More

    ರೈತರು, ಮಧ್ಯಮ ವರ್ಗದ ಆರೋಗ್ಯ ಸುಧಾರಣೆಗೆ ಯಶಸ್ವಿನಿ

    ಚಿಕ್ಕಮಗಳೂರು: ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಜಗದೀಶ್ ತಿಳಿಸಿದರು.
    ಹಿರೇಮಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸುತ್ತಮುತ್ತಲಿನ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ರೈತರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಇಂತಹ ಜನರ ಆರೋಗ್ಯ ಸುಧಾರಣೆಗೆ ಯಶಸ್ವಿನಿ ಯೋಜನೆ ಸಂಜೀವಿನಿಯಾಗಿದೆ. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
    ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟ ಹಾಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು. ಆ ನಿಟ್ಟಿನಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಿ ಜನಸಾಮಾನ್ಯರ ಆರೋಗ್ಯಪೂರ್ಣ ಬದುಕಿಗೆ ಸರ್ಕಾರ ಕಾಯಕಲ್ಪ ರೂಪಿಸಿದೆ. ಯಶಸ್ವಿನಿ ಯೋಜನೆಯಡಿ ನೋಂದಣಿಯಾದ ಸದಸ್ಯರ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ಮೊತ್ತದ ನಗದು ರಹಿತ ಚಿಕಿತ್ಸೆ, ಸಾವಿರಕ್ಕೂ ಹೆಚ್ಚು ಬಗೆಯ ಕಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಅಲ್ಲದೇ ಜಿಲ್ಲೆ ಸೇರಿದಂತೆ ರಾಜ್ಯದ ನೂರಾರು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ದೊರೆಯಲಿದೆ ಎಂದು ತಿಳಿಸಿದರು.
    ಸಹಕಾರಿ ಸಂಘದಲ್ಲಿ ರೈತರ ಆರೋಗ್ಯ ಸುಧಾರಣೆಗಾಗಿ ಯಶಸ್ವಿನಿ ಯೋಜನೆ ಪ್ರಾರಂಭಿಸಲಾಗಿದೆ. ಸರ್ಕಾರದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾದ ಯಶಸ್ವಿನಿ ಕಾರ್ಡ್ ಬಳಸಿಕೊಂಡು ರೈತರು ಆರೋಗ್ಯ ವಿಮಾದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದರು.
    ಇದೇ ವೇಳೆ 300ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಂಘದಿಂದ ಯಶಸ್ವಿನಿ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ಎಚ್.ಎಂ.ಲೋಕೇಶ್, ಎಚ್.ಕೆ.ಕೇಶವಮೂರ್ತಿ, ಎಚ್.ಸಿ.ಗಂಗಾಧರ್, ನೀಲಶೆಟ್ಟಿ, ಸತೀಶ್, ಮಾಲ್ಲುಂಡಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಕ್ ಹಾಗೂ ಮಾರಾಟಾಧಿಕಾರಿ ಅನಿಲ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts