More

    ರೈತರ ಪಂಪ್‌ಸೆಟ್‌ಗೆ ಏಳು ತಾಸು ವಿದ್ಯುತ್ ನೀಡಿ

    ಬಳ್ಳಾರಿ : ರೈತರ ಬೆಳೆಗೆ ಅನುಕೂಲವಾಗುವಂತೆ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಯಾವುದೇ ರೀತಿ ಅಡಚಡಣೆ ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಜೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಭತ್ತದ ಬೆಳೆ ಸಂಪೂರ್ಣ ಕಟಾವಿಗೆ ಬರುವವರೆಗೂ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕು. ಭತ್ತದ ಬೆಳೆ ನಂತರ ಮೆಣಸಿನಕಾಯಿ ಬೆಳೆಗೆ ಅನಾನುಕೂಲವಾಗದಂತೆ ವಿದ್ಯುತ್ ಪೂರೈಸಬೇಕು. ಗ್ರಾಮಾಂತರ ಭಾಗಗಳಲ್ಲಿ ಪದೇ ಪದೇ ವಿದ್ಯುತ್ ನಿಲುಗಡೆ ಮಾಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ನೀಡಿದರು.

    ನಮ್ಮಲ್ಲಿ ಅಗತ್ಯವಾದ ವಿದ್ಯುತ್ ಇದ್ದರೂ ಕೂಡ ಅಸಮರ್ಪಕ ಪೂರೈಕೆಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಸಣ್ಣ ರೈತರಿಗೆ ಅನುಕೂಲವಾಗುವಂತೆ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಕಾಲಮಿತಿಯಲ್ಲಿ ಸಂಪರ್ಕ ನೀಡುವಂತೆ ಸೂಚಿಸಿದರು.

    ಈಗಾಗಲೇ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಏಳು ತಾಸು ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಜಿಂದಾಲ್ ಕಂಪನಿಯಿಂದ ನೂರು ಮೆಗಾವಾಟ್ ವಿದ್ಯುತ್ ನೀಡುತ್ತಿದ್ದಾರೆ. ಇನ್ನು ಇಪ್ಪತ್ತು ದಿನಗಳ ಹೊತ್ತಿಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು ಸಮಸ್ಯೆ ಸುಧಾರಿಸುವ ನಿರೀಕ್ಷೆ ಇದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜೆಸ್ಕಾಂ ಮುಖ್ಯ ಇಂಜಿನಿಯರ್ ಲಕ್ಷ್ಮಣ್ ಚೌಹಾಣ್, ಅಧೀಕ್ಷಕ ಅಭಿಯಂತರ ವೆಂಕಟೇಶ್ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಕಾರ್ಯನಿರ್ವಾಹಕ ಅಭಿಯಂತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts