More

    ನೈಸರ್ಗಿಕ ಕೃಷಿ ಪದ್ಧತಿ ಉತ್ತೇಜನ ಅಗತ್ಯ: ರಾಜ್ಯಪಾಲ ಗೆಹಲೋತ್​ ಹೇಳಿಕೆ

    ಬೆಂಗಳೂರು: ವ್ಯವಸಾಯ ಕ್ಷೇತ್ರದಲ್ಲಿ ಭವಿಷ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪ್ರಪಂಚದ ವಿವಿಧೆಡೆ ಲಭ್ಯವಿರುವ ನಾವೀನ್ಯತೆ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದರಿಂದ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲು ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಅಗತ್ಯ ಇದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ತಿಳಿಸಿದ್ದಾರೆ.

    ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸೋಮವಾರ ಆಯೋಜಿಸಿದ್ದ 58ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನಿಸಿ ಅವರು ಮಾತನಾಡಿದರು.

    ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಮೂಲ ಆಧಾರ ಸ್ತಂಭವಾಗಿದ್ದು, ದೇಶದ ಜಿಡಿಪಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಪ್ರಸ್ತುತ ದೇಶದಲ್ಲಿ ಕೃಷಿ ಶಿಕ್ಷಣದ ಅಗತ್ಯವನ್ನು ದೊಡ್ಡ ಮಟ್ಟದಲ್ಲಿ ಅನುಭವಿಸಲಾಗುತ್ತಿದೆ. ಇದು ಸ್ವಯಂ ಉದ್ಯೋಗಕ್ಕೂ ಉತ್ತಮ ವೇದಿಕೆ ಕಲ್ಪಿಸಿದೆ. ಬೆಳೆ ಉತ್ಪಾದಕತೆ ಮತ್ತು ಆಹಾರದ ಗುಣಮಟ್ಟವು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ ಎಂದು ಪ್ರತಿಪಾದಿಸಿದರು.

    ನೈಸರ್ಗಿಕ ಕೃಷಿಯು ಪ್ರಾಚೀನ ವ್ಯವಸಾಯ ವಿಧಾನವಾಗಿದೆ. ಈ ವಿಧಾನದಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಬಳಸುವುದಿಲ್ಲ. ಈ ರೀತಿಯ ಕೃಷಿಯು ಪ್ರಕೃತಿಯಲ್ಲಿ ಕಂಡುಬರುವ ಅದೇ ಅಂಶಗಳನ್ನು ಕೃಷಿಯಲ್ಲಿ ಕೀಟನಾಶಕಗಳಾಗಿ ಬಳಸಲಾಗುತ್ತದೆ. ಇದು ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಸಾವಯವ ಗೊಬ್ಬರಗಳ ಬಳಕೆಯೂ ಭೂಮಿಯ ಗುಣಮಟ್ಟವನ್ನು ಸುಧಾರಿಸುತ್ತದೆ. ಉತ್ಪಾದನಾ ವೆಚ್ಚದಲ್ಲಿ ಕಡಿತವಾಗಿ, ಆದಾಯ ವೃದ್ಧಿಗೂ ದಾರಿ ಮಾಡಿಕೊಡುತ್ತದೆ ಎಂದರು.

    ಹೊಸ ತಂತ್ರಜ್ಞಾನ ಬಳಸಿರಿ:

    ಕಳೆದ ಕೆಲವು ವರ್ಷಗಳಿಂದ ಹೈಡ್ರೋಪೋನಿಕ್ ಮತ್ತು ಏರೋಪೋನಿಕ್ ತಂತ್ರಗಳನ್ನು ಬಳಸಿಕೊಂಡು ಕೃಷಿ ಮಾಡುವ ಪ್ರವೃತ್ತಿಯು ಜನಪ್ರಿಯವಾಗುತ್ತಿದೆ. ಈ ತಂತ್ರಜ್ಞಾನದಲ್ಲಿ, ಸಸಿಗಳ ನೆಡುವಿಕೆಯಿಂದ ವಿವಿಧ ಹಂತದ ಬೆಳವಣಿಗೆಯವರೆಗೆ ಮಣ್ಣಿನ ಅಗತ್ಯವಿಲ್ಲ. ಈ ತಂತ್ರಗಳು ಕೃಷಿಯ ಇತರ ವಿಧಾನಗಳಿಗೆ ಹೋಲಿಸಿದರೆ ವೆಚ್ಚವನ್ನು ಕಡಿಮೆ ಮಾಡುವುದರಿಂದ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ರಾಜ್ಯಪಾಲರು ಸಲಹೆ ನೀಡಿದರು.

    ಘಟಿಕೋತ್ಸವದಲ್ಲಿ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಹಾಗೂ ಇತರ ಅಧಿಕಾರಿ ವರ್ಗದವರಿದ್ದರು.

    ಸಮಗ್ರ ಕೃಷಿ ಅಪ್ಪಿದ ರೈತನಿಗೆ ಗೌರವ ಡಾಕ್ಟರೇಟ್:

    ರಾಜ್ಯದಲ್ಲಿ ಮೊದಲ ಬಾರಿಗೆ ಇಸ್ರೇಲ್ ಮಾದರಿ ಹೈನುಗಾರಿಕೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ವಿಯಾಗಿರುವುದಲ್ಲದೆ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಕೈ ತುಂಬಾ ಆದಾಯ ಸಂಪಾದಿಸಿ ಪ್ರಗತಿಪರ ರೈತರಾಗಿ ಗುರುತಿಸಿಕೊಂಡಿರುವ ಹಾಸನ ಜಿಲ್ಲೆ ಅರಕಲಗೂಡಿನ ದೊಡ್ಡಮಗ್ಗೆ ಗ್ರಾಮದ ಎಂ.ಸಿ.ರಂಗಸ್ವಾಮಿ ಅವರಿಗೆ ಕೃಷಿ ವಿವಿಯ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು. ರೈತಾಪಿ ವರ್ಗದವರಿಗೆ ಮಾದರಿಯಾಗಿರುವ ಈ ಕೃಷಿಕನ ಸಾಧನೆಯನ್ನು ರಾಜ್ಯಪಾಲರು ಶ್ಲಾಸಿದರು.

    ವಿದ್ಯಾರ್ಥಿನಿಯರಿಂದ ಚಿನ್ನದ ಪದಕಗಳ ಕೊಳ್ಳೆ:

    58ನೇ ಘಟಿಕೋತ್ಸವದಲ್ಲಿ ಒಟ್ಟು 1,244 ವಿದ್ಯಾರ್ಥಿಗಳಿಗೆ ವಿವಿಧ ಡಾಕ್ಟೋರಲ್, ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಯಿತು. ಒಟ್ಟು 156 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣಪತ್ರಗಳ ಪೈಕಿ ವಿದ್ಯಾರ್ಥಿನಿಯರು ಸಿಂಹಪಾಲು ಪದಕಗಳನ್ನು (130) ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts