More

    ಪ್ರಾಪರ್ಟಿ ಕಾರ್ಡ್ ನೂರೆಂಟು ವಿಘ್ನ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಎರಡು-ಮೂರು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸದ್ದು ಮಾಡುತ್ತಿರುವ ನಗರ ಆಸ್ತಿ ಮಾಲೀಕತ್ವದ ದಾಖಲೆ (ಯುಪಿಒಆರ್) ವ್ಯವಸ್ಥೆ ಅವ್ಯವಸ್ಥೆಯ ಕೇಂದ್ರವಾಗಿದೆ. ಸದ್ಯ ಪ್ರಾಪರ್ಟಿ ಕಾರ್ಡ್ ಕಡ್ಡಾಯವಲ್ಲದಿದ್ದರೂ, ಕಾರ್ಡ್ ಮಾಡಿಸಲು ಹೊರಟ ನಾಗರಿಕರು ಹೈರಾಣಾಗುತ್ತಿದ್ದಾರೆ.
    ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ 2019ರಲ್ಲಿ ಪಿಆರ್ ಕಾರ್ಡ್ ಕಡ್ಡಾಯಗೊಳಿಸಿ ಸರ್ಕಾರ ಎರಡೆರಡು ಬಾರಿ ಆದೇಶ ಹೊರಡಿಸಿತ್ತು. ಆದರೆ ಅರ್ಧದಷ್ಟೂ ಪಿಆರ್ ಕಾರ್ಡ್ ವಿತರಣೆಯಾಗದೆ ಆಸ್ತಿ ನೋಂದಣಿಗೆ ಸಮಸ್ಯೆಯಾದಾಗ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ವಿನಾಯಿತಿ ಪ್ರಕಟಿಸಲಾಗಿತ್ತು.

    1.59 ಲಕ್ಷ ಆಸ್ತಿ: ಪಾಲಿಕೆ ವ್ಯಾಪ್ತಿಯಲ್ಲಿ 1,59,000 ಆಸ್ತಿಗಳಿದ್ದು, ಪ್ರಸ್ತುತ 67,000 ಕರಡು ಕಾರ್ಡ್‌ಗಳು ಸಿದ್ಧಗೊಂಡಿವೆ. 50,000ದಷ್ಟು ಫೈನಲ್ ಕಾರ್ಡ್‌ಗಳು ಸಿದ್ಧವಾಗಿವೆ. ಸದ್ಯ ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಿಲ್ಲವಾದರೂ ಮುಂದಿನ ದಿನಗಳಲ್ಲಿ ಆಸ್ತಿ ಸಂಬಂಧಿಸಿದ ಎಲ್ಲ ಕರಾರು ನೋಂದಣಿ ಮತ್ತು ವ್ಯವಹಾರಗಳಿಗೆ ಪ್ರಾಪರ್ಟಿ ಕಾರ್ಡ್ ಅಗತ್ಯ ಬೀಳುವುದು ನಿಶ್ಚಿತ. ಇದೇ ದೃಷ್ಟಿಯಿಂದ ನಾಗರಿಕರು ಕಾರ್ಡ್ ಮಾಡಿಸಲು ಮುಂದಾಗುತ್ತಿದ್ದು, ಹತ್ತಾರು ಸಮಸ್ಯೆಗಳು ಎದುರಾಗುತ್ತಿವೆ.

    ಅವ್ಯವಸ್ಥೆಗಳ ಕೊಂಪೆ: ಕಚೇರಿಯಲ್ಲಿ ಸಿಬ್ಬಂದಿ ಕೊರತೆ ತೀವ್ರ ಪ್ರಮಾಣದಲ್ಲಿ ಇದೆ. 36 ಗ್ರಾಮಗಳಲ್ಲಿ 30 ಜನರು ಸರ್ವೇಯರ್ ಇರಬೇಕಾದಲ್ಲಿ ಒಂಭತ್ತು ಮಂದಿ ಮಾತ್ರ ಇದ್ದಾರೆ. ನಾಲ್ಕು ವಿಚಾರಣಾ ಅಧಿಕಾರಿಗಳ ಹುದ್ದೆಯಲ್ಲಿ ಓರ್ವರು ಮಾತ್ರ ಇದ್ದಾರೆ. ಇತರ ವಿಭಾಗದ ಹುದ್ದೆಗಳ ಪರಿಸ್ಥಿತಿಯೂ ಇದೇ ಆಗಿದೆ. ಇರುವ ಅಧಿಕಾರಿ, ಸಿಬ್ಬಂದಿ ಮೇಲೆ ಸಹಜವಾಗಿಯೇ ಹೆಚ್ಚಿನ ಒತ್ತಡವಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಂಪರ್ಕ ದೂರವಾಣಿ ಸಂಖ್ಯೆಗಳಿಲ್ಲ. ಅಗತ್ಯ ಇರುವವರು ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಮೊರೆ ಹೋಗುವ ಪರಿಸ್ಥಿತಿ.

    ಲಂಚವಿಲ್ಲದೆ ಕಡತ ಮಿಸುಕಾಡಲ್ಲ?: ಮಂಗಳೂರು ಮಿನಿ ವಿಧಾನಸೌಧ ಆವರಣದಲ್ಲಿರುವ ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಲಂಚ ನೀಡದೆ ಯಾವುದೇ ಕೆಲಸ ನಡೆಯುವುದಿಲ್ಲ. ಸಾಮಾನ್ಯ ಜನರು 2,000ದಿಂದ 15,000 ರೂ. ತನಕ ಲಂಚ ಪಾವತಿಸುತ್ತಿದ್ದಾರೆ. ಲಂಚ ನೀಡಿದವರಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ದೊರೆಯುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಹನುಮಂತ ಕಾಮತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆಯೂ ನಡೆದಿದೆ. ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿರುವ ಪತ್ರದಲ್ಲಿ, ‘ಪ್ರಾಪರ್ಟಿ ಕಾರ್ಡ್ ಸಂಬಂಧಿಸಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಲ್ಲಿಸಿರುವ ದೂರು ಅರ್ಜಿಯಲ್ಲಿ ಸಮರ್ಪಕ ಪೂರಕ ದಾಖಲೆಗಳನ್ನು ಲಗತ್ತೀಕರಿಸಿಲ್ಲ. ಯುಪಿಒಆರ್ ಕಚೇರಿಯಲ್ಲಿ ಟೋಕನ್ ಪದ್ಧತಿ ಜಾರಿಯಲ್ಲಿದ್ದು, ತಂತ್ರಾಂಶ ದೋಷಗಳು ಉಂಟಾದಾಗ ಮಾತ್ರ ವಿಳಂಬವಾಗುತ್ತಿದೆ. ಆದ್ದರಿಂದ ಸದ್ರಿ ಪ್ರಕರಣವನ್ನು ಮುಕ್ತಾಯಗೊಳಿಸಬಹುದೆಂಬ ಅಭಿಪ್ರಾಯವನ್ನು ತಮ್ಮ ಅವಗಾಹನೆಗೆ ಸಲ್ಲಿಸಲಾಗಿದೆ’ ಎಂದು ತಿಳಿಸಿ ಪ್ರಕರಣಕ್ಕೆ ಮುಕ್ತಾಯ ಹಾಡಲಾಗಿದೆ.

     ಮಧ್ಯವರ್ತಿಗಳದ್ದೇ ಕಾರುಬಾರು: ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಮಧ್ಯವರ್ತಿಗಳಿಲ್ಲದೆ ಕೆಲಸ ನಡೆಯುವುದಿಲ್ಲ ಎನ್ನುವುದನ್ನು ತಿಳಿಯಲು ಬಹುಶಃ ಯಾರಿಗೂ ಕಷ್ಟವಾಗದು. ಕಚೇರಿ ಆವರಣದಲ್ಲಿ ಐದು ನಿಮಿಷ ಸುಮ್ಮನೆ ನಿಂತರೂ ಸಾಕು. ಇದು ಸುಲಭವಾಗಿ ತಿಳಿದುಬಿಡುತ್ತದೆ ಎನ್ನುತ್ತಾರೆ ಇಲ್ಲಿನ ನಿತ್ಯ- ನೇರ ಸಂಪರ್ಕವಿರುವ ಜನರು.
    ಕರಡು ಕಾರ್ಡ್‌ನಲ್ಲಿ ನಕಾಶೆ, ಪೂರಕ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ ಕೊಡಲಾಗುತ್ತಿದೆ. ಈ ಮೂಲಕ ಸಂಬಂಧಪಟ್ಟ ಸಾರ್ವಜನಿಕರನ್ನು ಅಲೆದಾಡುವಂತೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿಯವರೇ ಟಿಪ್ಪಣಿಯಲ್ಲಿ ತಿಳಿಸಿದಂತೆ ಟೋಕನ್ ವ್ಯವಸ್ಥೆ ಇದ್ದರೂ ಆರಂಭಿಕ ಸಂಖ್ಯೆಯ ಟೋಕನ್‌ಗಳನ್ನು ಮಧ್ಯವರ್ತಿಗಳಿಗಾಗಿ ತೆಗೆದಿರಿಸಲಾಗುತ್ತಿದೆ ಎನ್ನುವುದು ಗಂಭೀರ ಆರೋಪ.

    ಒಟ್ಟು ಆಸ್ತಿಯಲ್ಲಿ ಶೇ.50 ಭಾಗದ ಪ್ರಾಪರ್ಟಿ ಕಾರ್ಡ್ ಕರಡು ಸಿದ್ಧಗೊಂಡಿದೆ. ಜನರು ನೀಡಿದ ಮಾಹಿತಿ ಆಧರಿಸಿ ಕರಡು ಕಾರ್ಡ್‌ಗಳು ತಯಾರಾಗುತ್ತವೆ. ಫೈನಲ್ ಕಾರ್ಡ್ ನಿರ್ದಿಷ್ಟ ಮೊತ್ತ ಪಾವತಿಸಿ ಕೊಂಡೊಯ್ಯಬೇಕಾಗಿರುವ ಕಾರಣ ಕೆಲವರು ಸ್ವಲ್ಪ ತಡವಾಗಿ ಕೊಂಡೊಯ್ಯುತ್ತಾರೆ. ಅಲ್ಲದೆ ಒಟ್ಟು ಆಸ್ತಿಯ ಶೇ.30 ಭಾಗ ನಗರದ ಹೊರವಲಯದಲ್ಲಿದೆ.
    – ನಿರಂಜನ್ ಕೆ, ಸಹಾಯಕ ನಿರ್ದೇಶಕರು, ಭೂಮಾಪನಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts