More

    ಪಲ್ಸ್ ಪೋಲಿಯೋ ಕಾರ್ಯಕ್ರಮ ಮಕ್ಕಳ ಆರೋಗ್ಯ ಕಾಳಜಿ ವಹಿಸಿ

    ಬಾಗಲಕೋಟೆ: ಇಂದಿನ ಮಕ್ಕಳು ದೇಶದ ಭವ್ಯ ಪ್ರಜೆಗಳಾಗಿದ್ದಾರೆ. ಅವರು ಆರೋಗ್ಯವಾಗಿದ್ದರೆ ದೇಶ ಸದೃಢಗೊಳ್ಳಲಿದೆ. ಹೀಗಾಗಿ ದೇಶವನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

    ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ನಗರದ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ದೇಶ ಪೋಲಿಯೋ ಮುಕ್ತವಾಗಿದ್ದರೂ ಭವಿಷ್ಯದ ಹಿತದೃಷ್ಟಿಯಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ನೀಡಲಾಗುತ್ತಿದೆ. ಸರ್ಕಾರದ ಈ ಸೌಲಭ್ಯವನ್ನು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಒಂದೇ ಒಂದು ಮಗು ಪೋಲಿಯೋಗೆ ಗುರಿಯಾದರೆ, ಆ ಮಗು ಜೀವನಪರ್ಯಂತ ನೋವು ಅನುಭವಿಸುತ್ತದೆ. ಈ ಕುರಿತು ಎಲ್ಲರಿಗೂ ತಿಳಿವಳಿಕೆ ನೀಡಬೇಕು. ಸರ್ಕಾರ ರೋಗಗಳು ಹರಡದಂತೆ ತೆಗೆದುಕೊಂಡಂತಹ ಕ್ರಮಗಳಿಂದಲೇ ಇಂದು ದೇಶದಲ್ಲಿ ಮಲೇರಿಯಾ, ಟಿಬಿ ಯಂತಹ ರೋಗಗಳು ಕಡಿಮೆಯಾಗಿವೆ. ಮಾ.6 ರವರೆಗೆ ಹಮ್ಮಿಕೊಂಡಿರುವ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.

    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಹೋರಾಟದಿಂದಲೇ ಪೋಲಿಯೋ ಮುಕ್ತ ಭಾರತವಾಗಿದೆ. ಮೊದ ಮೊದಲು ಹನಿ ಹಾಕಿಸಲು ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕ್ರಮೇಣ ತಿಳಿವಳಿಕೆ ಮೂಡಿದಂತೆ ರೋಗ ನಿಯಂತ್ರಣಕ್ಕೆ ಬಂದಿದೆ. ಈ ಕಾಯಿಲೆಯ ಸಂಪೂರ್ಣ ನಿರ್ಮೂಲನೆಗಾಗಿ ಪ್ರತಿಯೊಬ್ಬ ಪಾಲಕ ಗಂಭೀರವಾಗಿ ಯೋಚಿಸಿ ತಮ್ಮ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸುವರ್ಣ ಕುಲಕರ್ಣಿ ಮಾತನಾಡಿ, ಜಿಲ್ಲೆಯ ಎಲ್ಲ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡಲು ಆರೋಗ್ಯ ಇಲಾಖೆ ಅಧಿಕಾರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬರುವರೆಗೂ ಕಾಯದೆ ಹತ್ತಿರದ ಬೂತ್ ಕೇಂದ್ರಗಳಿಗೆ ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ಪಾಲಕರು ಕರೆದುಕೊಂಡು ಹೋಗಿ ಪೋಲಿಯೋ ಹನಿ ಕೊಡಿಸಬೇಕು ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್, ಪಲ್ಸ್ ಪೋಲಿಯೋ ಅಭಿಯಾನದ ಬಾಗಲಕೋಟೆ ನೋಡಲ್ ಅಧಿಕಾರಿ ಡಾ.ಎ.ಎನ್.ದೇಸಾಯಿ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ತಾಲೂಕು ವೈದ್ಯಾಧಿಕಾರಿ ಇತರರು ಇದ್ದರು. ಅಶೋಕ ನೀಲಮಣಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts