More

    ಮೀಸಲಾತಿ ರದ್ದತಿ ವಿರೋಧಿಸಿ ಪ್ರತಿಭಟನೆ

    ಚಿತ್ರದುರ್ಗ: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರವರ್ಗ 2 ‘ಬಿ’ ಅಡಿಯಲ್ಲಿದ್ದ ಮೀಸಲಾತಿಯನ್ನು ಪುನರ್ ಸ್ಥಾಪಿಸಿ, ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಸಚಿವ ಸಂಪುಟದಲ್ಲಿ ಈಚೆಗೆ ಸಮುದಾಯಕ್ಕಿದ್ದ ಮೀಸಲಾತಿ ರದ್ದುಗೊಳಿಸಿ, ಅಸಂವಿಧಾನಿಕ ಹಾಗೂ ಒಂದು ನಿರ್ದಿಷ್ಟ ಸಮುದಾಯವನ್ನೇ ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಹಿಂದಿನಂತೆ ಮೀಸಲಾತಿ ನೀಡಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    ವಕೀಲ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಹೊಸ ಕಾಯ್ದೆ ಜಾರಿಗೊಳಿಸಿ ಅವರ ಹಕ್ಕು, ಸೌಲಭ್ಯ ಕಸಿಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆಲ್ಲಾ ಹೆದರುವುದಿಲ್ಲ, 2 ‘ಬಿ’ ಅಡಿ ಇದ್ದ ಶೇ. 4ರಷ್ಟು ಮೀಸಲಾತಿ ಮರಳಿ ಪಡೆಯುವವರೆಗೂ ಹೋರಾಟ ನಿಲ್ಲದು ಎಂದರು.

    ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ, ಮುಸ್ಲಿಂ ಸಮುದಾಯವನ್ನೇ ಎರಡೂ ಸರ್ಕಾರಗಳು ಗುರಿಯಾಗಿಸಿಕೊಂಡು ವಿನಾಕಾರಣ ಕಿರುಕುಳ ನೀಡುತ್ತಿವೆ. ಮುಸಲ್ಮಾನರಿಗಿದ್ದ ಶೇ. 4ರಷ್ಟು ಮೀಸಲಾತಿ ರದ್ದುಗೊಳಿಸಿ ಒಕ್ಕಲಿಗರಿಗೆ, ಲಿಂಗಾಯತರಿಗೆ ತಲಾ ಶೇ. 2ರಷ್ಟು ನೀಡಲು ತೀರ್ಮಾನಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

    ಮತ್ತೊಬ್ಬರ ಮೀಸಲಾತಿ ಕಸಿದು ನಮಗೆ ನೀಡುವುದು ಬೇಡ. ಸಾಮಾಜಿಕ ನ್ಯಾಯದಡಿ ನೀಡಿ ಎಂಬುದಾಗಿ ಆ ಎರಡೂ ಸಮುದಾಯಗಳು ಕೇಳಿದ್ದರೂ ಸಿಎಂ ನಿರ್ಧಾರ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ದೂರಿದರು.

    ಜಿಲ್ಲಾ ಕಾರ್ಯದರ್ಶಿ ಜಾಕಿರ್ ಹುಸೇನ್ ಮಾತನಾಡಿ, ಹಿಜಾಬ್, ಹಜಾನ್ ನಂತರ ಮೀಸಲಾತಿ ಕಿತ್ತುಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ಈ ಹಿಂದಿನಂತೆ ಶೇ. 4ರಷ್ಟು ಮೀಸಲಾತಿ ದೊರೆಯಬೇಕು. ಇಲ್ಲದಿದ್ದರೆ, ಪ್ರಾಣ ಬಿಟ್ಟೆವೂ ಮೀಸಲಾತಿ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಅಣ್ಣಪ್ಪ, ಸಾದಿಕ್, ಸೈಯದ್ ಸಾದತ್, ಕಮ್ರಾನ್ ಅಲಿ, ಓಬಣ್ಣ, ಸುಬಾನುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts