More

    ಸೃಷ್ಟಿಯ ಸತ್ಯ ಅರಿತುಕೊಳ್ಳುವ ಪ್ರಯತ್ನ: ಪುತ್ತೂರು ಹವ್ಯಕ ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಯ

    ಪುತ್ತೂರು: ನಾವು ಪೂರ್ವಜನ್ಮದ ಪುಣ್ಯದ ಫಲದಿಂದ ಮನುಷ್ಯ ಜನ್ಮ ತೆಳೆದಿದ್ದೇವೆ. ಜೀವನದಲ್ಲಿ ನಮ್ಮ ಸೃಷ್ಟಿಯ ಸತ್ಯ ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

    ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು ಭಾರತಿ ನಗರದಲ್ಲಿ ಭಾನುವಾರ ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಿರ್ಮಿಸಲಾದ ಹವ್ಯಕ ಸಭಾಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಹಲವಾರು ಆಕ್ರಮಣ ಎದುರಿಸಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ 70 ವರ್ಷ ಕಳೆದರೂ ಇಲ್ಲಿನ ವೈಚಾರಿಕ ಆಳ ವಿಸ್ತರಣೆಗೊಂಡಿಲ್ಲ. ವೈಚಾರಿಕತೆಯ ಬಗ್ಗೆ ಅಧ್ಯಯನ ಪ್ರವೃತ್ತಿ ಬೆಳೆಯಬೇಕು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಿಂದ ವೈಚಾರಿಕ ಚಿಂತನೆ ಹೆಚ್ಚಿಸುವ ಪ್ರಯತ್ನ ನಡೆಯಲಿದೆ ಎಂದರು.

    ಆಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಹಿಂದು ಸಮಾಜದ ಪ್ರತಿಯೊಂದು ಸಮುದಾಯಗಳು ತಮ್ಮ ವೈಶಿಷ್ಟೃ ಕಾಪಾಡಿಕೊಂಡು ಸಮಗ್ರ ಹಿಂದು ಸಮಾಜ ಬೆಳೆಯಲು ಕೊಡುಗೆ ನೀಡಬೇಕು. ಸಮಾಜದ ಯಾವುದೇ ಸಮುದಾಯಗಳು ತಮ್ಮತನ ಮರೆತರೆ ಹಿಂದು ಸಮಾಜಕ್ಕೆ ಅಸ್ತಿತ್ವ ಇಲ್ಲ. ಆಯಾ ಸಮಾಜ ತನ್ನ ವೈಶಿಷ್ಟ್ಯಗಳನ್ನು, ನಡೆ, ನುಡಿ, ಆಚಾರ ವಿಚಾರಗಳನ್ನು ಕಾಪಾಡಿಕೊಂಡು ಬಂದರೆ ಮಾತ್ರ ಹಿಂದು ಸಮಾಜ ಎದ್ದು ನಿಲ್ಲಲು ಸಾಧ್ಯ ಎಂದರು.

    ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಕೆ.ಜೀವಂಧರ ಜೈನ್, ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕೇಶವಪ್ರಸಾದ್ ಮುಳಿಯ, ಹವ್ಯಕ ಸಭಾಭವನ ಸಮಿತಿಯ ಪುಳು ಈಶ್ವರ ಭಟ್ ಉಪಸ್ಥಿತರಿದ್ದರು.

    ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ವೇಣು ವಿಶ್ವೇಶ್ವರ ಸಂಪ ಸ್ವಾಗತಿಸಿ, ಹವ್ಯಕ ಸಭಾಭವನ ಸಮಿತಿಯ ಬೋನಂತಾಯ ಶಿವಶಂಕರ ಭಟ್ ವಂದಿಸಿದರು. ವಕೀಲ ಮಹೇಶ್ ಕಜೆ ಮತ್ತು ಕೃಷ್ಣವೇಣಿ ಮುಳಿಯ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts