More

    ಕೆಂಪೇಗೌಡರನ್ನು ಜಾತಿಯ ಬುಟ್ಟಿ ಒಳಗಿಡುವುದು ಅಪಮಾನ; ನ.11ರಂದು ಪ್ರಗತಿಯ ಪ್ರತಿಮೆ ಲೋಕಾರ್ಪಣೆ

    ಕೆಂಪೇಗೌಡರನ್ನು ಜಾತಿಯ ಬುಟ್ಟಿ ಒಳಗಿಡುವುದು ಅಪಮಾನ; ನ.11ರಂದು ಪ್ರಗತಿಯ ಪ್ರತಿಮೆ ಲೋಕಾರ್ಪಣೆ| ಡಾ.ಕೆ.ಸುಧಾಕರ್

    ಕೋಟ್ಯಂತರ ಜನರಿಗೆ ಬದುಕು ನೀಡಿದ ನಮ್ಮ ಬೆಂಗಳೂರಿನ ನಿರ್ವಣಕಾರರಾಗಿ, ಪ್ರಜಾ ಪ್ರಗತಿಯ ಹರಿಕಾರರಾಗಿ, ಸಮಸ್ತ ಜನವರ್ಗಗಳ ನಾಯಕರಾಗಿ, ನಾಡಪ್ರಭುಗಳಾಗಿ ಕನ್ನಡ ನಾಡಿನ ಸುಧಾರಣೆಗೆ ದುಡಿದ ಕೆಂಪೇಗೌಡರು ರಾಜಕೀಯ ಹಾಗೂ ಆಡಳಿತ ಕ್ಷೇತ್ರದ ಸ್ಪೂರ್ತಿ. ಸಾಮಾಜಿಕ, ಧಾರ್ವಿುಕ, ಕೃಷಿ, ಜಲ ಸಂರಕ್ಷಣೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲೂ ಅವರನ್ನು ಸ್ಮರಿಸುವುದು ಸೂಕ್ತ. ಒಬ್ಬ ಜನಪ್ರತಿನಿಧಿ, ಒಂದು ತಂಡದ ನಾಯಕ, ಒಂದು ಕಂಪನಿಯ ಸಿಇಒ, ಕುಟುಂಬದ ಯಜಮಾನ, ಹೀಗೆ ಬಹು ಆಯಾಮಗಳಲ್ಲೂ ಶ್ರೇಷ್ಠ ಆದರ್ಶವಾಗಿ ಕೆಂಪೇಗೌಡರು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಸುಧಾರಣೆಯ ಹಾದಿಯಲ್ಲಿ ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಅವರ ತತ್ವಾದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತ.

    ಅಂತಹ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ‘ಪ್ರಗತಿಯ ಪ್ರತಿಮೆ’ಯನ್ನು ಅನಾವರಣ ಮಾಡುವ ಐತಿಹಾಸಿಕ ಕಾಲಘಟ್ಟದಲ್ಲಿ ನಾವಿದ್ದೇವೆ. ಅತ್ಯಂತ ಜನಪ್ರಿಯ ಸರ್ವ ಜನಾಂಗಗಳ ನಾಯಕ ಮತ್ತು ಕೆಂಪೇಗೌಡರ ಆಡಳಿತದ ಮಾದರಿಯನ್ನೇ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆ ಅನಾವರಣಗೊಳಿಸುತ್ತಿರುವುದು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.

    ನಾಡಪ್ರಭು ಕೆಂಪೇಗೌಡರು ಆಡಳಿತಾವಧಿಯಲ್ಲಿ ಮಾಡಿದ ಜನಹಿತ ಕಾರ್ಯಗಳನ್ನು ಇಂದಿಗೂ ಸ್ಮರಿಸುತ್ತೇವೆ. ಅದರಲ್ಲೂ, ಬೆಂಗಳೂರಿನ ಅಭಿವೃದ್ಧಿಯ ಯಾವುದೇ ವಿಚಾರ ಬಂದಾಗ ಅವರ ಉಲ್ಲೇಖ ಇದ್ದೇ ಇರುತ್ತದೆ. ಆದರೆ, ಕೆಂಪೇಗೌಡರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರವೃತ್ತಿ ಹೆಚ್ಚಾಗಿರುವುದು ವಿಷಾದದ ಸಂಗತಿ. ಇತಿಹಾಸದಲ್ಲಿ ಜನೋಪಕಾರಿ ಕಾರ್ಯಗಳನ್ನು ಮಾಡಿದ ಅನೇಕ ಮಹಾನ್ ನಾಯಕರಿದ್ದಾರೆ. ಆದರೆ, ಹೆಚ್ಚಿನ ನಾಯಕರನ್ನು ಒಂದು ಜಾತಿ, ಧರ್ಮ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಚಟುವಟಿಕೆ ಹೆಚ್ಚಾಗಿದೆ. ಹಾಗೆಯೇ, ಅಂತಹ ನಾಯಕರ ಜಯಂತಿ ಅಥವಾ ಪುಣ್ಯಸ್ಮರಣೆಯ ಆಚರಣೆಯನ್ನು ಆಯಾ ಜಾತಿ ಸಮುದಾಯಗಳಿಗೆ ಸೀಮಿತ ಮಾಡುವುದು ಕೂಡ ಆ ನಾಯಕರಿಗೆ ಮಾಡುವ ಅಪಮಾನ ಎಂದರೆ ತಪ್ಪಲ್ಲ. ಅದರಲ್ಲೂ, ಸರ್ವ ಜನಾಂಗ, ಅನೇಕ ಪ್ರದೇಶ, ದೇಶ, ವಿದೇಶಗಳ ಜನರಿಗೆ ತವರಾಗಿ ಸುಭದ್ರ ಜೀವನ ಕಲ್ಪಿಸಿರುವ ಮಹಾನಗರ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರನ್ನು ಒಂದು ಜಾತಿಯ ಬುಟ್ಟಿಯೊಳಗೆ ಹಾಕಿ ‘ಅವರು ನಮ್ಮವರಲ್ಲ’ ಎಂದು ಉಪೇಕ್ಷಿಸುವುದು ಸಾಮಾಜಿಕ ಸಮಾನತೆಯ ಆಶಯಗಳಿಗೆ ವಿರುದ್ಧವಾದುದು. ಸಮಾಜದಲ್ಲಿನ ಇಂತಹ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಗತಕಾಲದ ಸ್ಮರಣೀಯ ನಾಯಕರು ಇಡೀ ಸಮಾಜದ ಆಸ್ತಿ ಎಂದು ಬಿಂಬಿಸುವ ನಿಟ್ಟಿನಲ್ಲಿ ನಾಡಪ್ರಭುಗಳ ‘ಪ್ರಗತಿಯ ಪ್ರತಿಮೆ’ ನೆರವಾಗಲಿದೆ.

    ಗತವೈಭವದ ಮರುಸೃಷ್ಟಿ: ಇಂದಿನ ಸಿಲಿಕಾನ್ ವ್ಯಾಲಿ, ಐಟಿ, ಬಿಟಿ ಕೇಂದ್ರ, ಬೆಂಗಳೂರು ಮಹಾನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು, ಇದನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಪಣ ತೊಟ್ಟಿದ್ದರು. ಅದಕ್ಕಾಗಿಯೇ ಅವರು ವೃತ್ತಿ ಆಧಾರಿತವಾದ 54 ಪೇಟೆಗಳನ್ನು ನಿರ್ವಿುಸಿದ್ದರು. ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ ಮೊದಲಾದ ಪೇಟೆಗಳು ಎಲ್ಲಾ ಜಾತಿ, ಸಮುದಾಯದವರಿಗೆ ಔದ್ಯೋಗಿಕ ನೆಲೆ ಕಲ್ಪಿಸಿಕೊಡಲು ನೆರವಾಗಿದ್ದವು. ಸರ್ವ ಸಮಾನತಾವಾದಿ ವ್ಯವಸ್ಥೆ, ಸಾಮಾಜಿಕ ನ್ಯಾಯ ನೀಡಲು ಹಾಗೂ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೈಗೊಂಡ ಅತ್ಯುತ್ತಮ ಕ್ರಮವಿದು. ಅವರು ಹಾಕಿದ ಈ ಬುನಾದಿಯಿಂದಾಗಿ ಇಂದು ದೇಶದ ಎಲ್ಲಾ ಭಾಗಗಳ ಜನರು ಬಂದು ನಗರದಲ್ಲಿ ನೆಲೆ ಕಂಡುಕೊಳ್ಳುವಂತಾಗಿದೆ.

    ನಾಡಪ್ರಭುಗಳ ಸರ್ವ ಜನಾಂಗದ ಪ್ರಗತಿಯ ಗುರಿಯನ್ನು ಮಾದರಿಯಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಕೆಲ ತಿಂಗಳ ಹಿಂದಷ್ಟೇ ಕರ್ನಾಟಕದ ಕಾಡು ಕುರುಬರು ಸೇರಿದಂತೆ ವಿವಿಧ ರಾಜ್ಯಗಳ 12 ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದೆ. ಇದರ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ ಶೇ.17 ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸುವ ಪ್ರಕ್ರಿಯೆ ನಡೆಸುವ ಐತಿಹಾಸಿಕ ನಿರ್ಣಯ ಕೈಗೊಂಡರು. ಆದರೆ, ಇದಕ್ಕೂ ಮುನ್ನವೇ ರಾಜ್ಯಸಭೆ, ವಿಧಾನಪರಿಷತ್​ನಲ್ಲೂ ಅತಿ ಹಿಂದುಳಿದ ಸಮುದಾಯಗಳ ನಾಯಕರಿಗೆ ಅವಕಾಶ ನೀಡುವ ಕಾರ್ಯವನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಪರಿಶಿಷ್ಟ ಪಂಡಗದ ಅತಿ ಹಿಂದುಳಿದ ಸಮುದಾಯದಿಂದ ಬಂದ ವ್ಯಕ್ತಿಗೆ ನೀಡುವ ಸ್ಮರಣೀಯ ನಿರ್ಧಾರ ಕೈಗೊಂಡಿದ್ದೂ ಬಿಜೆಪಿಯೇ! ಇದೇ ನಾಡಪ್ರಭುಗಳ ಕನಸುಗಳ ಸಾಕಾರದ ಕ್ರಮ. ಈ ಮೂಲಕ ಅವರ ಆಡಳಿತವನ್ನು ಮರುಸೃಷ್ಟಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಯೇ, ಸಮ ಸಮಾಜ ಕಟ್ಟುವ ಮಹತ್ವದ ಕೆಲಸವಾಗುತ್ತಿದೆ.

    ನಾಡಪ್ರಭುಗಳು ನೀರಾವರಿಯ ಮಹತ್ವವನ್ನು ಅರಿತಿದ್ದರು. ಆ ಕಾಲದಲ್ಲಿ ಬೆಂಗಳೂರಿಗೆ ಸೂಕ್ತವಾದ ನೀರಿನ ಮೂಲ ಇರಲಿಲ್ಲ. ಆದ್ದರಿಂದ ಕೆರೆ, ಕಟ್ಟೆಗಳ ನಿರ್ಮಾಣ ಅಗತ್ಯವೆಂದು ಅವರು ಕೃಷಿ ಮತ್ತು ಕುಡಿಯುವ ನೀರಿಗಾಗಿ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ಹಲವಾರು ಜಲಮೂಲಗಳ ಸೃಷ್ಟಿ ಮಾಡಿದರು. ಆ ಕಾಲದಲ್ಲಿ ಬೆಂಗಳೂರಿನಲ್ಲಿ 347 ಬೃಹತ್ ಕೆರೆಗಳು, 1,200 ಕ್ಕೂ ಹೆಚ್ಚು ಸಣ್ಣ ಕೆರೆ ಹಾಗೂ ಕಟ್ಟೆಗಳಿದ್ದವು. ಈ ಅಭಿವೃದ್ಧಿ ಯೋಜನೆಗಳಲ್ಲಿ ಎಲ್ಲೂ ಜಾತಿ, ಜನಾಂಗಗಳನ್ನು ಆಧಾರವಾಗಿ ಇರಿಸಿಕೊಂಡಿರಲಿಲ್ಲ. ಇದು ಸರ್ವ ಜನಾಂಗಗಳ ಕೇಂದ್ರಿತವಾದ ಶ್ರೇಯೋಭಿವೃದ್ಧಿಯ ಯೋಜನೆಯಾಗಿತ್ತು.

    ಧರ್ಮ, ಪರಂಪರೆಯ ಕಲ್ಯಾಣ: ಧರ್ಮ, ಪರಂಪರೆ, ಸಂಸ್ಕೃತಿ ಜನರ ಬದುಕಿನ ಭಾಗ ಎಂಬುದನ್ನು ಅರಿತಿದ್ದ ಕೆಂಪೇಗೌಡರು, ಅದಕ್ಕಾಗಿ ದೇವಸ್ಥಾನಗಳನ್ನು ಪುನರುಜ್ಜೀವನ ಮಾಡುವ, ಹೊಸ ದೇವಾಲಯಗಳನ್ನು ನಿರ್ಮಾಣ ಮಾಡುವ ಧರ್ಮ ಕಾರ್ಯ ಕೈಗೊಂಡಿದ್ದರು. ಇಂದು ಜನಪ್ರಿಯವಾಗಿರುವ ದೊಡ್ಡಗಣಪತಿ, ಗವಿಗಂಗಾಧರೇಶ್ವರ, ಹಲಸೂರು ಸೋಮೇಶ್ವರ ಸೇರಿದಂತೆ ಅನೇಕ ದೇವಸ್ಥಾನಗಳ ಜೀಣೋದ್ಧಾರ ಹಾಗೂ ನಿರ್ವಣವನ್ನು ಅವರು ಮಾಡಿದ್ದರು.

    ಜಲಮೂಲ, ಪಾರಂಪರಿಕ ಐತಿಹಾಸಿಕ ರಚನೆಗಳ ವಿಚಾರದಲ್ಲಿ ಇದೇ ಬದ್ಧತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅತ್ಯಂತ ಶ್ಲಾಘನೀಯ ಕಾರ್ಯವೆಂದರೆ, ಅದು ನಮಾಮಿ ಗಂಗೆ. ಹಿಂದೂ ಪರಂಪರೆಯಲ್ಲಿ ಪವಿತ್ರವಾದ ಈ ನದಿಯನ್ನು ಶುಚಿಗೊಳಿಸಿ ಸಂರಕ್ಷಿಸುವ ಕಾರ್ಯ ಹಿಂದೆಂದೂ ನಡೆದಿರಲಿಲ್ಲ. ಹಾಗೆಯೇ, ಯೋಗ ದಿನವನ್ನು ಅಂತಾರಾಷ್ಟ್ರೀಯ ಆಚರಣೆಯಾಗಿಸಲು ಶ್ರಮ, ಕಾಶಿ ವಿಶ್ವನಾಥ ಧಾಮ ಕಾರಿಡಾರ್ ನಿರ್ವಣ, ಉಜ್ಜಯಿನಿಯ ಮಹಾಕಾಲ ಲೋಕ ಯೋಜನೆ ಮೊದಲಾದವು ಪರಂಪರೆಯ ರಕ್ಷಣೆಯ ನಿಟ್ಟಿನಲ್ಲಿ ಮಹತ್ವದ್ದು ಎನಿಸಿವೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಸವಾದಿ ಶರಣರ ತತ್ವಗಳನ್ನು ಜಗತ್ತಿನಾದ್ಯಂತ ಸಾರಲು ಚಾಲನೆ ನೀಡಿದ ‘ಅನುಭವ ಮಂಟಪ’ ಯೋಜನೆ ಕೂಡ ಇದೇ ಉದ್ದೇಶದ್ದು. ಈ ಮೂಲಕ ಜಗಜ್ಯೋತಿ ಬಸವೇಶ್ವರರು ಸೇರಿದಂತೆ ಎಲ್ಲಾ ವಚನಕಾರರ, ಸಮಾಜ ಸುಧಾರಕರ ಆಶಯಗಳನ್ನು ಜಾರಿ ತರಲಾಗುತ್ತಿದೆ.

    ಸಮ ಸಮಾಜದ ಅಮೃತ ಕಾಲ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲವನ್ನು ‘ಅಮೃತ ಕಾಲ’ ಎಂದು ಕರೆಯಲಾಗಿದೆ. ಹಾಗೆಯೇ, ಇದು ಬುದ್ಧ, ಬಸವಾದಿ ಶರಣರು, ಡಾ.ಬಿ.ಆರ್.ಅಂಬೇಡ್ಕರ್, ದೀನ್ ದಯಾಳ್ ಉಪಾಧ್ಯಾಯ ಮೊದಲಾದ ಸಮ ಸಮಾಜ ನಿರ್ವಣಕಾರರ ಆಶಯಗಳನ್ನು ಸ್ಥಾಪಿಸುವ ಕಾಲವೂ ಹೌದು. ಇದಕ್ಕೆ ಸ್ಪಷ್ಟ ಚಿತ್ರಣವನ್ನು ಕೊಡುವ ಪ್ರೇರಕ ಶಕ್ತಿಯಾಗಿ ‘ಪ್ರಗತಿಯ ಪ್ರತಿಮೆ’ ನಿಲ್ಲಲಿದೆ. ಭವಿಷ್ಯದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಬೆಳೆಸುವ ಜತೆಗೆ, ಇಲ್ಲಿನ ಸಾಮಾಜಿಕ ಬದುಕನ್ನು ಕೂಡ ಸುಧಾರಣೆಯತ್ತ ಕೊಂಡೊಯ್ಯಲು ಈ ಪ್ರತಿಮೆಯೇ ಪ್ರೇರಣೆ. ಇದು ನಾಡಿನ ಸಮಸ್ತ ವಲಯಗಳ ಪ್ರಗತಿಗೆ ಚುರುಕು ನೀಡುವ ಪ್ರಗತಿಯ ಪ್ರತಿಮೆ.

    (ಲೇಖಕರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts