಾರರಿಗೆ ಸರಿಯಾಗಿ ಮಾಹಿತಿ ನೀಡದಿರುವ ತಂಡದ ಆಡಳಿತಾತ್ಮಕ ಮ್ಯಾನೇಜರ್ ಗಿರೀಶ್ ಡೋಂಗ್ರೆ ವಿರುದ್ಧ ಬಿಸಿಸಿಐ ಇದೀಗ ಸಿಟ್ಟಾಗಿದೆ. ಆಟಗಾರರು ಮಾರ್ಗಸೂಚಿಯ ಪಟ್ಟಿ ಹಿಡಿದುಕೊಂಡೇ ಸುತ್ತಾಡುವುದಿಲ್ಲ. ಅವರಿಗೆ ಈ ಬಗ್ಗೆ ಆಗಾಗ ಎಚ್ಚರಿಸುವುದು ಮ್ಯಾನೇಜರ್ ಜವಾಬ್ದಾರಿ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

    ಅಭ್ಯಾಸಕ್ಕೆ ಮಳೆ ಅಡ್ಡಿ
    ಟೀಮ್ ಇಂಡಿಯಾ ಆಟಗಾರರು ಭಾನುವಾರ ಎಂಸಿಜಿಯಲ್ಲಿ ನಡೆಸಬೇಕಾಗಿದ್ದ ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದ ಆಟಗಾರರು ಒಳಾಂಗಣದಲ್ಲೇ ತರಬೇತಿ ನಡೆಸಬೇಕಾಯಿತು. ಹೊರಾಂಗಣ ಅಭ್ಯಾಸ ಸಾಧ್ಯವಾಗದ ಹಿನ್ನೆಲೆಯಲ್ಲಿ ಆಟಗಾರರು ಜಿಮ್‌ನಲ್ಲೇ ಹೆಚ್ಚಿನ ಸಮಯ ಕಳೆದರು.

    ಬಯೋ-ಬಬಲ್ ಬ್ರೇಕ್ ಬೆನ್ನಲ್ಲೇ ಟೀಮ್ ಇಂಡಿಯಾವನ್ನು ಕಾಡುತ್ತಿದೆ ಬೀಫ್​ ವಿವಾದ!

    ಸೌರವ್ ಗಂಗೂಲಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ

    ಬಿಸ್ಕಿಟ್ ಜಾಹೀರಾತಿನಲ್ಲಿ ನಟಿಸಿ ಗಮನಸೆಳೆದ ಕ್ರಿಕೆಟ್ ದಿಗ್ಗಜನ ಪುತ್ರಿ!

    ವಿಜಯವಾಣಿ ಸಂದರ್ಶನ | ಹೊಸ ವರ್ಷದ ಹೊಸ ಜವಾಬ್ದಾರಿಗೆ ಸಜ್ಜಾಗಿರುವೆ, ದೇವದತ್ ಪಡಿಕಲ್ ವಿಶ್ವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts