More

    ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಬಿರುಕು

    ಮಂಗಳೂರು: ವಿಳಂಬ ಕಾಮಗಾರಿಯಿಂದ ಹಲವು ವರ್ಷಗಳ ಕಾಲ ಚರ್ಚೆಯಲ್ಲಿದ್ದ ಪಂಪ್‌ವೆಲ್ ಮೇಲ್ಸೇತುವೆಯ ರಸ್ತೆ ಹಾಗೂ ತಡೆಗೋಡೆ ಮೊದಲ ಮಳೆಗೆ ಬಿರುಕು ಕಾಣಿಸಿಕೊಂಡಿದೆ. ಉದ್ಘಾಟನೆಯಾಗಿ ಎರಡು ತಿಂಗಳ ಅವಧಿಯಲ್ಲಿ ಸೇತುವೆಯ ಒಂದು ಭಾಗದಲ್ಲಿ ಬಿರುಕು ಬಿಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

    ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಕೇವಲ 2 ತಿಂಗಳಲ್ಲಿ ಟಿಪ್ಪರ್‌ಗಳಲ್ಲಿ ಲೋಡ್‌ಗಟ್ಟಲೆ ಮಣ್ಣು ತಂದು ಸುರಿಯಲಾಗಿತ್ತು. ಇದನ್ನು ನೀರು ಹಾಕಿ ಹದ ಮಾಡುವ ಅಥವಾ ರೋಲರ್ ಬಳಸಿ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆ ನಡೆದಿರಲೇ ಇಲ್ಲ. ಇದೇ ರೀತಿ ಸುಮಾರು 4.5 ಮೀ.ನಷ್ಟು ಮಣ್ಣು ತುಂಬಿಸಲಾಗಿತ್ತು. ಈ ರೀತಿ ಮಣ್ಣು ಹಾಕಿದ್ದರಿಂದ ಮಳೆ ಬರುವಾಗ ಮೇಲ್ಸೆತುವೆ ಮೇಲ್ಭಾಗದಲ್ಲಿ ಬಿರುಕು ಬಿದ್ದಿರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    600 ಮೀ. ಉದ್ದ ಹಾಗೂ 20 ಮೀ. ಅಗಲವಿರುವ ಈ ಮೇಲ್ಸೇತುವೆಯಲ್ಲಿ ಸದ್ಯ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಸಂಚಾರ ಬೆರಳೆಣಿಕೆಯಲ್ಲಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕ ಬೃಹತ್ ವಾಹನಗಳ ಓಡಾಟ ಹೆಚ್ಚಳಗೊಂಡಾಗ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅವೈಜ್ಞಾನಿಕವಾಗಿ ಅವಸರದಲ್ಲಿ ಗುಣಮಟ್ಟ ಪರೀಕ್ಷಿಸದೆ ಕಾಮಗಾರಿ ನಿರ್ವಹಿಸಿದ ಕಾರಣ ಬಿರುಕು ಕಾಣಿಸಿಕೊಳ್ಳಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಸರ್ವಿಸ್ ರಸ್ತೆಗಳಲ್ಲಿ ಕೆಸರು: ಶನಿವಾರ ಮಳೆ ಸುರಿದ ಬಳಿಕ ಮೇಲ್ಸೇತುವೆಯ ಇಕ್ಕೆಲಗಳ ಸರ್ವಿಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರು ತುಂಬಿದೆ. ಬಳಿಕ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಮಳೆಗಾಲ ಆರಂಭಗೊಳ್ಳುವ ಮುನ್ನ ಸರ್ವಿಸ್ ರಸ್ತೆಗಳನ್ನು ಸರಿಪಡಿಸದಿದ್ದರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪಂಪ್‌ವೆಲ್ ಸೇತುವೆಯಲ್ಲಿ ಬಿರುಕು ಉಂಟಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

    ಶಿಶುಮೋಹನ್ ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ

     

    https://www.vijayavani.net/miscreants-loot-sandalwood-during-lockdown/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts