More

    ಮಾಸಾಂತ್ಯಕ್ಕೆ ಪಂಪ್‌ವೆಲ್ ಫ್ಲೈಓವರ್ ಪೂರ್ಣ

    ಮಂಗಳೂರು: ದಶಕದ ಕಾಮಗಾರಿ ಇತಿಹಾಸ ಹೊಂದಿರುವ, ಹಲವು ಬಾರಿ ಟೀಕೆಗಳಿಗೂ ಗುರಿಯಾಗಿದ್ದ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಎರಡನೇ ಡೆಡ್‌ಲೈನ್‌ಗೆ (ಜ.31)ಮುಕ್ತಾಯಗೊಳ್ಳುವ ಲಕ್ಷಣ ಕಾಣಿಸತೊಡಗಿದೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ಯೋಜನಾ ನಿರ್ದೇಶಕ ಹಾಗೂ ನವಯುಗ ಸಂಸ್ಥೆ ನಿರ್ದೇಶಕರು ಜಿಲ್ಲಾಧಿಕಾರಿಯವರಿಗೆ ನೀಡಿರುವ ಜಂಟಿ ಲಿಖಿತ ವಾಗ್ದಾನ ಪತ್ರದಂತೆ ಜ.15ರಂದು ಫ್ಲೈಓವರ್‌ನ ತೋಕ್ಕೋಟು ಕಡೆಯ ಸೇತುವೆ ರಸ್ತೆ ಸಂಪರ್ಕ ದೊರೆಯುವುದು ಬಹುತೇಕ ಖಚಿತವಾಗಿದೆ.

    ಫ್ಲೈಓವರ್‌ನ ಇನ್ನೊಂದು ಭಾಗ ನಂತೂರು ಕಡೆಯಿಂದ ಜನವರಿ ಮಾಸಾಂತ್ಯದೊಳಗೆ ರಸ್ತೆ ಸಂಪರ್ಕ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ನೀಡಿರುವ ಲಿಖಿತ ವಾಗ್ದಾನ ಕೂಡ ಈ ಬಾರಿ ಈಡೇರುವ ಸಾಧ್ಯತೆಗಳಿವೆ. ಈ ಭಾಗದಲ್ಲಿ ಕೂಡ ರಸ್ತೆಯ ಇಕ್ಕೆಲದ ತಡೆಗೋಡೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ತಡೆಗೋಡೆಗಳ ನಡುವೆ ಮಣ್ಣು ತುಂಬಿಸಿ ಗಟ್ಟಿಗೊಳಿಸುವ ಕಾಮಗಾರಿ ನಡೆಯುತ್ತಿದೆ. ದಿನಂಪ್ರತಿ ಹಗಲಿನಲ್ಲಿ ಮಾತ್ರವಲ್ಲದೆ, ರಾತ್ರಿ ಕೂಡ ವಿದ್ಯುತ್ ದೀಪದ ಬೆಳಕಿನಲ್ಲಿ ಕಾಮಗಾರಿ ನಡೆಯುತ್ತಿದೆ.

    ಫಲ ನೀಡಿದ ಡಿಸಿ ಪರಿಶೀಲನೆ: ಡಿ.31ರಂದು ಸಂಸದ ನಳಿನ್‌ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಮಗಾರಿ ಮೇಲ್ವಿಚಾರಣೆ ಜವಾಬ್ದಾರಿ ಜಿಲ್ಲಾಧಿಕಾರಿಗೆ ನೀಡಿರುವುದು ಫಲ ನೀಡಿದೆ. ಎನ್‌ಎಚ್‌ಎಐ ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಮಂಗಳೂರು ತಹಸೀಲ್ದಾರರನ್ನು ಒಳಗೊಂಡಿರುವ ನಾಲ್ಕು ಮಂದಿ ಸಮಿತಿ ಕಾಮಗಾರಿ ದೈನಂದಿನ ಪ್ರಗತಿ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಸದಸ್ಯರ ಜತೆ ಜಿಲ್ಲಾಧಿಕಾರಿ ದಿನಂಪ್ರತಿ ಸಭೆ ನಡೆಸುತ್ತಾರೆ. ಬಳಿಕ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಅಗತ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಕಾಮಗಾರಿ ದೀರ್ಘಾವಧಿ ತೆಗೆದುಕೊಂಡಿರುವ ಮತ್ತು ಹಲವು ಬಾರಿ ಲಿಖಿತ ಹಾಗೂ ಮೌಖಿಕ ಭರವಸೆ ನೀಡಿದ ಬಳಿಕವೂ ಗುತ್ತಿಗೆದಾರರು ಪದೇಪದೆ ಕಾಮಗಾರಿ ಪೂರ್ಣಗೊಳಿಸುವ ದಿನ ಮುಂದೂಡುತ್ತ ಬಂದಿತ್ತು.

    ಕಾನೂನು ಕ್ರಮ: ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿ ಸರ್ಕಾರದ ಕೋಟ್ಯಂತರ ರೂ.ವ್ಯಯಿಸಿ ಮೋಸ ಮಾಡಲಾಗಿದೆ. ಸಾರ್ವಜನಿಕರ ದಿಕ್ಕು ತಪ್ಪಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲಾಗಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಮತ್ತು ನವಯುಗ ಸಂಸ್ಥೆ ನಿರ್ದೇಶಕರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಈ ಬಾರಿ ಡೆಡ್‌ಲೈನ್‌ನೊಳಗೆ ಕಾಮಗಾರಿ ಮುಗಿಯದಿದ್ದರೆ ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿಕೊಂಡಿದೆ. ಕಾಮಗಾರಿ ವೇಗವಾಗಿ ನಡೆಯುವ ಜತೆಗೆ ಗುಣಮಟ್ಟದಲ್ಲಿ ಯಾವುದೇ ರೀತಿ ಲೋಪವೂ ಸಂಭವಿಸದಂತೆ ಕಾಮಗಾರಿ ಪರಿವೀಕ್ಷಣಾ ಸಮಿತಿ ಕಣ್ಣಿಟ್ಟಿದೆ. ಕಾಲಕಾಲಕ್ಕೆ ಸಂಬಂಧಪಟ್ಟವರಿಗೆ ಮಾರ್ಗದರ್ಶನವನ್ನೂ ನೀಡುತ್ತಿದೆ.

     ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಪ್ರಗತಿ ಕುರಿತು ಸಮಿತಿ ಜಿಲ್ಲಾಧಿಕಾರಿಗೆ ದಿನಂಪ್ರತಿ ವರದಿ ನೀಡುತ್ತಿದೆ. ಪ್ರಸ್ತುತ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಸಮಿತಿ ಸದಸ್ಯರಾಗಿರುವ ಇಂಜಿನಿಯರ್‌ಗಳು ಪರೀಕ್ಷೆ ನಡೆಸುತ್ತಿದ್ದಾರೆ.
    – ಗುರುಪ್ರಸಾದ್
    ತಹಸೀಲ್ದಾರ್, ಮಂಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts