More

    ಬೊಮ್ಮನಹಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಹಾನಗಲ್ಲ: ಅಸಮರ್ಪಕ ಬಸ್ ಸೇವೆ ಹಾಗೂ ಸಿಬ್ಬಂದಿ ಅಸಹಕಾರ ಖಂಡಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಆವರಣದಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಗುರುವಾರ ನಡೆದಿದೆ.

    ಬೊಮ್ಮನಹಳ್ಳಿಯಿಂದ ಹಾನಗಲ್ಲಿನ ಕಾಲೇಜ್​ಗಳಿಗೆ ಪ್ರತಿದಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ತೆರಳುತ್ತಾರೆ. ಆದರೆ, ಬೆಳಗಿನ ವೇಳೆಯಲ್ಲಿ ಬಸ್​ಗಳ ಅನನುಕೂಲತೆ ಹೆಚ್ಚಾಗಿದೆ. ಬಸ್ ನಿರ್ವಾಹಕರು ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ನಿಗದಿತ ಸಮಯಕ್ಕೆ ಬಸ್​ಗಳು ಬಾರದಿರುವುದರಿಂದ ಕಾಲೇಜಿನ ವೇಳೆಯೊಳಗಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಬೆಳಗಿನ ವೇಳೆ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಓಡಿಸುವಂತಾಗಬೇಕು. ಎಲ್ಲ ಬಸ್​ಗಳಲ್ಲೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವಂತಾಗಬೇಕು. ಅದರಂತೆ ಸಂಜೆ 4.30ರಿಂದ 6 ಗಂಟೆಯವರೆಗೆ ಬೊಮ್ಮನಹಳ್ಳಿ ಮಾರ್ಗದಲ್ಲಿ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

    ಗ್ರಾಮಸ್ಥ ಅಣ್ಣಬಸವ ನೆಲವಿಗಿ ಮಾತನಾಡಿ, ಬೊಮ್ಮನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಹಾನಗಲ್, ಶಿವಮೊಗ್ಗ, ಹಿರೇಕೆರೂರ ಹಾಗೂ ಹುಬ್ಬಳ್ಳಿ ಘಟಕಗಳ ಹಲವು ಬಸ್​ಗಳು ಸಂಚಾರ ನಿಲ್ಲಿಸಿವೆ. ಇದರಿಂದಾಗಿ ಬೊಮ್ಮನಹಳ್ಳಿ ಸುತ್ತಲಿನ 20 ಗ್ರಾಮಗಳ ಪ್ರಯಾಣಿಕರು ಖಾಸಗಿ ವಾಹನ ಅವಲಂಬಿಸಬೇಕಾಗಿದೆ. ಈ ಸಮಸ್ಯೆ ಕಳೆದ 4-5 ವರ್ಷಗಳಿಂದ ಅನುಭವಿಸುತ್ತಿದ್ದೇವೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಮಾಲತೇಶ ಕಮ್ಮಾರ, ಕೀರ್ತಿ ದೇಶಪಾಂಡೆ, ಸುಮಿತ್ ಅಗಸರ, ವಸುಂಧರಾ ಪಾಟೀಲ, ಕವಿತಾ ಕರ್ಜಣಗಿ, ರೇಷ್ಮಾ ವಾಲಿಕಾರ, ಲಕ್ಷ್ಮೀ ಸುಕಾಲಿ, ಕಾವ್ಯಾ ಸುಣಗಾರ, ಕಾವ್ಯಾ ಬಳಿಗಾರ, ಪೂಜಾ ಟೋಪೋಜಿ, ಸೌಮ್ಯಾ ನಾಗನೂರ, ಶ್ರೀದೇವಿ ವೆಂಕಟಾಪುರಮಠ, ಅಭಿ ಪಾಟೀಲ, ಪ್ರಶಾಂತ ಭಜಂತ್ರಿ, ಸುದೀಪ ತುಕ್ಕೋಜಿ, ಮಂಜುನಾಥಸಿಂಗ ರಜಪೂತ, ಶಂಕರ ಸುಣಗಾರ, ಗೌತಮ್ ಟೋಪೋಜಿ, ಸಚಿನ್ ಯಲಿಗಾರ, ನಿಂಗನಗೌಡ ಪಾಟೀಲ, ತಾಲೂಕು ಕರವೇ ಅಧ್ಯಕ್ಷ ನಾಗರಾಜ ಮಲ್ಲಮ್ಮನವರ, ಸಾರ್ವಜನಿಕರಾದ ಸಿ.ಸಿ. ಬಳಿಗಾರ, ಬಸವಣ್ಣೆಯ್ಯ ಸಾಲಿಮಠ, ಚಂದ್ರಗೌಡ ಪಾಟೀಲ, ಇಂದುಧರ ಅಪ್ಪಾಜಿ, ಹರೀಶ ಬೇಂದ್ರೆ, ವಿಜಯ ಜಿಗಳಿಕೊಪ್ಪ, ಗಣೇಶ ಧಾರವಾಡ ಇತರರು ಇದ್ದರು.

    ಕಳೆದ ಆರು ತಿಂಗಳಿನಲ್ಲಿ ಕರೊನಾ ಸಂದರ್ಭವಿರುವುದರಿಂದ ಒಂದೇ ಬಸ್​ನಲ್ಲಿ ಹೆಚ್ಚು ಜನರು ತೆರಳಬಾರದು ಎಂಬ ಉದ್ದೇಶಕ್ಕೆ ಬೇರೆ ವಾಹನದಲ್ಲಿ ಬರುವಂತೆ ನಿರ್ವಾಹಕರು ಹೇಳುತ್ತಿದ್ದಾರೆ. ಬೆಳಗ್ಗೆ 8.30ರಿಂದ 9.30ರ ಸಮಯದಲ್ಲಿ 5 ಬಸ್​ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಎಲ್ಲರೂ ಮೊದಲು ಆಗಮಿಸುವ ವಾಹನಕ್ಕೆ ಮುಗಿಬೀಳುವುದರಿಂದ ಈ ಸಮಸ್ಯೆ ಉದ್ಭವವಾಗುತ್ತಿದೆ. ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗುವುದು.

    | ವೀರೇಶ ಅರ್ಕಾಚಾರಿ, ಘಟಕ ವ್ಯವಸ್ಥಾಪಕ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts