More

    ಎದುರಾಗಿರುವ ತೊಡಕುಗಳ ಲಿಖಿತ ಮಾಹಿತಿ ನೀಡಿ

    ಕುಮಟಾ: ಬಾಕಿ ಇರುವ ಚತುಷ್ಪಥ ಕಾಮಗಾರಿಯಲ್ಲಿ ಎದುರಾಗಿರುವ ತೊಡಕುಗಳ ಕುರಿತು ಐಆರ್​ಬಿ ಕಂಪನಿಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಲಿಖಿತ ಮಾಹಿತಿಯನ್ನು ಕೂಡಲೆ, ಕೊಡಬೇಕು. ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳ ನಿರ್ವಹಣೆಗೆ ಕೂಡಲೆ, ಕಾರ್ಯೋನ್ಮುಖರಾಗಬೇಕು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಐಆರ್​ಬಿ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು.

    ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ರಾ.ಹೆ. 66ರ ಚತುಷ್ಪಥ ಕಾಮಗಾರಿ ಪ್ರಗತಿ ಪರಿಶೀಲನೆ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆ ಗುರುತಿಸಿದ ದಿವಗಿ, ಮಾದನಗೇರಿ ಹಾಗೂ ಭಟ್ಕಳ ಸಂಶುದ್ದೀನ ವೃತ್ತದ ಅಪಘಾತ ಪ್ರದೇಶಗಳಲ್ಲಿ ಸೂಕ್ತ ಕಾಮಗಾರಿಗೆ 50 ಕೋಟಿ ರೂಪಾಯಿ ಮಂಜೂರಿಗೆ ವಿಶೇಷ ಅವಕಾಶವಿದೆ. ಹಾಗೆಯೇ ಟೋಲ್ ವಿನಾಯಿತಿ, ಕೆಳ-ಮೇಲು ಸೇತುವೆಗಳು, ಸರ್ವೀಸ್ ರಸ್ತೆ ಮುಂತಾದ ಹೆಚ್ಚುವರಿ ಕಾಮಗಾರಿಗಳ ಬಗ್ಗೆ ಬೆಂಗಳೂರಿನಲ್ಲಿ ಸರ್ಕಾರದಿಂದ ಸಭೆ ನಡೆಸಿ ಕೇಂದ್ರಕ್ಕೆ ನಿಯೋಗ ಕಳಿಸಬೇಕಿದೆ. ಇಲ್ಲಿನ ಸಂಸದರೊಟ್ಟಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ರ್ಚಚಿಸಿ ಜಿಲ್ಲೆಗೆ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.

    ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಹೊಳೆಗದ್ದೆ ಟೋಲ್​ನಲ್ಲಿ ಸ್ಥಳೀಯ ನೋಂದಣಿ ವಾಹನಗಳಿಗೆ ಶುಲ್ಕ ವಿನಾಯಿತಿ ಕೊಡಬೇಕೆಂದು ಪಟ್ಟು ಹಿಡಿದರು. ತಂಡ್ರಕುಳಿಯಲ್ಲಿ ಕಾಮಗಾರಿ ತಡೆಹಿಡಿದಿರುವ ಸ್ಥಳೀಯರ ಮನವೊಲಿಸಲಾಗಿದ್ದು ಶಿಲೆಸ್ಪೋಟದ ಹಾನಿಗೂ ಪರಿಹಾರ ಕೊಡಲಾಗುತ್ತಿದೆ. ಚತುಷ್ಪಥ ಕಾಮಗಾರಿ ಶೀಘ್ರ ಮುಗಿಯಲೆಂದು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇವೆ’ ಎಂದರು.

    ರಾ.ಹೆ. ಯೋಜನಾ ನಿರ್ದೇಶಕ ಶಿಶುಮೋಹನ ಮಾತನಾಡಿ, ‘ಟೋಲ್​ನಲ್ಲಿ ಸ್ಥಳೀಯರಿಗೆ ರಿಯಾಯಿತಿ ಪಾಸ್ ಕೊಡಬಹುದೇ ಹೊರತು ಸಂಪೂರ್ಣ ವಿನಾಯಿತಿ ಸಾಧ್ಯವಿಲ್ಲ’ ಎಂದು ತಿಳಿಸಿದರು. ಶರಾವತಿ ನದಿಗೆ ಈಗಾಗಲೇ ಹೊಸ ಸೇತುವೆ ನಿರ್ವಿುಸಲಾಗಿದ್ದು 156 ಕೋಟಿ ರೂಪಾಯಿ ವೆಚ್ಚದಲ್ಲಿ ಹಳೆಯ ಸೇತುವೆಗೆ ಬದಲಿ ಸೇತುವೆ ನಿರ್ವಿುಸಲಾಗುತ್ತದೆ ಎಂದರು.

    ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಕಾಮಗಾರಿ ತೀರಾ ಹಿಂದುಳಿದಿದೆ. ಸರ್ವಿಸ್ ರಸ್ತೆಯಿಲ್ಲ. ಜನ ರಸ್ತೆ ದಾಟುವುದು ಅಪಾಯಕಾರಿಯಾಗಿದೆ. ಬೇಕಾದಲ್ಲಿ ಬೀದಿದೀಪವಿಲ್ಲ. ಗಟಾರವಿಲ್ಲ, ಕಾಮಗಾರಿಗೆ ಹಾಕಿದ ಕಲ್ಲುಗಳನ್ನು ತೆರವು ಮಾಡಿಲ್ಲ. ಹೀಗಾದರೆ ಕಳೆದ ವರ್ಷಗಳಂತೆ ಮಳೆಗಾಲದಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗಿ ಜನ ಸಂಕಟ ಎದುರಿಸಬೇಕಾಗುತ್ತದೆ. ಯೋಜನೆಯಂತೆ ನಿಮ್ಮ ಕೆಲಸ ಮುಗಿದಿದೆ ಎನ್ನುತ್ತೀರಿ. ಆದರೆ, ಅಪಾಯಕಾರಿಯಾಗಿರುವ ಬಾಕಿ ಕಾಮಗಾರಿಗೆ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದರು.

    ಸಭೆಯ ಆರಂಭದಲ್ಲಿ ಕಾಮಗಾರಿ ಸದ್ಯದ ಸ್ಥಿತಿಗತಿಯ ಚಿತ್ರಣ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲೆಯಲ್ಲಿ ಚತುಷ್ಪಥ ಕಾಮಗಾರಿಯಲ್ಲಿ ಎಲ್ಲಿಯೂ ಭೂಸ್ವಾಧೀನ ಪ್ರಕರಣ ಬಾಕಿ ಇಲ್ಲ, ಬಾಕಿ ಉಳಿದಿದ್ದ ಪರಿಹಾರ ವಿತರಣೆಯ 34 ಪ್ರಕರಣಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಹಲವೆಡೆ ಸಂಚಾರ ಸುರಕ್ಷತೆಗಾಗಿ ಸ್ಥಳೀಯ ಸಮಸ್ಯೆಗಳು ಇವೆ. ಸುಮಾರು 20 ಕಡೆಗಳಲ್ಲಿ ಸಂಭವನೀಯ ಮಳೆಗಾಲದ ಸಮಸ್ಯೆಗಳಿಗೆ ತಕ್ಷಣ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

    ಎಎಸ್​ಪಿ ಎಸ್. ಬದ್ರಿನಾಥ, ಎಸಿ ಅಜಿತ್ ಎಂ. ರೈ, ಜಿಪಂ ಸಿಇಒ ಪ್ರಿಯಾಂಗಾ ಎಂ., ರಾ.ಹೆ. ಪ್ರಾಧಿಕಾರದ ಇಂಜಿನಿಯರ್ ನವೀನ್, ತಾಪಂ ಇಒ ಸಿ.ಟಿ. ನಾಯ್ಕ ಇತರರಿದ್ದರು.

    120.44 ಕಿಮೀ. ಕಾಮಗಾರಿ ಮುಕ್ತಾಯ

    ಜಿಲ್ಲೆಯ ಒಟ್ಟು 147 ಕಿಮೀ ಯೋಜಿತ ಚತುಷ್ಪಥ ಕಾಮಗಾರಿಯಲ್ಲಿ 120.44 ಕಿಮೀ ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿಯನ್ನು ಡಿಸೆಂಬರ್ 2021ರೊಳಗೆ ಮುಗಿಸಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಶಿಶುಮೋಹನ್ ತಿಳಿಸಿದರು. ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಐಆರ್​ಬಿ ಕಂಪನಿಯ ವಿಭಾಗೀಯ ಅಧಿಕಾರಿ ಮೋಹನದಾಸ್ ತಾಲೂಕುವಾರು ಕಾಮಗಾರಿಯ ಪ್ರಗತಿ ವಿವರಿಸಿ, ‘ಕಾರವಾರ ತಾಲೂಕಿನಲ್ಲಿ 32.7 ಕಿಮೀನಲ್ಲಿ 25 ಕಿಮೀ ಕಾಮಗಾರಿ ಮುಗಿದಿದೆ. ಇನ್ನೂ 7.7 ಕಿಮೀ ಕಾಮಗಾರಿ ಬಾಕಿ ಇದೆ. ಅಂಕೋಲಾ ವ್ಯಾಪ್ತಿಯ 27 ಕಿಮೀನಲ್ಲಿ 22.5 ಕಿಮೀ ಮುಗಿದಿದ್ದು 4.5 ಕಿಮೀ ಬಾಕಿ ಇದೆ. ಕುಮಟಾದ 31 ಕಿಮೀ ನಲ್ಲಿ 22.42 ಕಿಮೀ ಮುಗಿದಿದ್ದು 8.58 ಕಿಮೀ ಬಾಕಿ ಇದೆ. ಹೊನ್ನಾವರದಲ್ಲಿ 26 ಕಿಮೀಗಳಲ್ಲಿ 22 ಕಿಮೀ ಮುಗಿದು 4 ಕಿಮೀ ಬಾಕಿ ಇದೆ. ಭಟ್ಕಳದ 33.5 ಕಿಮೀನಲ್ಲಿ 24.9 ಕಿಮೀ ಮುಗಿದಿದ್ದು 9.6 ಕಿಮೀ ಬಾಕಿ ಇದೆ’ ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts