More

    ಹೆಸ್ಕಾಂ ಕಚೇರಿ ಎದುರು ಒಣಗಿದ ಬೆಳೆಯೊಂದಿಗೆ ಪ್ರತಿಭಟನೆ

    ಲಕ್ಷ್ಮೇಶ್ವರ: ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೋಸಿ ಹೋಗಿರುವ ಲಕ್ಷ್ಮೇಶ್ವರ, ಅಡರಕಟ್ಟಿ, ಹರದಗಟ್ಟಿ, ಮಂಜಲಾಪುರ ಗ್ರಾಮದ ರೈತರು ಒಣಗಿದ ಗೋವಿನಜೋಳ ಬೆಳೆಯೊಂದಿಗೆ ಪಟ್ಟಣದ ಹೆಸ್ಕಾಂ ಕಚೇರಿಗೆ ದೌಡಾಯಿಸಿ, ಅಧಿಕಾರಿಗಳನ್ನು ಹೊರಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆಯಿತು.

    ರೈತರಾದ ದೇವಪ್ಪ ಲಮಾಣಿ, ಚನ್ನಬಸಪ್ಪ ಅಬನೂರ, ಮಂಜು ನರೇಗಲ್ ಮತ್ತಿತರರು, ಜುಲೈ ಕೊನೆಯ ವಾರದಿಂದ ಈವರೆಗೆ (20 ದಿನ) ಹನಿ ಮಳೆಯೂ ಆಗಿಲ್ಲ. ನೂರಾರು ಎಕರೆಯಲ್ಲಿ ಒಂದೂವರೆ ತಿಂಗಳ ಆಸುಪಾಸಿನ ಗೋವಿನಜೋಳ, ಹತ್ತಿ, ಶೇಂಗಾ ಇತರ ಪ್ರಮುಖ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಬೆಳೆ ಉಸಿಕೊಳ್ಳಲು ಕೊಳವೆಬಾವಿಯಿಂದ ನೀರು ಹಾಯಿಸುವ ಸ್ಥಿತಿಯಿದೆ. ಹೆಸ್ಕಾಂ ದಿನಕ್ಕೆ ಕೇವಲ 3ರಿಂದ 4 ಗಂಟೆ ಮಾತ್ರ ತ್ರಿಫೇಸ್ ವಿದ್ಯುತ್ ಪೂರೈಸುತ್ತಿದೆ. ಹೀಗಾದರೆ ಬೆಳೆಗೆ ನೀರುಣಿಸುವುದು ಹೇಗೆ ಎಂದು ಪ್ರಶ್ನಿಸಿದರು.

    3ರಿಂದ 4 ಗಂಟೆ ವಿದ್ಯುತ್ ಪೂರೈಸುವಾಗಲೂ 10ರಿಂದ 15 ನಿಮಿಷಕ್ಕೊಮ್ಮೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಇದರಿಂದ ಬೆಳೆಗೆ ನೀರು ಹಾಯಿಸಲು ಆಗುತ್ತಿಲ್ಲ. ಏಕಾಎಕಿ ವಿದ್ಯುತ್ ಕಡಿತದಿಂದ ಮೋಟರ್ ಪದೇಪದೆ ಸುಡುತ್ತಿವೆ. ಇದರಿಂದ ವಾರಕ್ಕೆರಡು ಬಾರಿ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಮೋಟರ್ ದುರಸ್ತಿ ಮಾಡಿಸುವಂತಾಗಿದೆ. ಇದರ ನಡುವೆ ಬ್ಯಾಂಕ್ ಸಾಲ ಮರುಪಾವತಿಗೆ ನೋಟಿಸ್ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಭಾರತೀಯ ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಟಾಕಪ್ಪ ಸಾತಪುತೆ ಅವರು, ಬೆಳೆ ಉಳಿಸಿಕೊಳ್ಳಲು ರೈತರಿಗೆ ಸಮರ್ಪಕ ವಿದ್ಯುತ್ ಅವಶ್ಯಕತೆಯಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಿ ನಿತ್ಯ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ರೈತರೊಂದಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

    ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರುರಾಜ ಸಿ. ಮಾತನಾಡಿ, ಈ ಭಾಗದಲ್ಲಿ ರೈತರ ಬೋರ್‌ವೆಲ್‌ಗಳು ಹೆಚ್ಚಿವೆ. ಏಕಕಾಲಕ್ಕೆ ಎಲ್ಲ ರೈತರು ನಿಗದಿಗಿಂತ ಹೆಚ್ಚಿನ ಸಾಮರ್ಥ್ಯದ ಮೋಟರ್ ಚಾಲೂ ಮಾಡುವುದರಿಂದ ಮತ್ತು ಹಳ್ಳದ ನೀರು ಬಳಕೆಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವುದರಿಂದ ಓವರ್‌ಲೋಡ್‌ನಿಂದ ಅನಿಯಮಿತ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ತಾಂತ್ರಿಕ ತೊಂದರೆ 2 ದಿನದಲ್ಲಿ ಸರಿಪಡಿಸಲಾಗುವುದು. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಬಳಿಕ ರೈತರು ಮನವಿ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದರು. ರೈತರಾದ ನೀಲಪ್ಪ ತೆಗ್ಗಿನಹಳ್ಳಿ, ಪ್ರಕಾಶ ಶಿರಹಟ್ಟಿ, ಅಶೋಕ ಮುಳಗುಂದ, ಮಾಣಪ್ಪ ಲಮಾಣಿ, ಮೋಹನ ನಂದೆಣ್ಣವರ, ಸುರೇಶ ಲಮಾಣಿ, ಪರಮೇಶ ಲಮಾಣಿ, ಶಿವಪ್ಪ ಲಮಾಣಿ, ಯಲ್ಲಪ್ಪ ಪೂಜಾರಿ, ತಿರಕಪ್ಪ ಸುಣಗಾರ, ಯಲ್ಲಪ್ಪ ಉಮಚಗಿ, ಎಸ್.ಸಿ. ಗಿಡಿಬಿಡಿ, ಎನ್.ಜಿ. ಸವಣೂರ, ಎನ್.ಎಚ್. ದೊಡ್ಡಮನಿ, ಯಲ್ಲಪ್ಪ ಮರಾಠೆ ಸೇರಿ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts