More

    ಪ್ರಜ್ವಲ್, ರೇವಣ್ಣ ಬಂಧನಕ್ಕೆ ಆಗ್ರಹ, ವಿಡಿಯೋ ಹರಿಬಿಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯ: ನಗರದಲ್ಲಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

    ಮಂಡ್ಯ: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣರನ್ನ ಬಂಧಿಸುವಂತೆ ಒತ್ತಾಯಿಸಿ ಗುರುವಾರ ನಗರದಲ್ಲಿ ಜನಪರ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
    ಸರ್‌ಎಂವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಒಕ್ಕೂಟದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು. ಪೆನ್‌ಡ್ರೈವ್ ಮುಖಾಂತರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹರಿಬಿಡಲಾಗಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಂತಹ ಕೃತ್ಯದ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿಯ ಚಿತ್ರಗಳು ಮತ್ತು ದೃಶ್ಯಗಳ ಮೂಲಕ ಮಹಿಳೆಯರ ಘನತೆ ಮತ್ತು ಖಾಸಗಿ ಬದುಕಿನ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
    ಪೆನ್‌ಡ್ರೈವ್‌ಗೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ನೋಡಿದರೆ ಜನಪ್ರತಿನಿಧಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಣುತ್ತಿದೆ. ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾಧವಾಗುತ್ತದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರ ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವುದು ಅತ್ಯಂತ ಹೀನ ಕೃತ್ಯವಾಗಿದೆ. ಆದ್ದರಿಂದ ಕೃತ್ಯ ಎಸಗಿದವರಷ್ಟೇ ಅಲ್ಲದೆ ಬಹಿರಂಗ ಪಡಿಸಿದವರೂ ಶಿಕ್ಷಾರ್ಹವೇ ಆಗಿದೆ. ಹಾಗಾಗಿ ಪತ್ತೆ ಹಚ್ಚಿ ಸತ್ಯವನ್ನು ಬಹಿರಂಗ ಪಡಿಸಬೇಕು. ಇಂತಹ ಹೀನ ಕೃತ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡಿದವರನ್ನೂ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಸುನಂದಾ ಜಯರಾಂ, ದೇವಿ, ಸಿ.ಕುಮಾರಿ, ಲತಾ, ಸುಶೀಲಾ, ಮಂಜುಳಾ, ಪ್ರೇಮಮ್ಮ, ಮಹಾದೇವಮ್ಮ, ಸತ್ಯಭಾಮ, ವಿಜಯಲಕ್ಷ್ಮೀ ರಘುನಂದನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts