More

    ಪ್ರಾಚೀನ ಕೆರೆಗಳಿಗೆ ಕಾಯಕಲ್ಪ: ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ, ಬನ್ನೂರಿನ ಅಲುಂಬುಡ ಕೆರೆಗೆ ಹೊಸರೂಪ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಪುತ್ತೂರಿನ ಐತಿಹಾಸಿಕ ಪ್ರಮುಖ ಕೆರೆಗಳಾದ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ, ಬನ್ನೂರಿನ ಅಲುಂಬುಡ ಪ್ರಾಚೀನ ಕೆರೆಗೆ ಹೊಸರೂಪ ನೀಡಲು ನಗರಸಭೆ ನಿರ್ಧರಿಸಿದೆ.

    ಕೆರೆಗಳ ಅಭಿವೃದ್ಧಿಗೆ ನಗರವಾಸಿಗಳಿಂದ ಸಂಗ್ರಹಿಸಲಾದ ಶುಲ್ಕ ಈವರೆಗೆ ಬಳಕೆಯಾಗದ ಬಗ್ಗೆ ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಪಸ್ವರ ಕೇಳಿಬಂದಿತ್ತು. ಈ ಹಿನ್ನೆಲೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಕೆರೆ ಅಭಿವೃದ್ಧಿ ಯೋಜನೆಯಡಿ ತಲಾ 40 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ನಗರ ವ್ಯಾಪ್ತಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪ್ರಾಚೀನ ಪುಷ್ಕರಿಣಿ ಮತ್ತು ಬನ್ನೂರಿನ ಅಲುಂಬುಡ ಎಂಬಲ್ಲಿರುವ ಪ್ರಾಚೀನ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ.

    ಕೆರೆ ಮಾಯವಾಗುವ ಭೀತಿ: ಪುರಾತನ ಕಾಲದಿಂದಲೂ ಪುತ್ತೂರಿನ ಕೃಷಿ ಹಾಗೂ ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿದ್ದ ಅಲುಂಬುಡ ಕೆರೆ ಬನ್ನೂರು ಗ್ರಾಮದಲ್ಲಿದ್ದು, 84 ಸೆಂಟ್ಸ್ ವಿಸ್ತೀರ್ಣ ಹೊಂದಿದೆ. 8 ವರ್ಷಗಳ ಹಿಂದೆ ಈ ಕೆರೆಯ ಪುನಶ್ಚೇತನಕ್ಕೆ 25 ಲಕ್ಷ ರೂ. ಮಂಜೂರಾಗಿತ್ತು. ಕಾಮಗಾರಿ ವೈಜ್ಞಾನಿಕವಾಗಿ ನಡೆಯದ ಕಾರಣ ಕೆರೆ ಮತ್ತೆ ದುಸ್ಥಿತಿ ತಲುಪಿದ್ದು, ಇದೇ ರೀತಿ ಬಿಟ್ಟರೆ ಇನ್ನೊಂದು ದಶಕದಲ್ಲಿ ಕೆರೆಯೇ ಮಾಯವಾಗುವ ಭೀತಿ ಇದೆ. ಪುತ್ತೂರು ನಗರ ಮಧ್ಯದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ ಪ್ರಾಚೀನ ಇತಿಹಾಸ ಹೊಂದಿದ್ದು, ಅಂತರ್ಜಲ ಮಟ್ಟದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತಾ ಬಂದಿದೆ.

    ಕೆರೆ ಶುಲ್ಕ ಸಂಗ್ರಹ: ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ಕೆರೆ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ನಗರಸಭೆ ಮೂಲಕ ಕೆರೆಗಳ ಅಭಿವೃದ್ಧಿಗೆ ಬಳಸಬೇಕೆಂಬ ನಿಯಮವಿದೆ. ಅದರಂತೆ ಈಗ ಪುತ್ತೂರು ನಗರಸಭಾ ವ್ಯಾಪ್ತಿಯ 2 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಹೂಳೆತ್ತಿ, ಸುತ್ತಲ ಆವರಣ, ತಡೆಗೋಡೆಗಳನ್ನು ಭದ್ರಗೊಳಿಸುವುದು, ಕೆರೆಯ ಪೂರ್ಣ ಭಾಗಕ್ಕೆ ಆವರಣ ನಿರ್ಮಿಸುವುದು ಇವೆಲ್ಲ ಯೋಜನೆಯಲ್ಲಿ ಸೇರಿದೆ. ಪುತ್ತೂರಿನ ಐತಿಹಾಸಿಕ ಪ್ರಮುಖ ಕೆರೆಗಳಾದ ಮಹಾಲಿಂಗೇಶ್ವರ ದೇವಸ್ಥಾನದ ಪ್ರಾಚೀನ ಪುಷ್ಕರಿಣಿ ಹಾಗೂ ಬನ್ನೂರಿನ ಅಲುಂಬುಡ ಪ್ರಾಚೀನ ಕೆರೆಗಳ ಮಣ್ಣು ಹಾಗೂ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗದ ವರದಿ ಶೀಘ್ರ ಬರಲಿದೆ. ಈ ಮೂಲಕ ನೀರಿನ ಗುಣಮಟ್ಟದ ಖಾತ್ರಿಯಾದ ನಂತರ ಪುನಶ್ಚೇತನ ಕಾಮಗಾರಿ ನಡೆಯಲಿದೆ ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ತಿಳಿಸಿದ್ದಾರೆ.

    ನಗರ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಪರವಾನಗಿಗೆ ಅರ್ಜಿ ಸಲ್ಲಿಸುವಾಗ ಕೆರೆ ದುರಸ್ತಿ ಕರ ಸೆಂಟ್ಸ್‌ಗೆ ಒಂದು ಸಾವಿರ ರೂ.ಗಳಂತೆ ಸಂಗ್ರಹಿಸಲಾಗುತ್ತದೆ. ಈ ಹಣದಲ್ಲಿ ಪ್ರಾಚೀನ ಕೆರೆಗಳನ್ನು ಪುನಶ್ಚೇತನ ಮಾಡಿದರೆ ಆ ವ್ಯಾಪ್ತಿಯ ತುರ್ತು ನೀರಿನ ಅವಶ್ಯಕತೆ ಪೂರೈಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನ 2 ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
    -ಜೀವಂಧರ್ ಜೈನ್, ಪುತ್ತೂರು ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts