More

    ರೈತ, ಕನ್ನಡಪರ ಸಂಘಟನೆಗಳಿಂದ ಧರಣಿ

    ಶಿಗ್ಗಾಂವಿ: ಜಿಲ್ಲೆಯ ಶಿಗ್ಗಾಂವಿ, ಬ್ಯಾಡಗಿ, ಹಾನಗಲ್ಲ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಮೂರೂ ತಾಲೂಕುಗಳ ರೈತ, ಕನ್ನಡ ಪರ ಹಾಗೂ ಇತರ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಪಟ್ಟಣದ ಎಪಿಎಂಸಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ರೈತ ಪರ ಘೋಷಣೆ ಕೂಗುತ್ತಾ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ, ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸಂಜೆಯವರೆಗೆ ಧರಣಿ ನಡೆಸಲಾಯಿತು.

    ಪ್ರತಿಭಟನೆ ಉದ್ದೇಶಿಸಿ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತ ಸಂಘಟನೆಗಳ ತೀರ್ಮಾನದಂತೆ ಬರಪೀಡಿತ ಪಟ್ಟಿಗೆ ಮೂರು ತಾಲೂಕು ಸೇರಿಸುವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಬರಪೀಡಿತ ಪಟ್ಟಿಯಿಂದ ಮೂರು ತಾಲೂಕು ಕೈಬಿಟ್ಟಿರುವ ಕಾರಣ ತಿಳಿಸಬೇಕು ಎಂದರು.

    ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಮಳೆ ಇಲ್ಲದೆ ಕಂಗಟ್ಟಿರುವ ರೈತರನ್ನು ಕಡೆಗಣಿಸಿದರೆ ರಾಜ್ಯ ಸರ್ಕಾರಕ್ಕೆ ರೈತರೇ ವಿರೋಧ ಪಕ್ಷವಾಗಿ ಚಾಟಿ ಬೀಸುವಂತಹ ಕಾಲ ಬಂದಿದೆ. ರೈತನನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ರೈತ ಸಂಘಟನೆಗಳ ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಅವರು ಜಿಲ್ಲಾಧಿಕಾರಿ ಮೂಲಕ ಈ ಮೊದಲೇ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ನಿಮ್ಮ ಮನವಿಯನ್ನು ಮತ್ತೊಮ್ಮೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

    ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಸೆ. 30ರೊಳಗಾಗಿ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಭರವಸೆ ನೀಡಿದ್ದಾರೆ. ಮೂರು ದಿನದಲ್ಲಿ ಘೋಷಿಸದಿದ್ದರೆ ಮೂರು ತಾಲೂಕಿನ ತಾಲೂಕು ಆಡಳಿತದ ಮುಂದೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿ ಧರಣಿ ಕೈಬಿಟ್ಟರು.

    ವಿವಿಧ ಬೇಡಿಕೆ ಈಡೇರಿಸಲು ಮನವಿ: ತಮಿಳುನಾಡಿಗೆ ಕಾವೇರಿ ನೀರಯ ಹರಿಸಬಾರದು, ಕಬ್ಬು ಬೆಳೆ ವಿಮೆ ಮತ್ತು ಬೆಳೆ ಹಾನಿ ವ್ಯಾಪ್ತಿಗೆ ಸೇರ್ಪಡೆ, ಪ್ರಸ್ತುತ ಮುಂಗಾರು ಹಾಗೂ ಕಳೆದ ವರ್ಷದ ಹಿಂಗಾರಿನ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮೆ, ಹೈನುಗಾರಿಕೆಯ ಪ್ರೋತ್ಸಾಹ ಧನ ಬಿಡುಗಡೆ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿರುವ ರೈತರ ಬೆಳೆ ಸಾಲ ಮನ್ನಾ, ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸುಗಳ ನಿರಂತರ ವಿದ್ಯುತ್ ಪೂರೈಕೆ, ರಿಲಾಯನ್ಸ್ ಬೆಳೆ ವಿಮೆ ಕಂಪನಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಗಿದೆ.

    ಪ್ರತಿಭಟನೆಯಲ್ಲಿ ಮುಖಂಡರಾದ ಎಸ್.ವಿ. ಪಾಟೀಲ, ಈಶ್ವರಗೌಡ ಪಾಟೀಲ, ರಾಮಣ್ಣ ಕೆಂಚೆಳ್ಳೇರ, ಸಂತೋಷ ಚಾಕಲಬ್ಬಿ, ದೇವಪ್ಪ ಅರಳಿಕಟ್ಟಿ, ಗಂಗಾದರ ಬೆಂಡಲಗಟ್ಟಿ, ಭುವನೇಶ್ವರ ಶಿಡ್ಲಾಪೂರ, ವಿಜಯಲಕ್ಷ್ಮೀ ಗುಡಮಿ, ಶೋಭಾ ವನಹಳ್ಳಿ, ಬಸಲಿಂಗಪ್ಪ ನರಗುಂದ, ಸಂತೋಷಗೌಡ ಪಾಟೀಲ, ಪ್ರೇಮನಾಥಗೌಡ ಪಾಟೀಲ, ಪ್ರಕಾಶ ಬಾರ್ಕಿ, ರುದ್ರಗೌಡ ಕಾಡನಗೌಡ್ರ, ಮರಿಗೌಡ ಪಾಟೀಲ, ಮುತ್ತಣ್ಣ ಗುಡಗೇರಿ, ಶಂಭು ಪಾಟೀಲ, ನಿಂಗನಗೌಡ ಅಗಸನಹಳ್ಳಿ, ಸೋಮಣ್ಣ ಜಡೆಗೊಂಡರ, ವಿರುಪಾಕ್ಷಗೌಡ ಪಾಟೀಲ, ಈರಣ್ಣ ಸಮಗೊಂಡ, ಶಂಕರಗೌಡ ಪಾಟೀಲ, ಮಂಜುನಾಥ ಹಾವೇರಿ, ಬಸವರಾಜ ಜಕ್ಕಿನಕಟ್ಟಿ ಸೇರಿದಂತೆ ಶಿಗ್ಗಾಂವಿ, ಬ್ಯಾಡಗಿ, ಹಾನಗಲ್ಲ ತಾಲೂಕಿನ ಕನ್ನಡ ಪರ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

    ರಾಜ್ಯ ಸರ್ಕಾರ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೂರೂ ತಾಲೂಕಿನ ರೈತರು ಮತ್ತು ರೈತ ಪರ ಸಂಘಟನೆಗಳೊಂದಿಗೆ ನಮ್ಮದೇ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ.
    I ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts