More

    ರೈತ ಸಂಪರ್ಕ ಕೇಂದ್ರದ ವಿರುದ್ಧ ಪ್ರತಿಭಟನೆ

    ಹನೂರು : ತಾಲೂಕಿನ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಾಲ್‌ಗೆ ನಿಗದಿಯಾಗಿರುವ ಬೆಲೆಗಿಂತ ಹೆಚ್ಚುವರಿ ಹಣ ಪಡೆದಿರುವುದನ್ನು ಖಂಡಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ರೈತಸಂಪರ್ಕ ಕೇಂದ್ರದ ಮುಂಭಾಗ ಜಮಾಯಿಸಿದ ರೈತರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ನೀಡುವ ಕೃಷಿ ಸಂಬಂಧಿತ ಪದಾರ್ಥಗಳಲ್ಲೂ ರಾಜ್ಯ ಸರ್ಕಾರ ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದರು.
    ಈ ವೇಳೆ ಪರಿವರ್ತನಾ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕೃಷಿ ಇಲಾಖೆಯಿಂದ ಇದೀಗ ಟಾರ್ಪಾಲ್ ವಿತರಣೆಯಾಗುತ್ತಿದೆ. ಇದಕ್ಕೆ 1,270 ರೂ. ದರ ನಿಗದಿ ಮಾಡಲಾಗಿದೆ. ಆದರೆ, ಇಲ್ಲಿನ ಅಧಿಕಾರಿಗಳು ರೈತರಿಂದ ಈಗಾಗಲೇ 1,600 ರೂ. ವಸೂಲಿ ಮಾಡಿದ್ದಾರೆ. ಇದರಿಂದ 330 ರೂ. ಹೆಚ್ಚುವರಿ ಪಡೆದಂತಾಗಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರೈತರಿಂದಲೂ ಸುಲಿಗೆ ಮಾಡಲು ಸರಕಾರ ಅಧಿಕಾರಿಗೆ ಟಾಸ್ಕ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಈ ವರ್ಷ ಸಮರ್ಪಕವಾಗಿ ಮಳೆ ಇಲ್ಲದ ಪರಿಣಾಮ ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ವೇಳೆ ಸಹಾಯಧನದಲ್ಲಿ ನೀಡುವ ಟಾರ್ಪಾಲ್‌ಗೂ ಹೆಚ್ಚುವರಿ ಹಣ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
    ರೈತರಿಂದ ಹೆಚ್ಚುವರಿ ಹಣ ಪಡೆದ ಅಧಿಕಾರಿ ವಿರುದ್ಧ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು. ಪಡೆದಿರುವ ಹಣವನ್ನು ರೈತರಿಗೆ ಹಿಂತಿರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪಳನಿಸ್ವಾಮಿ, ನವೀನ್‌ಕುಮಾರ್, ವೆಂಕಟೇಶ್, ಮಹೇಂದ್ರ, ನವೀನ್, ಪ್ರಕಾಶ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts