More

    ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಿ

    ಹುಣಸೂರು: ಯುವಸಮೂಹ ದುಶ್ಚಟಗಳಿಂದ ದೂರವಿರುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮೌಲಾನಾ ಸಜ್ಜದ್ ಅಹಮದ್ ಹೇಳಿದರು.

    ಪಟ್ಟಣದ ಗುರುಬೂದಿ ಮಂಗಳ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆ.ಆರ್.ನಗರದ ಜಿಲ್ಲಾ ಕಚೇರಿ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜನಜಾಗೃತಿ ಸಮಾವೇಶ ಮತ್ತು ವ್ಯಸನಮುಕ್ತರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಒಬ್ಬ ವ್ಯಕ್ತಿಯಿಂದ ಸಮಾಜ ಸೃಷ್ಟಿಯಾಗುವುದಿಲ್ಲ. ಸಮಾಜದ ಸುಧಾರಣೆ ಮತ್ತು ಅವನತಿ ಅಲ್ಲಿನ ಪಾಪಕೃತ್ಯಗಳನ್ನು ಅವಲಂಬಿಸಿದೆ. ಇಸ್ಲಾಂ ಧರ್ಮ ಸಾರ್ವತ್ರಿಕ ಧರ್ಮವಾಗಿದೆ. ಮದ್ಯಪಾನವೆನ್ನುವುದು ಎಲ್ಲ ಪಾಪಕೃತ್ಯಗಳಿಗೆ ತಾಯಿ ಇದ್ದಂತೆ ಎಂದು ಇಸ್ಲಾಂ ಅಭಿಪ್ರಾಯಪಡುತ್ತದೆ. ಇಡೀ ಸಮುದಾಯಕ್ಕೆ ಕಂಟಕಪ್ರಾಯವಾದ ಈ ದುಶ್ಚಟದಿಂದ ದೂರಾಗಲು ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಹೇಳಿದರು. ಹುಣಸೂರು ನಗರದ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ಗಾಂಜಾ, ಅಫೀಮು ಮುಂತಾದ ದುಶ್ಚಟಗಳಿಂದ ಯುವಸಮೂಹ ಬಳಲುತ್ತಿದ್ದು, ಪೊಲೀಸ್ ಇಲಾಖೆ ಇತ್ತ ಗಮನಹರಿಸಿ ನಿಯಂತ್ರಿಸಬೇಕಿದೆ ಎಂದು ಕೋರಿದರು.

    ಜಿಲ್ಲಾ ಕಚೇರಿಯ ನಿರ್ದೇಶಕ ಎಚ್.ಎಲ್.ಮುರಳೀಧರ್ ಮಾತನಾಡಿ, ಯೋಜನೆ ವತಿಯಿಂದ ಮೈಸೂರು ಜಿಲ್ಲೆಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಕೆ.ಆರ್.ನಗರ ಮತ್ತು ಮೈಸೂರು ಜಿಲ್ಲೆಗಳಾಗಿ ಗುರುತಿಸಿಕೊಳ್ಳಲಾಗಿದೆ. ಕೆ.ಆರ್.ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಹುಣಸೂರು, ಕೆ.ಆರ್.ನಗರ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ 7 ಯೋಜನಾ ಕಚೇರಿಗಳನ್ನು ಒಳಗೊಂಡಿದೆ. ಎಲ್ಲರ ಸಂಘಟಿತ ಪ್ರಯತ್ನದಿಂದ ಮಾತ್ರ ದುಶ್ಚಟಗಳು ದೂರ ಮಾಡಲು ಸಾಧ್ಯವೆನ್ನುವ ಅಭಿಪ್ರಾಯದೊಂದಿಗೆ ಯೋಜನೆ ವತಿಯಿಂದ ದುಶ್ಚಟ ಜಾಗೃತಿ ಜಾಥಾಗಳು, ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದು ವಿವರಿಸಿದರು.

    ಗ್ರಾಮೀಣ ಭಾಗಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ಜನಜಾಗೃತಿ ವೇದಿಕೆ ವತಿಯಿಂದ ಇದನ್ನು ವಿರೋಧಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗಿದೆ. ಜಿಲ್ಲಾ ಕಚೇರಿ ವ್ಯಾಪ್ತಿಯಲ್ಲಿ ಈವರೆಗೆ 27 ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ 1811 ಜನರನ್ನು ವ್ಯಸನಮುಕ್ತರನ್ನಾಗಿಸಲಾಗಿದೆ. 2023-24ನೇ ಸಾಲಿಗಾಗಿ 4 ಮದ್ಯವರ್ಜನ ಶಿಬಿರ ಆಯೋಜಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಎರಡು ಶಿಬಿರ ಆಯೋಜಿಸಿದ್ದು, 105 ಮಂದಿ ಶಿಬಿರದಲ್ಲಿ ಪಾಲ್ಗೊಂಡು ವ್ಯಸನಮುಕ್ತರಾಗಲು ಪ್ರೇರಣೆ ನೀಡಲಾಗಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಒಳಿತಿಗಾಗಿ ದುಡಿಯುವ ಮನಸ್ಸು ಎಲ್ಲರಲ್ಲೂ ಇರಬೇಕು. ಐಹಿಕಭೋಗಗಳು ಶಾಶ್ವತವಲ್ಲ. ಪಾರಮಾರ್ಥಿಕ ಕಾರ್ಯಗಳು ಸದ್ಗತಿಯನ್ನು ನೀಡುವುದರಲ್ಲಿ ಸಂಶಯವಿಲ್ಲ. ಧರ್ಮಸ್ಥಳ ಯೋಜನೆ ಇಂತಹ ಪುಣ್ಯಕಾರ್ಯ ನಡೆಸಿದೆ ಎಂದರು.
    ಇದೇ ವೇಳೆ ಮದ್ಯವ್ಯಸನ ಮುಕ್ತರಾಗಿದ್ದ 7 ಮಂದಿ ನವಜೀವನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಜಿಲ್ಲಾ ಜನ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿದರು. ವೇದಿಕೆಯ ಉಪಾಧ್ಯಕ್ಷ ಅಶ್ವತ್ಥ್ ಕುಮಾರೇಗೌಡ, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸಿ.ವಿ.ರವಿ, ಕೋಶಾಧಿಕಾರಿ ಎ.ಎನ್.ಸಂಪತ್‌ಕುಮಾರ್, ಕಾನೂನು ಸಲಹೆಗಾರರಾದ ಪವಿತ್ರಾ ಶ್ರೀಧರ್, ರಮೇಶ್‌ಕುಮಾರ್, ಯೋಜನಾಧಿಕಾರಿಗಳಾದ ನಾರಾಯಣ ಶೆಟ್ಟಿ, ಧನಂಜಯ, ಪ್ರಗತಿ ಸ್ವಸಹಾಯ ಸಂಘದ ಸದಸ್ಯರು, ಮೇಲ್ವಿಚಾರಕರು ಹಾಜರಿದ್ದರು.

    10ಊಓ1: ಹುಣಸೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಹಂದನಹಳ್ಳಿ ಸೋಮಶೇಖರ್, ಮುರಳೀಧರ್, ಅಶ್ವತ್ಥ ಕುಮಾರೇಗೌಡ, ಪವಿತ್ರಾ ಶ್ರೀಧರ್ ಇತರರಿದ್ದರು.
    10ಊಓ2: ಏಳು ಮಂದಿ ನವಜೀವನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
    =-=-=-=-=-=-=-=-=-=-=-=-=-=-=-=-=-=-=-=-=-=-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts