More

    ಗೋ ಸಂರಕ್ಷಣೆ ಪ್ರೇರೇಪಿಸುವ ಕಾರ್ಯವಾಗಲಿ

    ಗೋಕರ್ಣ: ದೇಸಿ ಗೋ ಸಾಕಣೆಯನ್ನು ಲಾಭದಾಯಕ ಮಾಡಲು ಸಾಧ್ಯ ಎನ್ನುವುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಶ್ರೀ ರಾಮಚಂದ್ರಾಪುರ ಮಠದ ಗೋ ಫಲ ಟ್ರಸ್ಟ್ ವತಿಯಿಂದ ಗೋ ಸಂರಕ್ಷಣೆಯನ್ನು ಪ್ರೇರೇಪಿಸುವ ಕಾರ್ಯವಾಗಲಿ ಎಂದು ಶ್ರೀಮಠದ ಪೀಠಾಧಿಪತಿ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನವಿತ್ತರು.

    ಇಲ್ಲಿನ ಅಶೋಕೆಯ ಶ್ರೀಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಗೋಶಾಲೆಗಳಿಗೆ ದೇಣಿಗೆಯ ಚೆಕ್ ವಿತರಿಸಿ ಅವರು ಮಾತನಾಡಿದರು.

    ಸಮಸ್ತ ರಾಜ್ಯದಲ್ಲಿ ಗೋ ಫಲ ಟ್ರಸ್ಟ್ ಗೋ ಪ್ರೇಮಿಗಳಿಗೆ ಮಾದರಿಯಾಗಿ, ಒಂದು ಮಾರ್ಗದರ್ಶಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಎಲ್ಲ ಬಗೆಯ ಗೋ ಉತ್ಪನ್ನಗಳ ತಯಾರಿಕೆಗೆ ಟ್ರಸ್ಟ್ ಕಾರ್ಯ ಯೋಜನೆ ಹಮ್ಮಿಕೊಳ್ಳುವ ಸಂಗಡ ಹೊಸ ಸಾಧ್ಯತೆಗಳ ಅನ್ವೇಷಣೆಯನ್ನು ಕೂಡ ಕೈಗೊಳ್ಳುವಂತಾಗಲಿ.

    ಈ ಎಲ್ಲ ಕಾರ್ಯ ವಿಧಾನಗಳ ಮೂಲಕ ಗವ್ಯೋತ್ಪನ್ನಗಳ ಮಾರುಕಟ್ಟೆಯ ವಿಸ್ತರಣೆಯ ಬಗ್ಗೆ ಗಮನ ಹರಿಸುವಂತಾಗಬೇಕು. ಗೋಮಯ ಮತ್ತು ಗೋಮೂತ್ರದ ಮೌಲ್ಯ ವರ್ಧನೆ ಮೂಲಕ ಶ್ರೀಮಠದ ಗೋಫಲ ಟ್ರಸ್ಟ್ ರಾಜ್ಯದಲ್ಲಿ ಗವ್ಯೋತ್ಪನ್ನಗಳ ತಯಾರಿಕೆ ಮತ್ತುಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವುದು ಹೆಮ್ಮೆಯ ವಿದ್ಯಮಾನವಾಗಿದ್ದು ಈ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯ ಶ್ಲಾಘನಾರ್ಹವಾಗಿದೆ.

    ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಲಾಭಾಂಶದ ಒಂದು ಭಾಗವನ್ನು ರಾಜ್ಯದಲ್ಲಿ ಗೋ ಸಾಕಣೆಯ ಮಹತ್ ಕಾರ್ಯ ಕೈಗೊಳ್ಳುತ್ತಿರುವ ಗೋಶಾಲೆಗಳಿಗೆ ಅವುಗಳಲ್ಲಿನ ಗೋವುಗಳ ಸಂಖ್ಯೆಯನ್ನು ಆಧರಿಸಿ ಟ್ರಸ್ಟ್ ವತಿಯಿಂದ ದೇಣೆಗೆ ವಿತರಿಸಲಾಗುತ್ತಿದೆ ಎಂದು ಶ್ರೀಗಳು ಆಶೀರ್ವದಿಸಿದರು.

    ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಭಟ್ಟ ಕೊಂಕೋಡಿ ಮಾತನಾಡಿ, ಟ್ರಸ್ಟ್ ಪ್ರಸ್ತುತ ಹಣಕಾಸು ವರ್ಷದಲ್ಲಿ 4.43 ಕೋಟಿ ರೂ. ವ್ಯವಹಾರ ನಡೆಸಿದ್ದು ಈ ಮೂಲಕ ಕಳೆದ ವರ್ಷಕ್ಕಿಂತ ಶೇ. 39ರಷ್ಟು ಪ್ರಗತಿ ಸಾಧಿಸಲಾಗಿದೆ.

    ರಾಜ್ಯದಲ್ಲಿನ ಮೂರು ಘಟಕಗಳಲ್ಲಿ ಸಗಣಿ ಆಧರಿತ ಗೊಬ್ಬರದ ಉತ್ಪಾದನೆ ಜತೆಗೆ ಸಿದ್ದಾಪುರದ ಭಾನ್ಕುಳಿಯಲ್ಲಿ ಹೊಸ ಕಾರ್ಖಾನೆ ಕೂಡ ಕಾರ್ಯಾರಂಭ ಮಾಡಿರುವುದು ಹೆಮ್ಮೆಯ ಸಂಗತಿ. ಸದ್ಯದಲ್ಲಿಯೇ ಜೈವಿಕ ನಿಯಂತ್ರಕ, ಗೋ ಚಿಕಿತ್ಸಾ ಔಷಧ, ಗೃಹೋಪಯೋಗಿ ಮುಲಾಮುಗಳನ್ನು ಹೊಸ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ ಎಂದರು.

    ಟ್ರಸ್ಟ್ ಜನರಲ್ ಮೇನೇಜರ್ ಬಾಲಸುಬ್ರಹ್ಮಣ್ಯ ಮಾತನಾಡಿ, ಟ್ರಸ್ಟ್ ತಯಾರಿಸುವ ಜೈವಿಕ ಗೊಬ್ಬರಕ್ಕೆ ಭಾರೀ ಬೇಡಿಕೆಯಿರುವ ಕಾರಣ ಗೊಬ್ಬರ ಉತ್ಪಾದನೆಯ ಹೆಚ್ಚುವರಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಶ್ರೀಮಠದ ಆಡಳಿತ ಖಂಡದ ಶ್ರೀಸಂಯೋಜಕ ಪ್ರಮೋದ ಪಂಡಿತ್ ಅಧ್ಯಕ್ಷತೆ ವಹಿಸಿ ಶ್ರೀಗಳ ಗೋ ಸಂರಕ್ಷಣೆ ಪರಿಕಲ್ಪನೆಗಳ ಸಾಕಾರ ಮತ್ತು ಸಮಸ್ತ ಸಮಾಜದ ಹಿತ ರಕ್ಷಣೆಗಾಗಿ ಟ್ರಸ್ಟ್ ಮತ್ತು ಗೋಶಾಲೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಸಲಹೆಯಿತ್ತರು.

    ಟ್ರಸ್ಟಿಗಳಾದ ಮುಳಿಯ ಕೇಶವ ಪ್ರಸಾದ್, ಕೆಕ್ಕಾರು ರಾಮಚಂದ್ರ ಭಟ್ಟ, ಹಾರಕೆರೆ ನಾರಾಯಣ ಭಟ್ಟ ಮುಂತಾದವರಿದ್ದರು. ವಿವಿಧ ಗೋಶಾಲೆಗಳಿಗೆ ಒಟ್ಟೂ 16.85 ಲಕ್ಷ ರೂ. ದೇಣಿಗೆ ಚೆಕ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts