More

    ಕಾಫಿ ಕೊಯ್ಲು, ಸಂಸ್ಕರಣೆಗೆ ಮಳೆ ಅಡ್ಡಿ

    ಆಲ್ದೂರು (ಚಿಕ್ಕಮಗಳೂರು ತಾ.): ಮಲೆನಾಡಲ್ಲಿ ಕಾಫಿ ಕೊಯ್ಲು ಆರಂಭವಾಗಿದೆ. ಆದರೆ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಬೆಳೆಗಾರರ ನೆಮ್ಮದಿ ಹಾಳುಮಾಡಿದೆ.

    ಡಿಸೆಂಬರ್ ಕಾಫಿ ಕೊಯ್ಲು ಆರಂಭವಾಗುವ ಸಮಯ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮನೆಗೆ ಕೊಂಡೊಯ್ಯುವ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ಈ ವರ್ಷದ ಕಾಫಿ ಫಸಲನ್ನು ಮಣ್ಣುಪಾಲು ಮಾಡಿ ಬೆಳೆಗಾರರನ್ನು ಚಿಂತೆಗೆ ತಳ್ಳಿದೆ.

    ಹವಾಮಾನ ವೈಪರೀತ್ಯದಿಂದ ಪ್ರತಿದಿನ ಮೋಡಕವಿದ ವಾತಾವರಣ, ತುಂತುರು ಮಳೆ, ವಿಪರೀತ ಶೀತ ಗಾಳಿ ಬೀಸುತ್ತಿದೆ. ಇದರಿಂದ ಕಾಫಿ ಕಟಾವು ಮತ್ತು ಒಣಗಿಸುವ ಪ್ರಕ್ರಿಯೆಗೆ ತೊಂದರೆಯಾಗಿದೆ.

    ಐದಾರು ವರ್ಷಗಳಿಂದ ಕಾಫಿ ದರ ಸ್ಥಿರವಾಗಿಲ್ಲ. ಈ ನಡುವೆ ಮಳೆ ಬರುತ್ತಿರುವುದು ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ಈ ಬಾರಿ ಆರಂಭದಿಂದಲೇ 10,500 ರೂ. ಧಾರಣೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಳೆಯಿಂದಾಗಿ ಹಣ್ಣಾಗಿ ನಿಂತಿರುವ ಕಾಫಿ ಉದುರಲು ಪ್ರಾರಂಭಿಸಿದೆ. ಕಟಾವು ಮಾಡಿದ ಕಾಫಿಯನ್ನು ಪಲ್ಪಿಂಗ್ ಮಾಡಿ ಒಣಹಾಕಲು ಬಿಸಿಲು ಬೀಳುತ್ತಿಲ್ಲ. ಅಲ್ಲದೆ ತುಂತುರು ಮಳೆಯಾಗುತ್ತಿದೆ. ಕಾಫಿ ಬೇಳೆ ಶೀತದಿಂದ ಕಪ್ಪಾಗಿ ತನ್ನ ನೈಜ ಬಣ್ಣದ ಜತೆಗೆ ಗುಣಮಟ್ಟವನ್ನೂ ಕಳೆದುಕೊಳ್ಳುತ್ತದೆ. ಇದರಿಂದ ಕಾಫಿಗೆ ಉತ್ತಮ ಧಾರಣೆ ದೊರಕುವುದು ಕಷ್ಟ.

    ಹವಾಮಾನ ವೈಪರೀತ್ಯ, ಕಾರ್ವಿುಕರ ಕೊರತೆ, ರಸಗೊಬ್ಬರ ದರ ಏರಿಕೆಯಿಂದ ತೋಟಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಬೆಳೆಗಾರರು ವರ್ಷದಿಂದ ವರ್ಷಕ್ಕೆ ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ರೋಬಸ್ಟಾ ಕಾಫಿ ಕೊಯ್ಲು ಜನವರಿ ನಂತರ ಆರಂಭವಾಗುವುದರಿಂದ ಈ ಮಳೆಯಿಂದ ತೊಂದರೆಯಿಲ್ಲ ಎನ್ನುತ್ತಾರೆ ಕಾಫಿ ಬೆಳೆಗಾರ ಬಾಪು ದಿವ್ಯಪ್ರಸಾದ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts