More

    ಬಸ್ ಸಂಚಾರ ತಡೆದು ಪ್ರತಿಭಟನೆ

    ನರೇಗಲ್ಲ: ಸಕಾಲಕ್ಕೆ ಮತ್ತು ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳನ್ನು ಸಂಚಾರಕ್ಕೆ ಬಿಡುವಂತೆ ಒತ್ತಾಯಿಸಿ ಸಮೀಪದ ಜಕ್ಕಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗುರುವಾರ ರೋಣ ಸಾರಿಗೆ ಘಟಕದ ಬಸ್‌ಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಶಾಲಾ- ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಆಗ್ರಹಿಸಿ ರೋಣ ಸಾರಿಗೆ ಘಟಕದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇಲ್ಲಿತನಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಬೆಳಗ್ಗೆ 8ಗಂಟೆಗೆ ಬರಬೇಕಾದ ಬಸ್‌ಗಳು 9ಗಂಟೆಗೆ ಬರುತ್ತಿವೆ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದ್ದು, ಶಾಲೆ ಆರಂಭವಾದ ಒಂದು ಗಂಟೆ ಬಳಿಕ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ ಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಕ್ಕಲಿ ಹಾಗೂ ಬೂದಿಹಾಳ ಗ್ರಾಮಗಳಿಂದ ನರೇಗಲ್ಲ, ಗದಗ ಪಟ್ಟಣಕ್ಕೆ ನಿತ್ಯ ನೂರಾರು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಆದರೆ ಸಮರ್ಪಕ ಬಸ್ ಸೌಕರ್ಯ ಇಲ್ಲದೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲಾಗುತ್ತಿಲ್ಲ. ರೋಣ ಸಾರಿಗೆ ಘಟಕದ ಅಧಿಕಾರಿಗಳು ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

    ರೋಣದಿಂದಲೇ ಜಕ್ಕಲಿ ಮಾರ್ಗವಾಗಿ ಬರುವ ಬಸ್‌ಗಳು ವಿದ್ಯಾರ್ಥಿಗಳನ್ನು ತುಂಬಿಕೊಂಡು ಬರುತ್ತಿವೆ. ನಮಗೆ ಬಸ್‌ನಲ್ಲಿ ನಿಂತು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

    ಈ ವೇಳೆಯಲ್ಲಿ ಗ್ರಾಮಸ್ಥರು ರೋಣ ಘಟಕದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯಾರ್ಥಿಗಳಿಗೆ ಶಾಲಾ ಸಮಯಕ್ಕೆ ಹಾಗೂ ಸಂಜೆ ಶಾಲೆ ಬಿಟ್ಟ ನಂತರ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿಕೊಡಬೇಕು. ಅವು ವೇಳೆಗೆ ಸರಿಯಾಗಿ ಸಂಚರಿಸಬೇಕು ಎಂದು ಮನವಿ ಮಾಡಿದರು. ಬಸ್ ವ್ಯವಸ್ಥೆ ಮಾಡದಿದ್ದಲ್ಲಿ ರೋಣ ಸಾರಿಗೆ ಘಟಕದ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ರೋಣ ಸಾರಿಗೆಯ ಅಧಿಕಾರಿ ನಾಳೆಯಿಂದಲೇ ಸಮಯಕ್ಕೆ ಸರಿಯಾಗಿ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇವೆ. ಮುಂದೆ ಹೀಗಾಗದಂತೆ ನೋಡಿಕೊಳ್ಳತ್ತೇವೆ ಎಂದು ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts