More

    ಒಪಿಎಸ್ ಜಾರಿ, ವೇತನ ಪರಿಷ್ಕರಣೆಗೆ ಆಗ್ರಹ; ಸಚಿವಾಲಯ ನೌಕರರ ಪ್ರತಿಭಟನೆ

    ಬೆಂಗಳೂರು: 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ 4 ತಿಂಗಳ ಕಾಲ ವಿಸ್ತರಿಸಿರುವುದನ್ನು ಹಿಂಪಡೆಯಬೇಕು. ಶೇ.40 ಹೆಚ್ಚಳದೊಂದಿಗೆ ವೇತನ ಪರಿಷ್ಕರಿಸಬೇಕು. ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೊಳಿಸಬೇಕು, ಆಡಳಿತ ಸುಧಾರಣಾ ಆಯೋಗದ ಅವೈಜ್ಞಾನಿಕ ಶಿಾರಸುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸಚಿವಾಲಯ ನೌಕರರ ಸಂಘ ಪ್ರತಿಭಟನೆ ನಡೆಸಿತು.

    ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ನೇತೃತ್ವದಲ್ಲಿ ವಿಧಾನ ಸಭೆ, ವಿಧಾನ ಪರಿಷತ್ ನೌಕರರು ವಿಧಾನ ಸೌಧದ ಗಾಂಧಿ ಪ್ರತಿಮೆ ಎದುರು ನೂರಾರು ನೌಕರರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಿದರು.

    ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಮರು ಜಾರಿಗೊಳಿಸಬೇಕು. ಆಡಳಿತ ಸುಧಾರಣಾ ಆಯೋಗ 2ರ ಅವೈಜ್ಞಾನಿಕ ಮತ್ತು ನೌಕರ ವಿರೋಧಿ ಶಿಫಾರಸ್ಸುಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮಾತನಾಡಿ, ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯ ಮಾಡಿದೆ. 7ನೇ ವೇತನ ಆಯೋಗ ವರದಿ ಸಿದ್ಧಪಡಿಸಿದ್ದರೂ ಅದನ್ನು ಪಡೆಯದೆ ಅವಧಿ ವಿಸ್ತರಿಸಲಾಗಿದೆ. ತಕ್ಷಣ ಅವಧಿ ವಿಸ್ತರಿಸಿರುವ ಆದೇಶವನ್ನು ಹಿಂಪಡೆದು ವರದಿಯನ್ನು ಸ್ವೀಕರಿಸಬೇಕು. ಅದರಲ್ಲಿರುವ ಅವೈಜ್ಞಾನಿಕ ಅಂಶಗಳನ್ನು ಕೈಬಿಟ್ಟು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

    ರಾಜಸ್ತಾನ, ಜಾರ್ಖಂಡ್, ಛತ್ತೀಸ್‌ಗಡ, ಪಂಜಾಬ್ ಸರ್ಕಾರಗಳು ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಮರುಸ್ಥಾಪಿಸಿ ಈಗಾಗಲೇ ಆದೇಶ ಹೊರಡಿಸಿವೆ. ಅದೇ ರೀತಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕು ಎಂದರು.
    ಆಡಳಿತ ಸುಧಾರಣಾ ಆಯೋಗ-2 ರ ನೌಕರ ವಿರೋಧಿ ಮತ್ತು ಅವೈಜ್ಞಾನಿಕ ಶಿಾರಸುಗಳನ್ನು ಕೈಬಿಡಬೇಕು. ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ. ಸಚಿವಾಲಯವನ್ನು ಬಂದ್ ಮಾಡುವ ನಿರ್ಣಯವನ್ನೂ ಕೈಗೊಳ್ಳಬೇಕಾಗುತ್ತದೆ ಎಂದು ರಮೇಶ್ ಸಂಗಾ ಎಚ್ಚರಿಸಿದರು.

    7ನೇ ವೇತನ ಆಯೋಗ ವರದಿ ಸಿದ್ಧಪಡಿಸಿಟ್ಟಿದೆ. ಆದರೆ ಸರ್ಕಾರ ವಿನಾಕಾರಣ 4 ತಿಂಗಳು ಅವಧಿ ವಿಸ್ತರಿಸಿದೆ. ತಕ್ಷಣ ವರದಿ ಪಡೆದು ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಿ, ಅನುಷ್ಠಾನಗೊಳಿಸಬೇಕು. ಕಳೆದ ಜುಲೈಯಿಂದಲೇ ಪರಿಷ್ಕೃತ ವೇತನ ಜಾರಿಯಾಗಬೇಕು ಮತ್ತು ನಿವೃತ್ತ ನೌಕರರಿಗೂ ಸೌಲಭ್ಯ ಕಲ್ಪಿಸಬೇಕು.
    -ರಮೇಶ್ ಸಂಗಾ, ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts