More

    ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಭರ್ತಿಗೆ ಕಾಲ ಸನ್ನಿಹಿತ

    ರಾಮನಗರ: ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಪ್ರಕಟಗೊಳ್ಳದೆ ಖಾಲಿ ಉಳಿದಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಭರ್ತಿ ಮಾಡುವ ಕಾಲ ಸನ್ನಿಹಿತವಾಗಿದ್ದು, ಸರ್ಕಾರ ಕೊನೆಗೂ ಮೀಸಲಾತಿ ಪ್ರಕಟ ಮಾಡಿದೆ.

    ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದರೆ ಕನಕಪುರ ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಎಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ.

    ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಕ್ಕೆ ಮೀಸಲಾಗಿದ್ದು, ಬಿಡದಿ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ-ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

    ಕನಕಪುರ ನಗರಸಭೆ ಹಾಗೂ ಮಾಗಡಿ ಪುರಸಭೆಗೆ ಹೊಸ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದು 8-9 ತಿಂಗಳು ಕಳೆದಿದೆ. ಆದರೆ ಮೀಸಲಾತಿ ಪ್ರಕಟಿಸದ ಕಾರಣ ಹೊಸ ಸದಸ್ಯರು ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅದಾಗಲೇ ಪೈಪೋಟಿ ಏರ್ಪಟ್ಟಿದೆ. ಬಿಡದಿ ಪುರಸಭೆಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಳ್ಳದ ಕಾರಣ ಅಲ್ಲಿಯೂ ಆಡಳಿತ ನಡೆದಿಲ್ಲ.

    ಕನಕಪುರ ನಗರಸಭೆ ಕಾಂಗ್ರೆಸ್ ವಶವಾಗಿದ್ದರೆ, ಮಾಗಡಿ ಪುರಸಭೆ ಬಹುತೇಕ ಜೆಡಿಎಸ್ ವಶದಲ್ಲಿದೆ. ಒಟ್ಟು 23 ವಾರ್ಡ್​ಗಳನ್ನು ಹೊಂದಿರುವ ಮಾಗಡಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 12, ಮಾಗಡಿ 10 ಹಾಗೂ ಬಿಜೆಪಿ 1 ಸ್ಥಾನ ಪಡೆದುಕೊಂಡಿದೆ. ಸದ್ಯಕ್ಕೆ ಜೆಡಿಸ್ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಮಾತುಗಳು ಮೇಲ್ನೊಟಕ್ಕೆ ಕೇಳಿಬರುತ್ತಿದೆ.

    ಇನ್ನೆರಡು ದಿನಗಳಲ್ಲಿ ಪ್ರಕಟಣೆ

    ರಾಮನಗರ, ಚನ್ನಪಟ್ಟಣ ನಗರಸಭೆ ಅಧಿಕಾರ ಅವಧಿ ಮುಗಿದರೂ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿಲ್ಲ. ಬಿಡದಿ ಪುರಸಭೆ ಸಹ ಗೊಂದಲದಿಂದಾಗಿ ಇದೇ ಪರಿಸ್ಥಿತಿಯಲ್ಲಿ ಮುಂದುವರಿಯಲಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿಸಂಹಿತೆ ಜಾರಿಯಲ್ಲಿದೆ. ಆದರೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಈ ಸಂಹಿತೆ ತೊಡಕಾಗದು. ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಲಿದ್ದಾರೆ. ಅದಾದ ಏಳು ದಿನದ ತರುವಾಯ ಹೊಸ ಸಾರಥಿಗಳ ಆಯ್ಕೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

    ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದೆ. ಮಾಗಡಿ ಹಾಗೂ ಕನಕಪುರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ಸದಸ್ಯರ ಆಯ್ಕೆ ಚುನಾವಣೆ ನಡೆಯದ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯುವುದಿಲ್ಲ.

    | ಮಾಯಣ್ಣಗೌಡ ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶ

    ಸ್ಥಾನಕ್ಕೆ ಕಸರತ್ತು ಜೋರು

    ಮಾಗಡಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲು ಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ನಾಯಕರ ಬಳಿ ಲಾಬಿ ನಡೆಸುತ್ತಿದ್ದಾರೆ.

    23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್​ನ 10, ಜೆಡಿಎಸ್​ನ 12 ಹಾಗೂ ಬಿಜೆಪಿಯ ಒಬ್ಬರು ಸದಸ್ಯರಿದ್ದಾರೆ. 2019ರ ನ.12ರಂದು ಚುನಾವಣೆ ನಡೆದಿತ್ತು. ನಂತರ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ಪ್ರಕಟಿಸಿತ್ತು. ಆದರೆ, ಇದು ಸರಿಯಾಗಿಲ್ಲ ಎಂದು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದಾಗ ಸರ್ಕಾರ ಪ್ರಕಟಿಸಿದ್ದ ಮೀಸಲಾತಿ ರದ್ದುಗೊಂಡಿತ್ತು. ನಂತರ ಈಗ ಅ.8ರಂದು ಸರ್ಕಾರ ಮೀಸಲು ಪ್ರಕಟಿಸಿ ಆದೇಶ ಹೊರಡಿಸಿದೆ.

    ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಎಗೆ ಮೀಸಲಾಗಿದೆ. ಜೆಡಿಎಸ್​ನಿಂದ ಅಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್​ನ ವಿಜಯಾ ರೂಪೇಶ್ ಕುಮಾರ್, 15ನೇ ವಾರ್ಡ್​ನ ಎಂ.ಆರ್. ರೇಖಾ ನವೀನ್, 17ನೇ ವಾರ್ಡ್​ನ ಹೇಮಲತಾ ನಾಗರಾಜು ಹಾಗೂ 1ನೇ ವಾರ್ಡ್​ನ ನಾಗರತ್ನಾ ಸೇರಿ 4 ಮಂದಿ ಅರ್ಹರಾಗಿದ್ದರೆ, ಉಪಾಧ್ಯಕ್ಷರ ಸ್ಥಾನಕ್ಕೆ 11ನೇ ವಾರ್ಡ್​ನ ಜಯರಾಮು, 10ನೇ ವಾರ್ಡ್​ನ ಅಶ್ವತ್ಥ್, 12ನೇ ವಾರ್ಡ್​ನ ವೆಂಕಟರಾಮು, 23ನೇ ವಾರ್ಡ್​ನ ರೆಹಮತ್, 18ನೇ ವಾರ್ಡ್​ನ ಎಂ.ಎನ್.ಮಂಜುನಾಥ್ ಅರ್ಹರಾಗಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಾ, ವಿಜಯಾ ರೂಪೇಶ್ ಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಲಾಬಿ ನಡೆಸುತ್ತಿಲ್ಲ. ಅಂತಿಮ ನಿರ್ಧಾರ ಆಯಾ ಪಕ್ಷಗಳ ನಾಯಕರೇ ಮಾಡಲಿದ್ದಾರೆ.

    ಕಾಯಕಲ್ಪಕ್ಕೆ ನಾಂದಿ

    ಪುರಸಭೆಯಲ್ಲಿ ಪುರಸಭೆಯಲ್ಲಿ 10 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಸುಮ್ಮನೆ ಕೂರದೆ ಇತರ ಪಕ್ಷದ ಸದಸ್ಯರನ್ನು ಸೆಳೆದು ಪುರಸಭೆ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ. ಚುನಾವಣೆ ನಡೆದು 11 ತಿಂಗಳ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿದೆ. ಮತ್ತೆ ಯಾರಾದರೂ ಕೋರ್ಟ್ ಮೊರೆ ಹೋದರೆ ಮತ್ತೆ ಮುಂದೂಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಲ ಆಕಾಂಕ್ಷಿಗಳು ರಾಜ್ಯಮಟ್ಟದ ನಾಯಕರ ಬಳಿ ಲಾಬಿ ನಡೆಸುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಲಭಿಸದಿದ್ದರೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಆತಂಕ ಜೆಡಿಎಸ್​ನ ಕೆಲ ಸದಸ್ಯರಿಗೆ ಸದಸ್ಯರಲ್ಲಿ ಮೂಡಿದೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷರು ಯಾವ ಪಕ್ಷದವರೇ ಆದರೂ ಪರವಾಗಿಲ್ಲ. ಜಡ್ಡು ಹಿಡಿದಿರುವ ಪುರಸಭೆಗೆ ಕಾಯಕಲ್ಪ ನೀಡಲಿ ಎಂಬುದು ಪುರಜನರ ಅಭಿಪ್ರಾಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts