More

    ಜನಧನಕ್ಕಾಗಿ ಬ್ಯಾಂಕ್‌ಗಳ ಮುಂದೆ ಸಾಲು, ಸಾಮಾಜಿಕ ಅಂತರ ನಿಯಮ ಉಲ್ಲಂಘನೆ

    ಬಂಟ್ವಾಳ/ಕಡಬ: ಪುತ್ತೂರು, ಬಂಟ್ವಾಳ, ಕಡಬ ಮತ್ತಿತರ ಕಡೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಂಭಾಗ ಸೋಮವಾರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ.

    ಜನಧನ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ಹೆಚ್ಚಿನ ಮಹಿಳೆಯರು ಆಗಮಿಸಿದ್ದರಿಂದ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಪಿಂಚಣಿ ಹಣ ಪಡೆಯಲು ಮಹಿಳೆಯರು, ವೃದ್ಧರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಬ್ಯಾಂಕ್‌ನಲ್ಲಿರುವ ಹಣ ನಗದೀಕರಿಸುವ ನಿಟ್ಟಿನಲ್ಲೂ ಜನ ಬ್ಯಾಂಕ್‌ಗಳತ್ತ ಧಾವಿಸುತ್ತಿದ್ದಾರೆ.
    ಕಳೆದ ವಾರ ಕೆಲದಿನಗಳು ಮಾತ್ರ ಬ್ಯಾಂಕ್‌ಗಳು ತೆರೆದಿದ್ದು, ಏ.14ರಂದು ಮತ್ತೆ ಸರ್ಕಾರಿ ರಜೆ ಇರುವುದರಿಂದ ಜನತೆ ಬ್ಯಾಂಕ್‌ಗಳತ್ತ ಆಗಮಿಸಿದರು.

    ಜನಧನ್ ಖಾತೆ ಹಣ ವಾಪಾಸ್ ಹೋಗಲ್ಲ
    ಮಂಗಳೂರು: ಮಹಿಳೆಯರ ಜನಧನ್ ಖಾತೆಗೆ ಈ ತಿಂಗಳಿನಿಂದ ಮುಂದಿನ ಮೂರು ತಿಂಗಳು ಬರಲಿರುವ ತಲಾ 500 ರೂ. ನೆರವಿನ ಮೊತ್ತ ವಾಪಸ್ ಸರ್ಕಾರಕ್ಕೆ ಹೋಗುವುದಿಲ್ಲ.

    ತಕ್ಷಣ ಈ ಮೊತ್ತವನ್ನು ಫಲಾನುಭವಿಗಳು ಪಡೆಯದಿದ್ದರೆ ಹಣ ವಾಪಸ್ ಹೋಗುತ್ತದೆ ಎಂದು ಕೆಲವರು ತಪ್ಪು ಅಭಿಪ್ರಾಯಗಳನ್ನು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಸತ್ಯಾಂಶವಿಲ್ಲ. ಜನರು ತಮಗೆ ಅಗತ್ಯವಿರುವ ಸಂದರ್ಭ ಹಣ ಪಡೆಯುವಂತೆ ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಅನಿವಾರ್ಯ ಸಂದರ್ಭ ಮಾತ್ರ ತೆರಳುವುದು ಸೂಕ್ತ. ಎಟಿಎಂ, ಪೇಟಿಎಂ, ಗೂಗಲ್ ಪೇ ಮುಂತಾದ ಪರ್ಯಾಯ ವ್ಯವಹಾರ ಮಾರ್ಗಗಳನ್ನು ಬಳಸುವಂತೆ ಅವರು ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.16 ಲಕ್ಷ ಜನಧನ್ ಖಾತೆಗಳಿದ್ದು, ಎಲ್ಲ ಮಹಿಳಾ ಖಾತೆಗಳಿಗೆ ಹಣ ಬಂದಿದೆ. ಈ ಬಗ್ಗೆ ದೂರುಗಳು ಬಂದಿಲ್ಲ ಎಂದವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts