More

    ಬನ್ನೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಿ

    ತಿ.ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬನ್ನೂರು ಸಂತೆಮಾಳದ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ, ಮೂಲಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ತಾಲೂಕು ತಹಸೀಲ್ದಾರ್ ಕಚೇರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

    ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಬನ್ನೂರು ಹಾಗೂ ಸುತ್ತಮುತ್ತಲ ಹಳ್ಳಿಗಳ ರೈತರು ತಾವು ಬೆಳೆದ ಹಣ್ಣು, ತರಕಾರಿಯನ್ನು ದೂರದ ನಗರ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗದೇ ಬನ್ನೂರು ಪಟ್ಟಣದ ಹಾಲಿನ ಡೇರಿ ಮುಂಭಾಗ ಮಾರಾಟ ಮಾಡುತ್ತಿದ್ದಾರೆ. ಆದರೆ ಇಲ್ಲಿ ರೈತರಿಗೆ ಕುಡಿಯುವ ನೀರು, ಶೌಚಗೃಹ ಸಮಸ್ಯೆ ಕಾಡುತ್ತಿದ್ದು, ಯಾವುದೇ ಅನುಕೂಲ ಇಲ್ಲದೆ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ದಲ್ಲಾಳಿಗಳು ಮೋಸ ಮಾಡಿ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವುದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

    ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ವಿಶಾಲವಾದ ಜಾಗವಿದ್ದು, ರೈತರು ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಲಿದೆ. ಹೀಗಾಗಿ ದಲ್ಲಾಳಿಗಳ ಶೋಷಣೆ ತಪ್ಪಿಸಲು ಬನ್ನೂರು ಹಾಲಿನ ಡೇರಿ ಮುಂಭಾಗದಿಂದ ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಬೇಕು. ರೈತರಿಗೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಇಲಾಖೆಯಲ್ಲಿ ಅವಕಾಶವಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಬನ್ನೂರು ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ರೈತ ಮುಖಂಡರನ್ನು ತುರ್ತಾಗಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ರೈತ ಮುಖಂಡ ಕುಂತನಹಳ್ಳಿ ಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts