More

    4 ಕೋಟಿ ರೂ. ವೆಚ್ಚದಲ್ಲಿ ರುದ್ರಭೂಮಿ ನಿರ್ಮಾಣ

    ಚಿಕ್ಕಮಗಳೂರು: ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು.

    ನಗರದ 35ನೇ ವಾರ್ಡ್‌ನ ಕೆಂಪನಹಳ್ಳಿಯಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವ ಕೆಇಬಿ ವೃತ್ತದಿಂದ ಕೆಂಪನಹಳ್ಳಿ, ಕರ್ಕಿಪೇಟೆ ಮಾರ್ಗದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡುತ್ತಿರುವುದರಿಂದ ಹಂತ ಹಂತವಾಗಿ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
    ಪೌರಾಡಳಿತ ಸಚಿವರಿಗೆ ಮನವಿ ನೀಡಿ ಒತ್ತಡ ಹಾಕಿದ ಪರಿಣಾಮ 4 ಕೋಟಿ ರೂ. ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಅನುದಾನದಲ್ಲಿ ಸುಸಜ್ಜಿತವಾದ ವಿದ್ಯುತ್ ಚಾಲಿತ ಮತ್ತು ಪೆಟ್ರೋಲ್, ಡೀಸೆಲ್ ಬಳಸುವ ರುದ್ರಭೂಮಿ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದರು.
    ಈ ರುದ್ರಭೂಮಿ ನಿರ್ಮಾಣಕ್ಕೆ ನಗರದ ಎರಡು ಭಾಗಗಳಲ್ಲಿ ನಿವೇಶನಗಳನ್ನು ಗುರುತಿಸಲಾಗಿದೆ. ನಗರಸಭೆ ಈ ನಿವೇಶನಕ್ಕೆ ಮಂಜೂರಾತಿ ನೀಡಿ ಕಾಮಗಾರಿ ಆರಂಭಕ್ಕೆ ಸಹಕರಿಸಬೇಕು. ಸರ್ಕಾರ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ಇಂದು ಶಂಕುಸ್ಥಾಪನೆಯಾದ ರಸ್ತೆ ಗುಣಮಟ್ಟದಿಂದ ಕೂಡಿ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವಂತಾಗಲಿ. ಇದು ಈ ಭಾಗದ ಹಳ್ಳಿಗಳ ಜನರ ಬಹುದಿನಗಳ ಬೇಡಿಕೆಯಾಗಿದೆ ಎಂದು ಹೇಳಿದರು.
    ನಗರದ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಲೋಕಸಭೆ ಚುನಾವಣೆ ಬಳಿಕ ಹಂತ ಹಂತವಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಿ ನಾಗರಿಕರಿಗೆ ಅನುಕೂಲ ಮಾಡಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ಸದಸ್ಯರಾದ ಲಕ್ಷ್ಮಣ, ಮಂಜುಳಾ ಲಕ್ಷ್ಮಣ, ಗ್ರಾಮಸ್ಥರಾದ ಮಧು, ಉದಯ್, ಪುನೀತ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗವಿರಂಗಪ್ಪ ಮತ್ತಿರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts