More

    ಪ್ರೀತಿಯ ಬಲೆಗೆ ಬಿದ್ದ ತಪ್ಪಿಗೆ ಕರುಳಕುಡಿಯನ್ನೇ ಹೊಸಕಿದಳಾ ಈ ತಾಯಿ!

    ಚಂಡೀಗಢ: ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ ಎಂಬ ಬಹು ಜನಪ್ರಿಯ ನಾಣ್ಣುಡಿ ಇದೆ. ಆದರೆ ಇಲ್ಲೊಬ್ಬ ತಾಯಿ, ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ಕಾರಣಕ್ಕೆ, ತನ್ನ ಮಗಳನ್ನೇ ಉಸಿರುಗಟ್ಟಿಸಿ ಸಾಯಿಸಿದ್ದಾಳೆ!

    ಈ ಘಟನೆ ನಡೆದಿರುವುದು ಪಂಜಾಬ್​ನ ಹೋಶಿಯಾರಪುರದಲ್ಲಿ. ಕೊಲೆಯಾದವಳು 19 ವರ್ಷದ ಜಸ್​ಪ್ರೀತ್​ ಸಿಂಗ್​. ಈಕೆ ಅಮನ್​ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಪ್ರೀತಿಯೇ ಅವಳ ಕೊಲೆಗೆ ಕಾರಣವಾಗಿದೆ.

    ಆಗಿದ್ದೇನು?: ಜಸ್​ಪ್ರೀತ್​ ಮತ್ತು ಅಮನ್​ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಮನೆಯವರ ವಿರೋಧವಿತ್ತು. ಇದೇ 22ರಂದು ಜಸ್​ಪ್ರೀತ್​ ಮನೆಬಿಟ್ಟು ಹೋಗಿದ್ದಳು. ಮಗಳು ಎಲ್ಲಿಗೆ ಹೋಗಿರಬಹುದು ಎಂಬ ಶಂಕೆ ಇದ್ದರೂ ಈಕೆಯ ತಾಯಿ ಬಲ್ವೀಂದರ್​ ಕೌರ್​ ಪೊಲೀಸರಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲು ಮಾಡಿದ್ದಳು. ಮಗಳು ನಮಗೆ ಯಾವುದೇ ಮಾಹಿತಿ ನೀಡದೆ ಓಡಿ ಹೋಗಿದ್ದಾಳೆ. ಇದಕ್ಕೆಲ್ಲಾ ಅಮನ್​ ಪ್ರೀತ್​ ಸಿಂಗ್​ ಕಾರಣ, ಅವನ ಕುಮ್ಮಕ್ಕಿನ ಮೇರೆಗೆ ಮಗಳು ಮನೆಯಿಂದ ಹೋಗಿದ್ದಾಳೆ, ಅವಳನ್ನು ಹುಡುಕಿ ಕೊಡಬೇಕು ಹಾಗೂ ಅಮನ್​ಗೆ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ತಾಯಿ ಮನವಿ ಮಾಡಿಕೊಂಡಿದ್ದಳು.

    ಅದಾದ ಮಾರನೆಯ ದಿನವೇ ಪೊಲೀಸ್​ ಠಾಣೆಗೆ ಕರೆ ಮಾಡಿದ್ದ ತಾಯಿ, ನನ್ನ ಮಗಳು ಗಾರ್ ಶಂಕರ್ ರೈಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿದ್ದು, ಆಕೆಯನ್ನು ಮನೆಗೆ ಕರೆತಂದಿರುವುದಾಗಿ ತಿಳಿಸಿದ್ದಳು. ಪೊಲೀಸರು ವಿಚಾರಣೆ ನಡೆಸಿದಾಗ ಇದು ನಿಜ ಎಂದು ತಿಳಿದು ಬಂತು. ಅಲ್ಲಿಗೆ ಪ್ರಕರಣವನ್ನು ಪೊಲೀಸರು ಮುಗಿಸಿದ್ದರು.

    ಆದರೆ, ಮುಂದೆ ಆದದ್ದೇ ಬೇರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಜಗಳವಾದಾಗ, ತಾಯಿ ಹಾಗೂ ಇತರರು ಸೇರಿ ಜಸ್​ಪ್ರೀತ್​ಳನ್ನು ಕೊಲೆ ಮಾಡಿದ್ದಾರೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ, ಹೊರಗಡೆ ಶವವನ್ನು ತೆಗೆದುಕೊಂಡು ಹೋದರೆ, ಸುಲಭವಾಗಿ ಪೊಲೀಸರಿಗೆ ತಿಳಿಯುತ್ತದೆ ಎನ್ನುವ ಕಾರಣಕ್ಕೆ ಮನೆಯಲ್ಲಿಯೇ ಶವವನ್ನು ಸುಟ್ಟು ಕೂಡ ಹಾಕಲಾಯಿತು!

    ಆದರೆ ಅಕ್ಕಪಕ್ಕದವರಿಗೆ ಗುಮಾನಿ ಹುಟ್ಟಿ ಪೊಲೀಸರಿಗೆ ವಿಷಯ ತಿಳಿಸಿದಾಗ, ಎಲ್ಲರೂ ತಪ್ಪು ಒಪ್ಪಿಕೊಂಡಿದ್ದಾರೆ. ಮಗಳು ಅಮನ್​ ಜತೆ ಹೋಗಿದ್ದನ್ನು ಪತ್ತೆ ಹಚ್ಚಿ ಆಕೆಯನ್ನು ವಾಪಸ್​ ಕರೆದುಕೊಂಡು ಬಂದ ನಂತರ ಸ್ಥಳೀಯ ಪಂಚಾಯತ್​ ಸದಸ್ಯರು ಆಕೆಗೆ ಬುದ್ಧಿ ಹೇಳಿದ್ದರು. ಆದರೆ ಮನೆಯಲ್ಲಿ ಮತ್ತೆ ಜಗಳ ಶುರುವಾಗಿದೆ.

    ಈ ಹಿನ್ನೆಲೆಯಲ್ಲಿ ಜಸ್​ಪ್ರೀತ್​ಗೆ ನಿದ್ದೆ ಮಾತ್ರೆಯನ್ನು ಕೊಟ್ಟಿರುವುದಾಗಿ ತಾಯಿ ತಿಳಿಸಿದ್ದಾಳೆ. ನಂತರ ಆಕೆಯ ಅಣ್ಣ ಸೇರಿದಂತೆ ಮನೆಯಲ್ಲಿ ಇದ್ದವರು ಉಸಿರುಗಟ್ಟಿಸಿ ಸಾಯಿಸಿದ್ದರು. ಶವವನ್ನೂ ಸುಟ್ಟುಹಾಕಿದ್ದರು!

    ವಿಚಾರಣೆ ವೇಳೆ ತಾಯಿ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ಆರೋಪದಡಿ ಐವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಪೊಲೀಸರು ಮೃತ ಯುವತಿಯ ತಾಯಿ ಬಲ್ವಿಂದರ್, ಚಿಕ್ಕಪ್ಪ ಸಾದೇವ್, ಸಹೋದರ ಗುರುದೀಪ್ ಸಿಂಗ್​ನನ್ನು ಬಂಧಿಸಲಾಗಿದೆ. ಈ ಪೈಕಿ ಗುರುದೀಪ್​, ಪಂಜಾಬ್ ಪೊಲೀಸ್ ಇಲಾಖೆಯ ಉದ್ಯೋಗಿ, ಜತೆಗೆ, ಮುಖ್ಯಮಂತ್ರಿ ಭದ್ರತಾದಳದಲ್ಲಿ ಕಾರ್ಯನಿರ್ವಹಿಸಲು ನಿಯೋಜನೆಗೊಂಡಿದ್ದ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts