More

    ಪುರಸಭೆ ಸದಸ್ಯರಿಂದ ದಿಢೀರ್ ಪ್ರತಿಭಟನೆ

    ಮುಂಡರಗಿ: ಸಾರ್ವಜನಿಕ ಸಮಸ್ಯೆಗಳ ಕುರಿತು ಮಾಹಿತಿ ಕೇಳಿದರೆ, ಅಧಿಕಾರಿಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಕೆಲ ಸದಸ್ಯರು ಸೋಮವಾರ ಪುರಸಭೆ ಕಚೇರಿಯೊಳಗೆ ದಿಢೀರ್ ಪ್ರತಿಭಟನೆ ನಡೆಸಿದರು.

    ಸದಸ್ಯ ಲಿಂಗರಾಜಗೌಡ ಪಾಟೀಲ ಮಾತನಾಡಿ, ಕಟ್ಟಡ ಪರವಾನಗಿ ಕೊಡುವುದಕ್ಕೆ ಪುರಸಭೆಯಲ್ಲಿ ಸರಿಯಾದ ಬೈಲಾ ಇಲ್ಲ. ಈ ಬಗ್ಗೆ ಸಮರ್ಪಕ ಮಾಹಿತಿ ಕೇಳಿದರೆ ಅಧಿಕಾರಿಗಳಲ್ಲಿ ಯಾವುದೇ ರೀತಿಯ ಸ್ಪಷ್ಟತೆಯಿಲ್ಲ. ಮುಖ್ಯಾಧಿಕಾರಿಗೆ, ಇಂಜಿನಿಯರ್​ಗೆ ಪುರಸಭೆ ಆಡಳಿತದ ಕಾನೂನು ಎಂದರೆ ಗೊತ್ತಿಲ್ಲ. ಕಾನೂನುಬಾಹಿರ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

    2019ರಲ್ಲಿ 22ನೇ ವಾರ್ಡ್​ನ ನಿವೇಶನ ಅಭಿವೃದ್ಧಿ ಸೇರಿ ಮೊದಲಾದ ವಿಷಯಗಳ ಕುರಿತು ಅರ್ಜಿ ಮೂಲಕ ಮಾಹಿತಿ ಕೇಳಿದರೆ, ಈವರೆಗೂ ನೀಡಿಲ್ಲ. ಪುರಸಭೆ ಸದಸ್ಯರು ಕೇಳಿದ್ದಕ್ಕೆ ಬೆಲೆ ಇಲ್ಲದಾಗಿದೆ. ಜಿಲ್ಲಾಧಿಕಾರಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

    ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಪ್ರಲ್ಹಾದ ಹೊಸಮನಿ ಮಾತನಾಡಿ, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ಅಧಿಕಾರಿಗಳು ಕೆಲಸವನ್ನು ಮಾಡುತ್ತಿದ್ದಾರೆ. ಈ ಕುರಿತು ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದರು.

    ಸ್ಥಳಕ್ಕೆ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಭೇಟಿ ನೀಡಿ ಪ್ರತಿಭಟನಾಕಾರೊಂದಿಗೆ ರ್ಚಚಿಸಿದರು. ಜನಪ್ರತಿನಿಧಿಗಳ ಮಾತು ಕೇಳದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸದಸ್ಯರು ಪ್ರತಿಭಟನೆ ಕೈಬಿಟ್ಟರು. ಪುರಸಭೆ ಸದಸ್ಯರಾದ ಮಹ್ಮದರಫೀಕ ಮುಲ್ಲಾ, ಮಂಜಪ್ಪ ದಂಡಿನ ಇದ್ದರು.

    ಸದಸ್ಯರ ವರ್ತನೆ ಸರಿಯಲ್ಲ

    ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದು ಸರಿಯಲ್ಲ. ಪುರಸಭೆ ಅಧ್ಯಕ್ಷರು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಕೋವಿಡ್ ರೋಗದ ವಿರುದ್ಧ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪುರಸಭೆ ಕೆಲ ಸದಸ್ಯರು ಪ್ರತಿಭಟನೆ ನಡೆಸಿರುವುದು ಸೂಕ್ತವಲ್ಲ ಎಂದು ಪುರಸಭೆ ಸದಸ್ಯ ರಾಜೇಸಾಬ್ ಬೆಟಗೇರಿ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ವಾರ್ಡ್ ಸಂಚರಿಸುವುದು, ಪಾಸಿಟಿವ್ ಬಂದವರ ಮಾಹಿತಿ ಸಂಗ್ರಹಿಸುವುದು ಮೊದಲಾದ ಕೆಲಸದಲ್ಲಿ ನಿರತರಾಗಿದ್ದಾರೆ. ಈಗ ಏನಿದ್ದರೂ ಜೀವ ಉಳಿಸುವ ಕೆಲಸ ಮಾಡಬೇಕು. ಇಂತಹ ಸಂದರ್ಭದಲ್ಲಿ ಕೆಲವು ನ್ಯೂನತೆಗಳ ಬಗ್ಗೆ ಪುರಸಭೆ ಸದಸ್ಯರೇ ಪ್ರತಿಭಟನೆಗೆ ಇಳಿದು ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸುವುದು ಸರಿಯಲ್ಲ. ಇದರ ಬದಲಾಗಿ ಕೋವಿಡ್ ಮುಕ್ತವಾದ ನಂತರ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಎಲ್ಲ ಸದಸ್ಯರು ಸೇರಿ ಮೇಲಧಿಕಾರಿಗಳಿಗೆ ದೂರು ನೀಡೋಣ ಎಂದರು.

    ಪ್ರಕಾಶ ಹಲವಾಗಲಿ, ಪವನ ಮೇಟಿ, ಪರಶುರಾಮ ಕರಡಿಕೊಳ್ಳ, ನಬಿಸಾಬ್ ಕೆಲೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts