More

    ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ – ಎಲ್.ಕೆ.ಅತೀಕ್

    ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಹಾನಿಗೀಡಾಗಿರುವ ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಸೇತುವೆ ಮತ್ತಿತರ ಮೂಲಸೌಕರ್ಯಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಕಡ್ಡಾಯವಾಗಿ ಈ ಮಾಸಾಂತ್ಯದಲ್ಲಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.

    ಜಿಲ್ಲೆಯಲ್ಲಿ 900ಕ್ಕೂ ಅಧಿಕ ಜನವಸತಿ ಪ್ರದೇಶಗಳಿದ್ದು, ಸಮೀಪದ ಜಲಮೂಲ ಬಳಸಿಕೊಂಡು ಈ ಎಲ್ಲ ಪ್ರದೇಶಗಳಿಗೂ ಕುಡಿಯುವ ನೀರು ಪೂರೈಸಲು ಜಲಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಬಹುದು. ಇದಕ್ಕೆ ಅನುದಾನದ ಸಮಸ್ಯೆಯಾಗುವುದಿಲ್ಲ. ಹೀಗಾಗಿ ವಿಳಂಬಕ್ಕೆ ಆಸ್ಪದ ನೀಡದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅತೀಕ್ ಸೂಚನೆ ನೀಡಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್‌ಕುಮಾರ, ಬೆಳಗಾವಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

    ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸಲಹೆ: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಿಗೆ ಸುದೀರ್ಘ ರಜೆ ಘೋಷಿಸಿದ್ದರಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಬೇಕಿದೆ. ಗಣಿತ, ವಿಜ್ಞಾನ ವಿಷಯಗಳ ವಿಶೇಷ ಬೋಧನೆ ವ್ಯವಸ್ಥೆ ಮಾಡಬೇಕು. ಶಿಕ್ಷಣದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಶಿಕ್ಷಕರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಲ್.ಕೆ. ಅತೀಕ್ ಸಲಹೆ ನೀಡಿದರು. ಬಳಿಕ ಅವರು ಕರೊನಾ ಲಸಿಕೆ ವಿತರಣೆ ಸಿದ್ಧತೆ, ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ, ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗ್ರಾಮೀಣ ಕುಡಿಯುವ ನೀರು, ಲೋಕೋಪಯೋಗಿ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.

    ಕರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಸುಮಾರು 30 ಸಾವಿರ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ಈಗಾಗಲೇ ಡ್ರೈ ರನ್ ನಡೆಸಿ ಅದರ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
    |ಡಾ. ಎಸ್.ವಿ. ಮುನ್ಯಾಳ
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಜಿಲ್ಲೆಯಲ್ಲಿ ಜೋಳ, ಕಡಲೆ, ಸೂರ್ಯಕಾಂತಿ, ಗೋಧಿ ಸೇರಿದಂತೆ ಶೇ. 95ರಷ್ಟು ಬಿತ್ತನೆಯಾಗಿದೆ. ಬೀಜ-ರಸಗೊಬ್ಬರದ ಕೊರತೆಯಿಲ್ಲ. ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ 15 ಕೋಟಿ ರೂ. ಬೆಳೆ ಪರಿಹಾರ ಈಗಾಗಲೇ ಜಮೆ ಮಾಡಲಾಗಿದೆ.

    |ಶಿವನಗೌಡ ಪಾಟೀಲ
    ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts