More

    ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ಪ್ರಯತ್ನ

    ಹಾವೇರಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ (ಪಿಡಿಎಸ್) ಮೆಕ್ಕೆಜೋಳವನ್ನು ಹೊರಗಿಟ್ಟು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ರೈತರು ನಗರದಲ್ಲಿ ಗುರುವಾರ ಬೈಕ್ ರ‍್ಯಾಲಿ ನಡೆಸಿ ಬಿಜೆಪಿ ಕಚೇರಿ ಹತ್ತಿರ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಮನವಿ ಸ್ವೀಕರಿಸಿ ಮಾತನಾಡಿದರು.

    ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರದ ನಿಯಮ ಅಡ್ಡಿಯಾಗುತ್ತಿದೆ. ಬೆಂಬಲ ಬೆಲೆಯಲ್ಲಿ ಖರೀದಿಸಿ ಅದನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಇಲ್ಲಿಯೇ ವಿತರಣೆ ಮಾಡಬೇಕು ಎಂಬ ನಿಯಮ ಇರುವುದರಿಂದ ಸಮಸ್ಯೆಯಾಗುತ್ತಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ನಾನು, ಕೃಷಿ ಸಚಿವರು ರ್ಚಚಿಸಿದ್ದೇವೆ. ಕೇಂದ್ರ ಸರ್ಕಾರದ ಸಹಕಾರವಿಲ್ಲದೇ ಅಪಾರ ಪ್ರಮಾಣದಲ್ಲಿ ಬೆಳೆದಿರುವ ಮೆಕ್ಕೆಜೋಳವನ್ನು ಸರ್ಕಾರದಿಂದ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದೊಂದಿಗೆ ರ್ಚಚಿಸಿ, ಮೆಕ್ಕೆಜೋಳವನ್ನು ಸಾರ್ವಜನಿಕ ವಿತರಣೆ ವ್ಯವಸ್ಥೆಯಿಂದ ಹೊರಗಿಟ್ಟು ಖರೀದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

    ವಿದ್ಯುತ್ ಖಾಸಗೀಕರಣಗೊಳಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿಲ್ಲ. ಪಂಪ್​ಸೆಟ್​ಗಳಿಗೆ ಮೀಟರ್ ಅಳವಡಿಸುವುದಿಲ್ಲ. ಈ ಬಗ್ಗೆ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದೆಯೇ ಹೊರತು ನಷ್ಟವಿಲ್ಲ. ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೊಳಿಸಲಾಗಿದೆ. ಅಪಪ್ರಚಾರಗಳಿಗೆ ರೈತರು ತಲೆಕೆಡಿಸಿಕೊಳ್ಳಬಾರದು ಎಂದರು.

    ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ. ರೈತರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಬಿಡಬೇಕು. ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಟ್ಟು ಹೋರಾಟ ನಿರತ ರೈತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಈ ಕುರಿತ ಮನವಿ ಪತ್ರವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೂ ಸಲ್ಲಿಸಿದರು. ನಂತರ ರೈತರು ಬೈಕ್ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಸಂಘಟನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲೇಶಪ್ಪ ಪರಪ್ಪನವರ, ಅಡಿವೆಪ್ಪ ಆಲದಕಟ್ಟಿ, ಮಹಮ್ಮದಗೌಸ್ ಪಟೇಲ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಪ್ರಭುಗೌಡ ಪ್ಯಾಟಿ, ದಿಳ್ಳೆಪ್ಪ ಮಣ್ಣೂರ, ಶಂಕ್ರಪ್ಪ ಶಿರಗಂಬಿ, ಸುರೇಶ ಚಲವಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts