More

    ಚಿತ್ರಗಿ ರುದ್ರಭೂಮಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಲಿ

    ಕುಮಟಾ: ಶವ ಸಂಸ್ಕಾರವನ್ನು ಗೌರವಯುತ ಮತ್ತು ವ್ಯವಸ್ಥಿತವಾಗಿ ಮಾಡುವುದು ಸಮಾಜದ ಜವಾಬ್ದಾರಿ. ಅದು ನಾವು ಮೃತವ್ಯಕ್ತಿಗೆ ಕೊಡುವ ಗೌರವ ಎಂದು ಭಾವಿಸಿ ಚಿತ್ರಗಿಯ ರುದ್ರಭೂಮಿ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಸ್ಟೂಡೆಂಟ್ಸ್ ವೆಲ್​ಫೇರ್ ಟ್ರಸ್ಟಿನ ಸದಸ್ಯ ಸುರೇಶ ಭಟ್ ಹೇಳಿದರು.

    ಪಟ್ಟಣದ ಚಿತ್ರಗಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸ್ಥಳೀಯ ಸ್ಟೂಡೆಂಟ್ಸ್ ವೆಲ್​ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ರುದ್ರಭೂಮಿ ಅಭಿವೃದ್ಧಿ ಕುರಿತ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ಕೆಲ ತಿಂಗಳ ಹಿಂದೆ ಊರಿನ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಸಂಘಟಿಸಿದ ಚಿತ್ರಗಿ ಸ್ಟೂಡೆಂಟ್ಸ್ ವೆಲ್​ಫೇರ್ ಟ್ರಸ್ಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಅದರಂತೆ ಈ ಭಾಗದ ಅಗತ್ಯಗಳಲ್ಲಿ ಒಂದಾದ ರುದ್ರಭೂಮಿ ಅಭಿವೃದ್ಧಿಯ ಗುರಿಯಿಟ್ಟುಕೊಂಡು ರುದ್ರಭೂಮಿಯ ಪರಿಸರಸ್ನೇಹಿ ನವೀಕರಣದ ಯೋಜನೆ ರೂಪಿಸಿದ್ದೇವೆ. ಮಳೆಗಾಲವೂ ಸೇರಿ ಹಲವು ಸಂದರ್ಭಗಳಲ್ಲಿ ಇಲ್ಲಿ ವ್ಯವಸ್ಥೆಯ ನ್ಯೂನತೆಗಳು ಶವಸಂಸ್ಕಾರಕ್ಕೆ ಬಂದವರು ವ್ಯಥೆ ಪಡುವಂತಾಗುತ್ತದೆ. ಹೀಗಾಗಿ ಊರಿನ ಜನರ ಆಗ್ರಹದ ಮೇರೆಗೆ ಸ್ಟೂಡೆಂಟ್ಸ್ ವೆಲ್ ಫೇರ್ ಟ್ರಸ್ಟ್ ಈ ಕಾರ್ಯವನ್ನು ಕೈಗೆತ್ತಿಕೊಂಡು ಹೆಜ್ಜೆಯಿಟ್ಟಿದೆ. ಕೇವಲ ಒಬ್ಬಿಬ್ಬರಿಂದ ಆಗುವ ಕೆಲಸ ಇದಲ್ಲ. ಎಲ್ಲರೂ ಕೈಜೋಡಿಸಬೇಕು ಎಂದರು.

    ರುದ್ರಭೂಮಿಯ ಸಂಪೂರ್ಣ ಮಾಹಿತಿ ನೀಡಲಾಯಿತು. ರುದ್ರಭೂಮಿಯಲ್ಲಿ ಏಕಕಾಲಕ್ಕೆ 5 ಶವಸಂಸ್ಕಾರ ಸಹಿತ, ನೀರು, ಸ್ನಾನ, ಶೌಚ, ವಿದ್ಯುತ್ ದೀಪ, ಕ್ರಿಯಾಕರ್ವದಿ ಕೈಂಕರ್ಯಗಳಿಗೆ ಕುಟೀರ, ಹಸಿರು ಪರಿಸರ, ಶಿವರುದ್ರನಮೂರ್ತಿ, ರಸ್ತೆ, ಅವರಣ ಸಹಿತ ಎಲ್ಲ ಆಧುನಿಕ ವ್ಯವಸ್ಥೆಗಳನ್ನು ದಿನದ 24 ಗಂಟೆಯೂ ಒದಗಿಸುವ ಯೋಜನೆಯ 3ಡಿ ಚಿತ್ರಣವನ್ನು ಪ್ರಸ್ತುತಪಡಿಸಲಾಯಿತು.

    ರುದ್ರಭೂಮಿಯ ಅಭಿವೃದ್ಧಿಯ ಬಳಿಕದ ನಿಯಮಿತ ಹಾಗೂ ವಾರ್ಷಿಕ ನಿರ್ವಹಣೆಯ ಕುರಿತಾಗಿಯೂ ರ್ಚಚಿಸಲಾಯಿತು. ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ಸಮಾಜದವರೂ ಸಹಯೋಗ ನೀಡುವ ಮೂಲಕ ಭವಿಷ್ಯದಲ್ಲಿ ಸಾರ್ವಜನಿಕರ ಶವಸಂಸ್ಕಾರ ಸುವ್ಯವಸ್ಥಿತ ಮತ್ತು ಗೌರವಯುತವಾಗಿ ನಡೆಸಲು ಚಿತ್ರಗಿ ಸ್ಟೂಡೆಂಟ್ಸ್ ವೆಲ್ ಫೇರ್ ಟ್ರಸ್ಟಿನ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯವೊಂದನ್ನು ಯಶಸ್ವಿಗೊಳಿಸೋಣ ಎಂದು ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯಿಸಲಾಯಿತು. ಈ ಎಲ್ಲ ಕಾರ್ಯಕ್ಕೆ ಪುರಸಭೆಯ ಸಹಕಾರದ ಭರವಸೆಯನ್ನೂ ವ್ಯಕ್ತಪಡಿಸಲಾಯಿತು.

    ಸಭೆಯಲ್ಲಿ ಟ್ರಸ್ಟಿನ ಖಜಾಂಚಿ ಶಂಕರ ನಾಯ್ಕ, ಕಾರ್ಯದರ್ಶಿ ಮಾರುತಿ ನಾಯ್ಕ, ಪುರಸಭೆ ಸದಸ್ಯ ಹಾಗೂ ಟ್ರಸ್ಟಿನ ಸದಸ್ಯರಾದ ಸಂತೋಷ ನಾಯ್ಕ, ಶೇಷಗಿರಿ ಶಾನಭಾಗ, ಲಕ್ಷ್ಮೀದಾಸ ಪಟಗಾರ, ಪವನಕುಮಾರ ಪಂತ ಹಾಗೂ ಊರ ನಾಗರಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts