More

    ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಪ್ರಭಾವಿಗಳು: ಹೆಮ್ಮನಹಳ್ಳಿ ದೊಡ್ಡಕೆರೆಯಲ್ಲಿ ನರೇಗಾ ಕೂಲಿ ಕಾರ್ಮಿಕರ ಪ್ರತಿಭಟನೆ

    ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಅವೈಜ್ಞಾನಿಕವಾಗಿ ಜೆಸಿಬಿ ಯಂತ್ರದ ಮೂಲಕ ಪ್ರಭಾವಿಗಳು ಮಣ್ಣು ತೆಗೆಯುತ್ತಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ನರೇಗಾ ಕೂಲಿ ಕಾರ್ಮಿಕರು ದೊಡ್ಡಕೆರೆಯಲ್ಲಿ ಪ್ರತಿಭಟನೆ ಮಾಡಿದರು.
    ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ಕೆರೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಯುತ್ತಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 150 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ನೀರಾವರಿ ಇಲಾಖೆಗೆ ಸೇರಿದ ಕೆರೆಯಲ್ಲಿ ಅವೈಜ್ಞಾನಿಕ ಹಾಗೂ ಅಕ್ರಮವಾಗಿ ಬಲಾಢ್ಯರು ಆಳವಾಗಿ ಮಣ್ಣು ತೆಗೆಯುತ್ತಿರುವುದರಿಂದ ಭವಿಷ್ಯದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯದೆ ಬೇಕಾಬಿಟ್ಟಿ ಮಣ್ಣನ್ನು ತೆಗೆದುಕೊಂಡು ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
    ನರೇಗಾ ಕೂಲಿ ಕಾರ್ಮಿಕರು ಕೆರೆ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದು, ನಮ್ಮ ಕೆಲಸಕ್ಕೂ ಕುತ್ತು ತರುತ್ತಿದ್ದಾರೆ. ಅಲ್ಲದೆ, ಅವೈಜ್ಞಾನಿಕವಾಗಿ ಮಣ್ಣು ಬಗೆಯುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಕೂಲಿಕಾರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನೀರಾವರಿ ಇಲಾಖೆಯ ಅಧಿಕಾರಿಗಳು ಕಂಡರೂ ಕಾಣದಂತೆ ಮೌನ ವಹಿಸಿದ್ದಾರೆ. ಕೆರೆಯ ಮಣ್ಣು ತುಂಬಾ ಚೆನ್ನಾಗಿದ್ದು ಕೆರೆಯ ಸಂಪತ್ತನ್ನು ಕಬಳಿಸುತ್ತಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೆರೆಯ ದಡದಲ್ಲಿ ಇಷ್ಟೊಂದು ಮಣ್ಣು ತೆಗೆಯುವುದರಿಂದ ಕೆರೆ ಪ್ರಪಾತವಾಗಿ ಮಾರ್ಪಟ್ಟು ಸಾವು ನೋವುಗಳಿಗೆ ಎಡೆ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕಳೆದ ಹಲವು ದಿನಗಳಿಂದ ನಾಲ್ಕು ಜೆಸಿಬಿಗಳು ಹತ್ತಾರು ಟ್ರ್ಯಾಕ್ಟರ್ ಮೂಲಕ ಕೆರೆಯ ಮಣ್ಣನ್ನು ಹೊರ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಡಿಒ ಲೀಲಾವತಿ ಮಾತನಾಡಿ, ಹಲವು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ವಿಷಯವನ್ನು ಗಮನಕ್ಕೆ ತಂದು ಪತ್ರವನ್ನು ಸಹಾ ಬರೆಯಲಾಗಿದೆ. ಕೆರೆಯ ಊಳೆತ್ತಲು ನರೇಗಾ ಯೋಜನೆಯಲ್ಲಿ 30 ಲಕ್ಷ ಹಣವನ್ನು ಮೀಸಲಿರಿಸಿದ್ದೇವೆ. ಕೂಲಿಕಾರರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಬಲಾಢ್ಯರು ಮಾಡುತ್ತಿದ್ದಾರೆ. ಅಲ್ಲದೆ, ಕೂಲಿಕಾರರು ಮತ್ತು ಪಂಚಾಯಿತಿ ಸಿಬ್ಬಂದಿಯನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಕೆರೆಯ ದಡದಲ್ಲಿ ಪ್ರಪಾತ ಸೃಷ್ಟಿಸುತ್ತಿರುವುದರಿಂದ ಮಳೆ ನೀರು ಬಂದಾಗ ಅದು ತುಂಬಿಕೊಂಡು ಅಪಾಯ ಸಂಭವಿಸುವ ಪರಿಸ್ಥಿತಿ ಇದೆ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದರು.
    ಪ್ರತಿಭಟನೆಯಲ್ಲಿ ನರೇಗಾ ಕೂಲಿ ಕಾರ್ಮಿಕರಾದ ಭವಾನಿ, ಲಕ್ಷ್ಮಮ್ಮ, ರಾಮಯ್ಯ, ಸಾವಿತ್ರಮ್ಮ, ಅಪ್ಪೇಗೌಡ, ರತ್ನಾ, ರಾಧಾಮ್ಮ, ಭಾಗ್ಯಮ್ಮ, ಶಿವಮ್ಮ, ಸುಧಾ, ಸಾಕಮ್ಮ, ಗೌರಮ್ಮ ಇತರರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts