More

    ಆಸ್ಪತ್ರೆ ಎದುರು ರೈತನ ಶವ ಇಟ್ಟು ಪ್ರತಿಭಟನೆ, ಸಚಿವ ಶಿವಾನಂದ ಪಾಟೀಲ ವಿರುದ್ಧ ಆಕ್ರೋಶ

    ಬಂಕಾಪುರ: ಸಚಿವ ಶಿವಾನಂದ ಪಾಟೀಲ ಅವರ ರೈತ ವಿರೋಧಿ ಹೇಳಿಕೆ ಖಂಡಿಸಿ ರಾಜ್ಯ ರೈತ ಸಂಘದವರು, ಬುಧವಾರ ಆತ್ಮಹತ್ಯೆ ಮಾಡಿಕೊಂಡ ರೈತನ ಶವವನ್ನು ಆಸ್ಪತ್ರೆ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

    ಶಿಗ್ಗಾಂವಿ ತಾಲೂಕಿನ ಶ್ಯಾಬಳ ಗ್ರಾಮದ ರೈತ ಚಂದ್ರಪ್ಪ ನಂಜುಂಡಪ್ಪ ಚನ್ನಾಪುರ (50) ಆತ್ಮಹತ್ಯೆ ಮಾಡಿಕೊಂಡ ರೈತ.

    ರೈತ ಸಂಘದ ಅಧ್ಯಕ್ಷ ನಿಂಗಪ್ಪ ಪೂಜಾರ ಮಾತನಾಡಿ, ಈ ಹಿಂದೆಯೂ ಸಚಿವ ಶಿವಾನಂದ ಪಾಟೀಲ, ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದರು. ಈಗ ಮತ್ತೆ ಪುನರಾವರ್ತನೆ ಆಗಿದೆ. ಪದೇಪದೆ ರೈತರನ್ನು ಅವಹೇಳನ ಮಾಡುವ ಸಚಿವ ಶಿವಾನಂದ ಪಾಟೀಲ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅವರ ಹೇಳಿಕೆ ಅವಿವೇಕದ ಪರಮಾವಧಿಯಾಗಿದೆ. ಸಚಿವರಿಗೆ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ನೀಡಲಿ. ಇಲ್ಲದಿದ್ದರೆ ಸರ್ಕಾರದ ವಿರುದ್ಧ ರೈತ ಸಂಘ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ತಾಲೂಕು ಅಧ್ಯಕ್ಷ ಮುತ್ತಣ್ಣ ಗುಡಗೇರಿ ಮಾತನಾಡಿ, ತಾಲೂಕಿನ ಶ್ಯಾಬಳ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಸಾವಿಗೆ ಸಚಿವ ಶಿವಾನಂದ ಪಾಟೀಲ ರೈತ ವಿರೋಧಿ ಹೇಳಿಕೆಯೇ ಕಾರಣ. ಪೊಲೀಸ್ ಮತ್ತು ಕಂದಾಯ ಇಲಾಖೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಮೃತ ರೈತನ ಕುಟುಂಬಕ್ಕೆ ಸಚಿವರು ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಸಂತೋಷ ಹಿರೇಮಠ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರತಿಭಟನಾ ನಿರತರಿಂದ ಅಹವಾಲು ಸ್ವೀಕರಿಸಿ, ಈ ತರಹದ ಘಟನೆ ಮರುಕಳಿಸದಂತೆ ಎಲ್ಲರೂ ಒಗ್ಗಟ್ಟಿನಿಂದ ನೋಡಿಕೊಳ್ಳಬೇಕಿದೆ. ಎಲ್ಲ ಇಲಾಖೆ ಮತ್ತು ರೈತ ಸಂಘಟನೆಗಳು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡೋಣ. ರೈತ ಮುಖಂಡರ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಿಗುವಂಥ ಎಲ್ಲ ಇಲಾಖೆಗಳ ಸವಲತ್ತುಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

    ಚನ್ನಪ್ಪ ಮರಡೂರ, ಆನಂದ ಕೆಳಗಿನಮನಿ, ಹನಮಂತ ದೊಡಮನಿ, ನೂರಅಹ್ಮದ್ ಮುಲ್ಲಾ, ರಾಜು ಪಿತಾಂಬರಿ, ಶಂಕರಗೌಡ ಪಾಟೀಲ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts