More

    30ರಿಂದ ಪಿಯು, ಸದ್ಯಕ್ಕಿಲ್ಲ ಡಿಗ್ರಿ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ಸೂಚ್ಯಂಕ ಶೇ.2.4ರಷ್ಟಿರುವ ಕಾರಣ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಸೆ.15ರವರೆಗೆ ಪ್ರಾರಂಭಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಆದರೆ, ಪದವಿಪೂರ್ವ ಕಾಲೇಜುಗಳನ್ನು ಮಾತ್ರ ಆ.30ರಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ.

    ಈ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಿಯು ಕಾಲೇಜುಗಳನ್ನು ಆ.30ರಿಂದಲೇ ಶುರು ಮಾಡುವುದು ಎಂದು ತೀರ್ಮಾನಿಸಲಾಗಿತ್ತು.
    ದ್ವಿತೀಯ ಪಿಯು ತರಗತಿಗಳಲ್ಲಿ ಮುಖ್ಯವಾಗಿ ವಿಜ್ಞಾನ, ಕಾಮರ್ಸ್ ವಿಭಾಗಗಳನ್ನು ಆನ್‌ಲೈನ್ ಪಾಠ ಮಾಡುವುದು ತೀರ ಕಷ್ಟಕರ. ಇನ್ನೊಂದೆಡೆ ಜಿಲ್ಲೆಯಲ್ಲಿ ಬಹುತೇಕ ಪಿಯು ಕಾಲೇಜುಗಳಿಗೆ ಹೊರರಾಜ್ಯದ ವಿದ್ಯಾರ್ಥಿಗಳು ಬರುವುದು ಕಡಿಮೆ. ಬದಲು ಹೊರಜಿಲ್ಲೆಗಳವರು ಇಲ್ಲಿ ಬಂದು ರೆಸಿಡೆನ್ಶಿಯಲ್ ಆಗಿ ಕಲಿಯುವುದು ಹೆಚ್ಚು. ಹಾಗಾಗಿ ಕೋವಿಡ್ ಸಂಖ್ಯೆ ಹಿಗ್ಗದು ಎನ್ನುವುದು ಜಿಲ್ಲಾಡಳಿತದ ಲೆಕ್ಕಾಚಾರ. ಪಿಯು ಭೌತಿಕ ತರಗತಿ ಆರಂಭಕ್ಕೆ ಬೇಕಾದ ಮಾರ್ಗಸೂಚಿಗಳನ್ನು 28ರಂದು ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
    ಇನ್ನೊಂದೆಡೆ ಪದವಿ ತರಗತಿಯವರಿಗೆ ಲಸಿಕೆ ಆದರೂ ಯಾಕೆ ಶುರು ಆಗಿಲ್ಲ ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹೇಳುವುದು ಹೀಗೆ: ಪದವಿ ತರಗತಿಗಳಿಗೆ ಸದ್ಯ ಪರೀಕ್ಷೆ ನಡೆಯುತ್ತಿದ್ದು, ಸೆ.7ರವರೆಗೂ ಮುಂದುವರಿಯಲಿದೆ. ಎಲ್ಲರಿಗೂ ಒಟ್ಟಿಗೇ ತರಗತಿ ಬೇಡ, ಹಾಗಾಗಿ ಕಾದು ನೋಡಿ ಸೆ.15ರಿಂದ ಪದವಿ ತರಗತಿಗಳನ್ನೂ ಶುರು ಮಾಡುತ್ತೇವೆ.

    ಡಿಗ್ರಿ ಕಾಲೇಜು ಸದ್ಯಕ್ಕಿಲ್ಲ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಭೌತಿಕ ತರಗತಿ ಪ್ರಾರಂಭಿಸುವ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಸೆ.15ರವರೆಗೆ ಯಾವುದೇ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜುಗಳ ತರಗತಿ ಆರಂಭಿಸದೆ ಆನ್‌ಲೈನ್ ಮೂಲಕವಷ್ಟೇ ತರಗತಿ ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಪಾಸಿಟಿವಿಟಿ ಕಡಿಮೆಯಾದರೆ ಸೆ.15ರ ಬಳಿಕ ಮತ್ತೆ ಸಭೆ ನಡೆಸಿ ತರಗತಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ಬ್ಯಾಚ್‌ವೈಸ್ ಮೂಲಕ ಕೋವಿಡ್ ಮಾರ್ಗಸೂಚಿಗಳ ಅನುಸಾರ ನಡೆಸಬೇಕು, ವಿಜ್ಞಾನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿಭಾಗಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿ ನಡೆಸುವಂತೆ ತಿಳಿಸಿದರು.

    ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ಸಮಸ್ಯೆಯಾಗಿದೆ. ಜಿಲ್ಲಾಡಳಿತದಿಂದ ಪರ್ಯಾಯ ಮಾರ್ಗ ಹುಡುಕಿ ಅಂಥ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಕಲ್ಪಿಸಲಿದೆ ಎಂದರು.

    ಲಸಿಕೆ ಪಡೆಯದವರ ಮಾಹಿತಿ ನೀಡಿ: ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದ ಸಿಬ್ಬಂದಿಯ ಮಾಹಿತಿಯನ್ನು ಕಾಲೇಜು ಶಿಕ್ಷಣಾಧಿಕಾರಿಗಳು ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

    ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿವಿ ಕುಲಸಚಿವ ಕಿಶೋರ್ ಕೆ, ಕಾಲೇಜು ಶಿಕ್ಷಣ ವಿಶೇಷಾಧಿಕಾರಿ ಜಯಕರ ಭಂಡಾರಿ, ನಿಟ್ಟೆ ವಿವಿ ನೋಡಲ್ ಅಧಿಕಾರಿ ಡಾ.ದಾನೇಶ್ ಉಪಸ್ಥಿತರಿದ್ದರು.

    9, 10ನೇ ತರಗತಿ ಮುಂದೂಡಿಕೆ: ಮಂಗಳೂರು: ಕೋವಿಡ್- 19 ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ 9 ಹಾಗೂ 10ನೇ ತರಗತಿಗಳ ಭೌತಿಕ ತರಗತಿಗಳ ಶಾಲಾ ಪ್ರಾರಂಭ ಮುಂದೂಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಪಾಸಿಟಿವಿ ದರ ಶೇ.2ಕ್ಕಿಂತ ಹೆಚ್ಚು ಇರುವುದರಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳನ್ನು ಭೌತಿಕವಾಗಿ ಪ್ರಾರಂಭಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಶಾಲೆ ಪ್ರಾರಂಭದ ದಿನಾಂಕ ಮುಂದೆ ಪ್ರಕಟಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts