More

    ಡುಂಡಿರಾಜ್ ಅಂಕಣ; ಚಳಿಗೆ ದೇಹ ಗಡಗಡ, ನಲ್ಲೆ ಇಲ್ಲ ಸಂಗಡ…

    ಡುಂಡಿರಾಜ್ ಅಂಕಣ; ಚಳಿಗೆ ದೇಹ ಗಡಗಡ, ನಲ್ಲೆ ಇಲ್ಲ ಸಂಗಡ...ಜನವರಿ ತಿಂಗಳಲ್ಲಿ ಕರಾವಳಿಯ ಗೆಳೆಯರಿಗೆ ಅಥವಾ ಬಂಧುಗಳಿಗೆ ಫೋನ್ ಮಾಡಿದರೆ ಅವರು ಸಾಮಾನ್ಯವಾಗಿ ಕೇಳುವ ಒಂದು ಪ್ರಶ್ನೆ ‘‘ಬೆಂಗ್ಳೂರಲ್ಲಿ ಚಳಿ ಜೋರಾ?’’ ನನ್ನ ಅಭಿಪ್ರಾಯದಲ್ಲಿ ಈ ವರ್ಷ ಬೆಂಗಳೂರಿನಲ್ಲಿ ಚಳಿ ಜೋರಾಗಿದೆ ಅಂತಲೇ ಹೇಳಬಹುದು. ಎಷ್ಟು ಜೋರು ಅಂದರೆ ರಾತ್ರಿ ಮಲಗುವಾಗ ಕಂಬಳಿ ಮತ್ತು ಬೆಳಿಗ್ಗೆ ವಾಕಿಂಗ್​ಗೆ ಹೋಗುವಾಗ ಸ್ವೆಟರು ಬೇಕೇಬೇಕು. ಕೆಲವು ದಿನ ಚಳಿಯ ಧಾಳಿಯನ್ನು ಎದುರಿಸಲು ಕಂಬಳಿ ಸಾಕಾಗದೇ ಸ್ವೆಟರು ಹಾಕಿಕೊಂಡು ಮಲಗಿದ್ದೂ ಉಂಟು.

    ಎಷ್ಟೇ ಸೆಖೆಯಿದ್ದರೂ ನಾನು ಅದನ್ನು ಸಹಿಸಿಯೇನು. ಆದರೆ ಚಳಿಗಾಲ ಬರುತ್ತಿದ್ದ ಹಾಗೆ ‘ಚಳಿ ಚಳಿ ತಾಳೆನು ಈ ಚಳಿಯಾ’ ಎಂದು ರಾಗ ಎಳೆಯುವುದು ನನ್ನ ಚಾಳಿ. ಮುಂಜಾನೆ ರಸ್ತೆಯಲ್ಲಿ ಮಂಜು ಕವಿದಿದ್ದರೆ ಅಂದು ನಾನು ವಾಕಿಂಗ್​ಗೆ ಚಕ್ಕರ್ ಅಂತಲೇ ಲೆಕ್ಕ. ನಾನು ಚಳಿ ಜೋರಾಗಿದೆ ಅಂದರೆ ನನ್ನಾಕೆ ಒಪ್ಪುವುದಿಲ್ಲ.

    ‘‘ಸುಮ್ನಾಯ್ಕಣಿ ಕಾಂಬೊ. ನಿಮ್ಗೆ ವಾಕಿಂಗಿಗೆ ಹೋಪ್ಕೆ ಉದಾಸೀನ. ಅದ್ಕೆ ಚಳಿ ಒಂದು ಹೆಳೆ’’ ಅನ್ನುತ್ತಾಳೆ. ಎಷ್ಟೇ ಚಳಿ ಇದ್ದರೂ ಅವಳಿಗೆ ರಾತ್ರಿ ಮಲಗುವಾಗ ಫ್ಯಾನ್ ಹಾಕಲೇಬೇಕು. ಸೀಲಿಂಗ್ ಫ್ಯಾನಿನ ಸದ್ದು ಮತ್ತು ನನ್ನ ಗೊರಕೆಯ ಗೊರ ಗೊರ ಕೇಳದಿದ್ದರೆ ನನ್ನವಳಿಗೆ ನಿದ್ರೆಯೇ ಬರುವುದಿಲ್ಲವಂತೆ. ಅದು ಬೇರೆ ವಿಷಯ. ಚಳಿ ಇಲ್ಲ ಅನ್ನುವವರ ಹತ್ತಿರ ನಾನು ವಾದ ಮಾಡುವುದಿಲ್ಲ. ಏಕೆಂದರೆ ಕೊಬ್ಬು ಜಾಸ್ತಿ ಇರುವವರಿಗೆ ಚಳಿ ಕಡಿಮೆ ಅಂತ ನನಗೆ ಗೊತ್ತಿದೆ. ಕೊಬ್ಬು ಅಂದರೆ ಅಹಂಕಾರವಲ್ಲ. ನಮ್ಮ ಚರ್ಮದ ಕೆಳಗಿರುವ ನೆಣ ಅಥವಾ ಫ್ಯಾಟ್.

    ನಾನು ಹುಟ್ಟಿ ಬೆಳೆದ ಕರಾವಳಿ ಪ್ರದೇಶದಲ್ಲಿ ಚಳಿಗಾಲವೇ ಇಲ್ಲ ಅನ್ನಬಹುದು. ಅಲ್ಲಿ ವರ್ಷವಿಡೀ ಬೇಸಿಗೆ ಅಂದರೂ ತಪ್ಪಿಲ್ಲ. ಏಕೆಂದರೆ ಮಳೆಗಾಲದಲ್ಲಿ ಹೊರಗೆ ಧಾರಾಕಾರ ಮಳೆ ಸುರಿಯುತ್ತಿದ್ದರೂ ಫ್ಯಾನಿಲ್ಲದಿದ್ದರೆ ಮನೆಯೊಳಗೆ ಇರುವವರಿಗೆ ಸೆಖೆಯಾಗುತ್ತದೆ. ನನ್ನ ಬಾಲ್ಯದಲ್ಲಿ ಡಿಸೆಂಬರ್ ಜನವರಿ ತಿಂಗಳಲ್ಲಿ ಕರಾವಳಿಯಲ್ಲೂ ಬೆಳಗಿನ ಹೊತ್ತು ಚಳಿ ಇರುತ್ತಿತ್ತು.

    ಕೆಲವೊಮ್ಮೆ ಹಲ್ಲು ಕಟಕಟ ಅನ್ನುವಷ್ಟು ಬಾಯಿ ತೆರೆದು ಹಾ ಅಂದರೆ ಹೊಗೆ ಬರುವಷ್ಟು ಥಂಡಿ. ಅದಕ್ಕೆ ನಾವು ಕಂಡುಕೊಳ್ಳುತ್ತಿದ್ದ ಪರಿಹಾರ ಅಡುಗೆ ಮನೆಯಲ್ಲಿ ಅಥವಾ ಬಚ್ಚಲು ಮನೆಯಲ್ಲಿ ಕಟ್ಟಿಗೆ ಒಲೆಯ ಮುಂದೆ ಕುಕ್ಕುರುಗಾಲಿನಲ್ಲಿ ಕುಳಿತು ಮೈ ಕಾಯಿಸಿಕೊಳ್ಳುವುದು. ಸ್ವಲ್ಪ ಹೊತ್ತು ಎರಡೂ ಹಸ್ತಗಳನ್ನು ಉಜ್ಜಿಕೊಂಡು ನಂತರ ಬಿಸಿ ಬಿಸಿ ಕಾಫಿ ಕುಡಿದರೆ ಚಳಿ ಓಡಿಹೋಗುತ್ತಿತ್ತು. ನಿಜವಾದ ಚಳಿ ಹೇಗಿರುತ್ತದೆ ಅಂತ ನನಗೆ ಗೊತ್ತಾದದ್ದು ಕಾಲೇಜು ಶಿಕ್ಷಣಕ್ಕೆಂದು ಬೆಂಗಳೂರಿಗೆ ಬಂದಾಗ.

    ಆಗ ಬೆಂಗಳೂರಿನಲ್ಲಿ ಕಾಂಕ್ರೀಟ್ ಕಟ್ಟಡಗಳು, ಹೊಗೆಯುಗುಳುವ ವಾಹನಗಳ ಭರಾಟೆ ಈಗಿನಷ್ಟು ಇರಲಿಲ್ಲ. ಉದ್ಯಾನ ನಗರಿ ಮರಗಿಡಗಳಿಂದ ಕಂಗೊಳಿಸುತ್ತಿತ್ತು. ಹೀಗಾಗಿ ಚಳಿರಾಯನ ಆರ್ಭಟ ಜೋರಾಗಿಯೇ ಇತ್ತು. ಉಣ್ಣೆಯ ಸ್ವೆಟರು, ಮಫ್ಲರು, ಮಂಕಿಕ್ಯಾಪು ಇಲ್ಲದಿದ್ದರೆ ರಸ್ತೆಯಲ್ಲಿ ಓಡಾಡಲು ಆಗುತ್ತಿರಲಿಲ್ಲ. ಮನೆಯಿಲ್ಲದ ಬಡವರು ಬೆಳಗಿನ ಹೊತ್ತು ರಸ್ತೆ ಬದಿಯಲ್ಲಿ ಬೆಂಕಿ ಹಚ್ಚಿಕೊಂಡು ಅದರ ಮುಂದೆ ನಡುಗುತ್ತ ಕುಳಿತುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಅಂಥ ಚಳಿ ಈಗ ಇಲ್ಲವೇ ಇಲ್ಲ.

    ಪೂನಂ ಪಾಂಡೆ ಎಂಬ ಬಾಲಿವುಡ್ ನಟಿಯ ಹೆಸರು ನಿಮಗೆ ನೆನಪಿರಬಹುದು. ಹೌದು ಅವಳೇ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬತ್ತಲೆ, ಅರೆಬತ್ತಲೆ ಫೋಟೋಗಳನ್ನು ಹಾಕಿ ರಸಿಕರ ನಿದ್ದೆಗೆಡಿಸಿದ್ದ ಸೆಕ್ಸಿ ತಾರೆ. 2011ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಗೆದ್ದರೆ ತಾನು ಬತ್ತಲಾಗುತ್ತೇನೆ ಎಂದು ಘೊಷಿಸುವ ಮೂಲಕ ಭಾರೀ ಸುದ್ದಿಯಾದವಳು. ‘‘ನಾವೆಲ್ಲಾ ಅವಳನ್ನು ಎಂದೋ ಮರೆತಿದ್ದೇವೆ. ನೀವು ಇನ್ನೂ ನೆನಪಿಟ್ಟುಕೊಂಡಿದ್ದೀರಾ?’’ ಎಂದು ಹುಬ್ಬೇರಿಸಬೇಡಿ. ಪೂನಂ ಪಾಂಡೆಯನ್ನು ನಾನೀಗ ನೆನಪು ಮಾಡಿಕೊಳ್ಳಲು ಕಾರಣ ಆಕೆಯ ಬಗ್ಗೆ ನಾನು ಬರೆದ ಚಳಿಗಾಲ ಎಂಬ ಈ ಹನಿಗವನ:

    ಪೂನಂ ಪಾಂಡೆ ಏನು ಮಹಾ?

    ಬತ್ತಲಾಗುವುದು ಗೊತ್ತು

    ನಮಗೂ ಸಹಾ

    ಎನ್ನುತ್ತ ಸ್ವಲ್ಪವೂ ನಾಚಿಕೆ ಇಲ್ಲದೆ

    ಎಲ್ಲರ ಎದುರಲ್ಲೆ

    ಕಿತ್ತು ಬಿಸಾಕುತ್ತಿವೆ

    ಮರಗಳು ತಮ್ಮ ಎಲೆ!

    ಚಳಿಗೆ ಹೆದರುವ ನಾವು ಅಂಗಿಯ ಮೇಲೆ ಸ್ವೆಟರು, ಉಣ್ಣೆಯ ಕೋಟು, ಕಿವಿ ಮುಚ್ಚುವ ಟೋಪಿ ಧರಿಸಿ ನಮ್ಮ ದೇಹವನ್ನು ರಕ್ಷಿಸಿಕೊಳ್ಳುತ್ತೇವೆ. ಆದರೆ ಮರಗಿಡಗಳು ಚಳಿಗೆ ಸೊಪ್ಪು ಹಾಕುವುದಿಲ್ಲ. ತಮ್ಮ ಸೊಪ್ಪಿನ ಉಡುಗೆಯನ್ನು ಕಿತ್ತೆಸೆದು ಸಾಮೂಹಿಕ ‘ಬತ್ತಲೆ ಸೇವೆ’ ನಡೆಸುತ್ತವೆ. ಮರಗಿಡಗಳಂತೆ ಪ್ರಾಣಿಗಳೂ ಚಳಿಗೆ ಮನುಷ್ಯರಷ್ಟು ಅಂಜುವುದಿಲ್ಲ.

    ಮನುಷ್ಯರಲ್ಲೂ ಚಳಿಗೆ ಹೆಚ್ಚು ಹೆದರಿಕೊಳ್ಳುವವರು ವೃದ್ಧರು. ಚಿಕ್ಕ ಮಕ್ಕಳಿಗೂ ಚಳಿ ಒಳ್ಳೆಯದಲ್ಲ. ಆದರೆ ಪ್ರೇಮಿಗಳಿಗೆ, ಯುವ ದಂಪತಿಗಳಿಗೆ ಚಳಿಯೇ ಇಷ್ಟ. ಪ್ರೀತಿಸುವುದಕ್ಕೆ ಚಳಿಗಾಲ ಇನ್ನಷ್ಟು ಅನುಕೂಲ. ಮಹಾಕವಿ ಕಾಳಿದಾಸನ ಋತುಸಂಹಾರದಲ್ಲಿ ಬರುವ ಶಿಶಿರ ಋತುವಿನ ವರ್ಣನೆಯನ್ನು ಓದಿದರೆ ಆ ಕಾಲದಲ್ಲಿ ಜನರು ಅದೆಷ್ಟು ರಸಿಕರಾಗಿದ್ದರು ಅನ್ನುವುದು ತಿಳಿಯುತ್ತದೆ. ಶಿಶಿರದಲ್ಲಿ ದಪ್ಪದ ಬಟ್ಟೆಗಳು ಮಾತ್ರವಲ್ಲ ಹರಯದ ಹೆಣ್ಣುಗಳೂ ಪ್ರಿಯವೆನ್ನಿಸುತ್ತದೆ ಅನ್ನುವುದು ಕಾಳಿದಾಸನ ಅಭಿಮತ.

    ಆದ್ದರಿಂದಲೇ ಇರಬೇಕು ಜಗಳಗಂಟಿ ಹೆಂಡತಿಯೂ ಚಳಿಗಾಲದಲ್ಲಿ ಸುಂದರಿಯಾಗಿ ಕಾಣುತ್ತಾಳೆ. ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಅನ್ನುವ ಗಾದೆ ಚಳಿಗಾಲದಲ್ಲಂತೂ ಸುಳ್ಳಲ್ಲ. ವೃತ್ತಿಯಲ್ಲಿ ವಕೀಲರಾದ ನನ್ನ ಮಿತ್ರರೊಬ್ಬರು ಚಳಿಗಾಲದಲ್ಲಿ ವಿಚ್ಛೇದನದ ಕೇಸುಗಳು ಬರುವುದಿಲ್ಲ ಎಂದು ಗೊಣಗುತ್ತಿರುತ್ತಾರೆ. ಚಳಿಗಾಲದಲ್ಲಿ ಕೋರ್ಟುಗಳಿಗೆ ರಜೆ ಇರುತ್ತದೆ. ನನ್ನ ಪ್ರಕಾರ ಚಳಿಗಾಲದಲ್ಲಿ ಪ್ರಕೃತಿಯೇ ಒಂದು ಕೋರ್ಟು. ಇಲ್ಲಿ ಏನು ನಡೆಯುತ್ತದೆ ಗೊತ್ತೆ?

    ನಿಸರ್ಗ ಒಂದು ನ್ಯಾಯಾಲಯ

    ನ್ಯಾಯಾಧೀಶ ಚಳಿರಾಯ

    ಪ್ರೀತಿಸಿದ ತಪ್ಪಿಗೆ

    ಶಿಕ್ಷೆ ನೀಡುತ್ತಾನೆ ಪ್ರೇಮಿಗಳಿಗೆ

    ಇರುಳಿಡೀ ಆಲಿಂಗನ

    ಬಾಹು ಬಂಧನ!

    ಇದೆಲ್ಲ ಪ್ರೇಮಿಗಳ, ಮದುವೆಯಾದವರ ಕತೆಯಾಯಿತು. ನಲ್ಲೆ ಇಲ್ಲದ ನತದೃಷ್ಟರು ಚಳಿಗಾಲದಲ್ಲಿ ಏನು ಮಾಡುವುದು ಅನ್ನುತ್ತೀರಾ? ನಿಜಕ್ಕೂ ಅವರ ಪರಿಸ್ಥಿತಿ ಶೋಚನೀಯ. ಅಂಥವರು-

    ನಡುಗುತ್ತಿದ್ದೇನೆ ಗಡ ಗಡ

    ನಲ್ಲೆ ಇಲ್ಲ ಸಂಗಡ

    ಕಡಿಯುತ್ತಿದ್ದೇನೆ ಹಲ್ಲು ಕಟಕಟ

    ವಿರಹದ ಸಂಕಟ!

    ಎಂದು ಚಳಿಗಾಲದಲ್ಲಿ ತಮ್ಮ ಒಬ್ಬಂಟಿತನದ ಪಾಡನ್ನು ಬಣ್ಣಿಸುವ ಚುಟುಕುಗಳನ್ನು ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿ ಹುಡುಗಿಯರ ಪ್ರತಿಕ್ರಿಯೆಗಾಗಿ ಕಾಯುತ್ತ ಕೂರಬಹುದು. ಅವಿವಾಹಿತರು ಹತಾಶರಾಗುವುದು ಬೇಡ. ಚಳಿಗಾಲದಲ್ಲಿ ಬೋಳಾಗಿ ನಿಂತ ಮರ ಬೇಸಿಗೆಯಲ್ಲಿ ಚಿಗುರುವಂತೆ ಅವರಿಗೂ ಬಾಳಿನಲ್ಲಿ ನವವಸಂತ ಬರುತ್ತದೆ.

    ದಪ್ಪದ ರಗ್ಗು ಹೊದ್ದುಕೊಂಡು ಮನೆಯೊಳಗೆ ಬೆಚ್ಚಗೆ ಮಲಗಿಕೊಳ್ಳಲು ಚಳಿಗಾಲವೇ ಹಿತಕರ. ಚಳಿ ತಡೆಯಲು ರಗ್ಗು ಸಾಲದೆಂಬ ನೆಪ ಹೇಳಿ ಎರಡು ಪೆಗ್ಗು ಏರಿಸಿ ಮಲಗುವವರೂ ಇರುತ್ತಾರೆ! ಸೂರ್ಯನೂ ಚಳಿಗಾಲದಲ್ಲಿ ಮುಗಿಲ ಕಂಬಳಿ ಹೊದ್ದು ಮಲಗುವುದರಿಂದ ಎಷ್ಟೋ ಸಲ ಗಂಟೆ ಏಳಾದರೂ ಏಳುವುದೇ ಇಲ್ಲ. ಹಗಲಿಗಿಂತ ರಾತ್ರಿ ಚಳಿ ಹೆಚ್ಚು. ಹೀಗಾಗಿ ಚಳಿಗಾಲ ಚಂದ್ರನಿಗೆ ತುಂಬಾ ಕಷ್ಟ.

    ಗಡಗಡ ನಡುಗುತ್ತ

    ಚಂದ್ರ ಹೇಳುತ್ತಿದ್ದ

    ತಾರೆಯ ಬಳಿ

    ನಮ್ಮ ವೈರಿಗೂ ಬೇಡ

    ಚಳಿಗಾಲದಲ್ಲಿ ರಾತ್ರಿಪಾಳಿ

    ಉತ್ತರ ಭಾರತದಲ್ಲಿ ಚಳಿ ಮತ್ತು ಶೀತ ಮಾರುತದ ಹಾವಳಿ ವಿಪರೀತ. ಚಳಿಗಾಲದಲ್ಲಿ ಪ್ರತಿ ವರ್ಷವೂ ಪತ್ರಿಕೆಯಲ್ಲಿ ಉತ್ತರ ತತ್ತರ ಎಂಬ ಶೀರ್ಷಿಕೆ ಬಂದೇ ಬರುತ್ತದೆ. ಹಲವು ವರ್ಷಗಳ ಹಿಂದೆ ನಾನು ಪ್ರವಾಸಕ್ಕೆಂದು ಸಿಕ್ಕಿಂಗೆ ಹೋಗಿದ್ದೆ. ಅಲ್ಲಿನ ಪ್ರಸಿದ್ಧ ಪ್ರವಾಸಿ ತಾಣ ಶಾಂಗೂ ಲೇಕ್​ನಲ್ಲಿ ದೋಣಿವಿಹಾರ ಮಾಡುವ ಕನಸು ಕಾಣುತ್ತ ಬೆಟ್ಟ ಹತ್ತಿದರೆ, ಚಳಿಯಿಂದಾಗಿ ನೀರು ಹೆಪ್ಪುಗಟ್ಟಿ ಶಾಂಗೂ ಸರೋವರ ಅಮೃತಶಿಲೆ ಹಾಸಿದ ಮೈದಾನದಂತೆ ಕಾಣುತ್ತಿತ್ತು.

    ಚಳಿಗೆ ನಾನು ಸೋತು ಸಂಪೂರ್ಣ ಶರಣಾದದ್ದು ಎರಡು ವರ್ಷಗಳ ಕೆಳಗೆ ಅಮೆರಿಕದ ಸಿಯಾಟೆಲ್ ನಗರಕ್ಕೆ ಹೋದಾಗ. ನಾನು ಅಲ್ಲಿಗೆ ಹೋದದ್ದು ಅಕ್ಟೋಬರ್ ತಿಂಗಳಲ್ಲಿ. ಆಗ ಅಲ್ಲಿನ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆಲಿಶಿಯಸ್ ಇತ್ತು. ಮನೆಯೊಳಗೆ ಹೀಟರ್ ಇದ್ದದ್ದರಿಂದ ಚಳಿ ಗೊತ್ತಾಗುತ್ತಿರಲಿಲ್ಲ. ಹೊರಗೆ ಹೋದರೆ ಸೂರ್ಯನ ದರ್ಶನವೇ ಇಲ್ಲ. ಒಂದೇ ಸಮನೆ ಸುಯ್ಯೆಂದು ಬೀಸುವ ಥಂಡಿ ಗಾಳಿ. ನನ್ನ ಬಳಿ ಥರ್ಮಲ್ ವೇರ್, ಒಳ್ಳೆಯ ಜಾಕೆಟ್, ಕಾಲಿಗೆ ಸಾಕ್ಸ್, ಕೈಗಳಿಗೆ ಗ್ಲೌಸ್, ಕಿವಿ ಮುಚ್ಚಲು ಉಣ್ಣೆಯ ಟೋಪಿ ಮುಂತಾದವುಗಳು ಇದ್ದರೂ ಹೊರಗೆ ಹೋದ ಸ್ವಲ್ಪ ಹೊತ್ತಿಗೆ ಮೈ ನಡುಗಲು ಶುರುವಾಗುತ್ತಿತ್ತು.

    ಆ ಊರಿನಲ್ಲೆ ವಾಸವಾಗಿದ್ದ ನನ್ನ ಮಗ ಸಾರ್ಥಕ ಇದು ಚಳಿಯೇ ಅಲ್ಲ ಅನ್ನುತ್ತಿದ್ದ. ಅಲ್ಲಿ ಜನವರಿ ತಿಂಗಳಲ್ಲಿ ಉಷ್ಣತೆ ಶೂನ್ಯಕ್ಕಿಂತಲೂ ಕೆಳಗಿಳಿದು ರಸ್ತೆಯ ಮೇಲೆ ಐದಾರು ಇಂಚುಗಳಷ್ಟು ಮಂಜು ಬೀಳುತ್ತದಂತೆ. ಸಿಯಾಟೆಲ್​ನಲ್ಲಿ ಸಹಿಸಲಾಗದಷ್ಟು ಚಳಿ ಇದ್ದರೂ ಅಲ್ಲಿನ ಮಹಿಳೆಯರು ಎಂದಿನಂತೆ ಅತೀ ಕಡಿಮೆ ವಸ್ತ್ರ ಧರಿಸಿ ಓಡಾಡುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆ ಕುರಿತು ನಾನು ಬರೆದ ಹನಿಗವನವನ್ನು ಓದುವಂಥವರಾಗಿ.

    ವಿಪರೀತ ಥಂಡಿ ಇದ್ದರೂ

    ಅಮೆರಿಕದ ಮಹಿಳೆಯರು

    ತುಂಡು ಬಟ್ಟೆ ತೊಟ್ಟಿದ್ದಾರೆ

    ಏಕೆಂದರೆ ಅವರು

    ಮೈ ಚಳಿ ಬಿಟ್ಟಿದ್ದಾರೆ!

    ನಮ್ಮ ಹಾಗೆ ಅವರಿಗೆ ಯಾವ ಸಂಕೋಚವೂ ಇಲ್ಲ. ಚಳಿ ಜಾಸ್ತಿಯಾಯಿತು ಅನ್ನಿಸಿದರೆ ರಸ್ತೆಯಲ್ಲೆ ಗಂಡು ಹೆಣ್ಣು ಗುಂಡು ಹಾಕುತ್ತಾ ಒಬ್ಬರನ್ನೊಬ್ಬರು ಚುಂ-ಬಿಸಿ ಮೈ ಬಿಸಿ ಮಾಡಿಕೊಳ್ಳುತ್ತಾರೆ.

    ಉಷ್ಣ ವಲಯದ ನಾವು ಅದೃಷ್ಟವಂತರು. ಇನ್ನೇನು ಮಕರ ಸಂಕ್ರಾಂತಿ ಬಂದೇ ಬಿಟ್ಟಿತು. ಇನ್ನು ಮೇಲೆ ಚಳಿ ಕಡಿಮೆಯಾಗುತ್ತಾ ಹೋಗುತ್ತದೆ. ಶಿವರಾತ್ರಿಯ ನಂತರ ಚಳಿಗಾಲ ಮುಗಿಯಿತೆಂದೇ ತಿಳಿಯಬಹುದು. ಆದ್ದರಿಂದ ಎಂಥಾ ಕೆಟ್ಟ ಚಳಿ ಮಾರಾಯ್ರೆ ಎಂದು ದೂರುವುದು ಬೇಡ. ಚಳಿ ತುಂಬಾ ಹಿತವಾಗಿದೆ ಅನ್ನುತ್ತಾ ಮನೆ ಮನೆಗೆ ಹೋಗಿ ಎಳ್ಳು ಬೀರೋಣ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತು ಆಡೋಣ.

    ಪರಸ್ಪರ ಕಿತ್ತಾಡುತ್ತಾ ಕೆಟ್ಟ ಮಾತಾಡುವ ಕೆಲಸವನ್ನು ರಾಜಕೀಯ ಪುಢಾರಿಗಳಿಗೆ ಬಿಟ್ಟು ಬಿಡೋಣ!

    ಮುಗಿಸುವ ಮುನ್ನ:

    ವರ್ಷದಲ್ಲಿ ಒಂದು ದಿನವಾದರೂ

    ಒಳ್ಳೆ ಮಾತಾಡುತ್ತಾ ಎಳ್ಳು ಬೀರು

    ಉಳಿದ ದಿನಗಳಲ್ಲಿ ಇದ್ದೇ ಇರುತ್ತೆ

    ವಿಸ್ಕಿ, ರಮ್ಮು, ಬೀರು! 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts