More

    ವಿವೇಕ ಸದ್ಬಳಕೆಯಲ್ಲಿದೆ ಸಮಸ್ಯೆಗೆ ಮುಕ್ತಿ: ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿಕೆ

    ದಾವಣಗೆರೆ: ಮನುಷ್ಯ ತನ್ನ ವಿವೇಕವನ್ನು ಸಮರ್ಥವಾಗಿ ಬಳಸಿದಲ್ಲಿ ಸಮಸ್ಯೆಗಳಿಗೆ ಪರಿಹಾರವಿದೆ. ತಾನು ಬುದ್ಧಿವಂತ ಎಂಬುದರ ಜತೆಗೆ ಸುಜ್ಞಾನಿ ಎಂಬುದನ್ನೂ ಹೇಳುವ ಅಗತ್ಯವಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

    ಸ್ಪೂರ್ತಿ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಮತಾ ನಾಗರಾಜ್ ಅವರ ‘ಜೀವನ್ಮುಖಿ’ ಕಿರುನಾಟಕಗಳ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

    ಓದುವ, ಅಭಿನಯಿಸುವ ಎಂಬ ಎರಡು ನಾಟಕ ಪ್ರಕಾರಗಳಿವೆ. ಓದಬಹುದಾದ ಎಲ್ಲ ನಾಟಕಗಳನ್ನು ಅಭಿನಯಿಸಲಾಗದು. ಓದಿನಲ್ಲಿ ಖುಷಿ ಕೊಡದ ಕೆಲವು ನಾಟಕಗಳು ನಟಿಸಿದಾಗ ಸಂತೋಷ ನೀಡಲಿವೆ. ಈ ಕೃತಿಯಲ್ಲಿನ 10 ನಾಟಕಗಳು ಎರಡರ ಅನುಭವ ನೀಡಲಿವೆ ಎಂದರು.

    ಸಮಾಜದಲ್ಲಿನ ವಿಡಂಬನೆ, ಸಮಸ್ಯೆಗಳಿಗೆ ಸಲಹೆ ಎಲ್ಲವೂ ಕೃತಿಯಲ್ಲಿವೆ. ಲೇಖಕಿ ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಮನುಷ್ಯನಿಗೆ ಆಶಾವಾದ ಬೇಕು. ಸುಖಾಂತ ಕಾಣುವ ಭಾರತೀಯ ಪರಂಪರೆ ಲಕ್ಷಣವನ್ನು ಗಮನದಲ್ಲಿರಿಸಿ ಎಲ್ಲ ನಾಟಕಗಳನ್ನು ಸುಖಾಂತದಲ್ಲಿ ಮುಕ್ತಾಯ ಮಾಡಲಾಗಿದೆ. ದುಃಖಾಂತವಾಗಿದ್ದಲ್ಲಿ ಪರಿಹಾರ ಇಲ್ಲ ಎಂದರ್ಥ ಆಗಿರುತ್ತಿತ್ತು ಎಂದು ಹೇಳಿದರು.

    ಎವಿಕೆ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಅನುರಾಧಾ ಬಕ್ಕಪ್ಪ ಮಾತನಾಡಿ, ಟಿವಿ, ಮೊಬೈಲ್​ಗಳ ಹಾವಳಿ ನಡುವೆಯೂ ಸಮುದಾಯದ ಒಂದು ಸಹೃದಯ ಭಾಗ ಪುಸ್ತಕ ಪ್ರೇಮ ಜಾಗೃತಗೊಳಿಸಿ, ಉಳಿಸಿ-ಬೆಳೆಸುತ್ತಿದೆ. ಇದನ್ನು ಗೌರವಿಸಬೇಕು. ಸಾಹಿತ್ಯದಲ್ಲಿ ನಾಟಕ ಪ್ರಕಾರಕ್ಕೆ ಅದ್ಭುತ ಶಕ್ತಿ ಇದೆ ಎಂದು ತಿಳಿಸಿದರು.

    ಲೇಖಕಿ ಮಮತಾ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ತೃಪ್ತಿಗಾಗಿ ನಾಟಕಗಳನ್ನು ಬರೆದಿದ್ದೇನೆ ಎಂದು ಹೇಳಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಕದಳಿ ಮಹಿಳಾ ವೇದಿಕೆಯ ಯಶಾ ದಿನೇಶ್, ಕವಯಿತ್ರಿ ಎಚ್.ಕೆ. ಸತ್ಯಭಾಮಾ ಮಂಜುನಾಥ್ ಉಪಸ್ಥಿತರಿದ್ದರು. ಎಚ್.ಎನ್.ಶಿವಕುಮಾರ್ ಸ್ವಾಗತಿಸಿದರು. ರೂಪಾ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

    ಹಿಂದೆಲ್ಲ ಗ್ರಾಮಗಳಲ್ಲಿ ನಾಟಕ ನೋಡಲು ರಾತ್ರಿ ಜಾಗ ಹಿಡಿದು ಕುಳಿತಿರುತ್ತಿದ್ದೆವು. ನಾಟಕ ಆಡುವವರಲ್ಲೂ, ನೋಡುವವರಲ್ಲೂ ಉತ್ಸಾಹವಿರುತ್ತಿತ್ತು. ಇಂದಿನ ತಾಂತ್ರಿಕ ಮಾಧ್ಯಮಗಳ ಹಾವಳಿಯಿಂದಾಗಿ ಈ ಜೀವಂತ ಕಲೆಯನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ.

    | ಸುಮತಿ ಜಯಪ್ಪ, ಕಸಾಪ ತಾಲೂಕು ಅಧ್ಯಕ್ಷೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts