More

    ನಾಲೆಗಳಿಗೆ ನೀರು ಹರಿಸುವಂತೆ ಪ್ರತಿಭಟನೆ

    ಶ್ರೀರಂಗಪಟ್ಟಣ: ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಿಂದ ತಾಲೂಕು ಕಚೇರಿವರೆಗೂ ಶುಕ್ರವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಕೈಯಲ್ಲಿ ಒಣಗಿದ ಕಬ್ಬಿನ ಜಲ್ಲೆ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ತಕ್ಷಣ ನೀರು ಹರಿಸಿ, ರೈತರ ಬೆಳೆಗಳನ್ನು ಉಳಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ್ದ ಕಾನೂನು ಭಂಗ ಚಳವಳಿ ನಡೆಸಲಾಗುವುದು ಎಚ್ಚರಿಕೆ ನೀಡಿದರು.
    ಕನ್ನಂಬಾಡಿ ಅಣೆಕಟ್ಟೆಯಲ್ಲಿ 87 ಅಡಿವರೆಗೆ ಸಂಗ್ರಹವಿದ್ದರೂ ವಿಸಿ, ಸಿಡಿಎಸ್, ವಿರಿಜಾ ಹಾಗೂ ಬಂಗಾರದೊಡ್ಡಿ ನಾಲೆಗಳಿಗೆ ನೀರು ಹರಿಸದೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ಕೃತಕ ಬರಗಾಲ ಸೃಷ್ಟಿಯಾಗಿದೆ. ಜನ, ಜಾನುವಾರುಗಳು ನೀರಿಗಾಗಿ ನರಳುವ ಜತೆಗೆ ಅಂತರ್ಜಲ ಕುಸಿತಗೊಂಡಿದ್ದು, ಇದಕ್ಕೆ ಸರ್ಕಾರವೇ ಕಾರಣವಾಗಿದೆ. ಲೋಕಸಭೆ ಚುನಾವಣೆ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸಿ ರಾಜ್ಯದ ರೈತರು ಹಾಗೂ ಜನರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅನ್ಯಾಯ ಎಸಗಿದ್ದಾರೆ ಆರೋಪಿಸಿದರು.
    ರಾಜ್ಯ ಸರ್ಕಾರ ತಕ್ಷಣ 7 ದಿನಗಳ ಕಾಲ ಕಾವೇರಿ ಕಣಿವೆಯ ನಾಲೆಗಳಿಗೆ ನೀರು ಹರಿಸುವ ಜತೆಗೆ ರೈತರಿಗೆ ಬರ ಪರಿಹಾರ ಘೋಷಿಸಿ, ಹಣ ವಿತರಣೆಯಾಗುವಂತೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಂಬಾಡಿ ನಾಗರಾಜು, ಜಗದೀಶ್, ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಸಂಘಟನಾ ಕಾರ್ಯದರ್ಶಿಗಳಾದ ಮಹಾಲಿಂಗು, ರಾಮಚಂದ್ರು, ಕಾರ್ಯಕರ್ತರಾದ ಕಡತನಾಳು ಶ್ರೀಧರ್, ಮರಳಗಾಲ ಶಂಕರ್, ಶ್ರೀಧರ್, ಶಿವಣ್ಣ ಕೆಂಪೇಗೌಡ, ಸುರೇಶ್, ಚಾಮರಾಜು, ಅಚ್ಚಪ್ಪನಕೊಪ್ಪಲು ಕೃಷ್ಣ, ಶಿವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts