More

  ರೆಡ್ಡಿ ರಿಪಬ್ಲಿಕ್ ಆಡಳಿತ ಶುರು

  ಗಂಗಾವತಿ: ಹೈಕೋರ್ಟ್ ತೀರ್ಪು ಆದೇಶ ಉಲ್ಲಂಸಿ ತಾಲೂಕಿನ ಸಣಾಪುರ ಕೆರೆಯಲ್ಲಿ ಹರಿಗೋಲು ಹಾಕಲು ಶಾಸಕ ಗಾಲಿ ಜನಾರ್ದನರೆಡ್ಡಿ ಚಾಲನೆ ನೀಡಿದ್ದು,‘ರಿಪಬ್ಲಿಕ್ ಆಡಳಿತ’ ವ್ಯವಸ್ಥೆ ನೆನಪಿಸುತ್ತಿದೆ.

  ಹರಿಗೋಲು ಬಳಕೆಗೆ ಗ್ರಾಪಂ ಸೇರಿ ಗ್ರಾಮದ ಬಹುತೇಕರ ವಿರೋಧವಿದ್ದು, ಹಲವು ವರ್ಷಗಳಿಂದ ಹರಿಗೋಲು ಜಪ್ತಿ ಮಾಡುವ ಮೂಲಕ ಗ್ರಾಪಂ ಹೈಕೋರ್ಟ್ ತೀರ್ಪು ಕಟ್ಟುನಿಟ್ಟಿನಿಂದ ಪಾಲಿಸಿದೆ. ಅದ್ಯಾವದೂ ಲೆಕ್ಕಿಸದ ಶಾಸಕ ಗಾಲಿ ಜನಾರ್ದನರೆಡ್ಡಿ, ಹರಿಗೋಲು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರಲ್ಲದೇ, ಅರಣ್ಯ ಇಲಾಖೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ತಾಲೂಕಾಡಳಿತ, ಹಂಪಿ ಪ್ರಾಧಿಕಾರ, ಗ್ರಾಪಂ, ಮೀನುಗಾರಿಕೆ, ಪೊಲೀಸ್, ನೀರಾವರಿ, ಲೋಕೋಪಯೋಗಿ ಮತ್ತು ಬಂದರು ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅರಣ್ಯ ಸಿಬ್ಬಂದಿಯೊಂದಿಗೆ ಕೂಡಿಕೊಂಡು 24 ಗಂಟೆಯಲ್ಲಿ ಹರಿಗೋಲು ಸಂಚಾರದ ಯೋಜನೆ ರೂಪಿಸಲಾಗಿದೆ. ಟಿಕೆಟ್ ಮುದ್ರಣವಾಗಿದ್ದು, ಕೌಂಟರ್ ತೆರೆಯಲಾಗಿದೆ. ಎಲ್ಲವೂ ಮೌಖಿಕ ಆದೇಶದಂತೆ ನಡೆದಿದ್ದು ಗಮನಾರ್ಹ.

  ಹರಿಗೋಲು ನಿಷೇಧ: ಸಣಾಪುರದ ತುಂಗಭದ್ರಾ ನದಿಯಲ್ಲಿ ಹರಿಗೋಲು ಹಾಕುವುದು, ಮೀನುಗಾರಿಕೆ, ಈಜುವುದು ಇತರೆ ಚಟುವಟಿಕೆಗಳಿಗೆ ನಿಷೇಧವಿದ್ದು, 2005ರಲ್ಲಿ ಸಲ್ಲಿಸಿದ್ದ ರಿಟ್ ಪಿಟೇಶನ್ ಹೈಕೋರ್ಟ್ ಪುರಸ್ಕರಿಸಿದೆ. ಇದಕ್ಕೆ ಪೂರಕವಾಗಿ ನಿಷೇಧಿತ ವಲಯ ಎಂದು ನಾಮಲಕ ಹಾಕಲಾಗಿದೆ. ಮೋಜು-ಮಸ್ತಿ ನೆಪದಲ್ಲಿ ಹರಿಗೋಲು ಮೂಲಕ ಪ್ರವಾಸಿಗರ ಜೀವದೊಂದಿಗೆ ಚಲ್ಲಾಟವಾಡದಂತೆ ಕೋರ್ಟ್ ಸೂಚಿಸಿದೆ. ಹರಿಗೋಲು ಹಾಕುವುದರಿಂದ ಗ್ರಾಪಂಗೆ ಯಾವುದೇ ಲಾಭವಿಲ್ಲ, ಆದರೆ ಅನಾಹುತ ಸಂಭವಿಸಿದ್ದಲ್ಲಿ ಗ್ರಾಮಕ್ಕೆ ಮತ್ತು ಗ್ರಾಪಂಗೆ ಕೆಟ್ಟ ಹೆಸರು ಬರುವ ಕಾರಣಕ್ಕೆ ಗ್ರಾಪಂ ಆಡಳಿತ ಮಂಡಳಿ 10ವರ್ಷಗಳ ಹಿಂದೆ ಹರಿಗೋಲು ನಿಷೇಧದ ಠರಾವು ಪಾಸ್ ಮಾಡಿದೆ. 2019ರಲ್ಲಿ ಹರಿಗೋಲು ನಿಷೇಧ ಆದೇಶವನ್ನು ತಾಲೂಕಾಡಳಿತ ಹೊರಡಿಸಿದೆ. ಹರಿಯುವ ನೀರಿನಲ್ಲಿ ಮಾತ್ರ ಯಾಂತ್ರಿಕ ದೋಣಿ ಬಳಕೆಗೆ ಅವಕಾಶವಿದೆ ಹೊರತು, ಹರಿಗೋಲಿಗಲ್ಲ.
  ಅನಧಿಕೃತ ಉದ್ಯಾನ ಸೃಷ್ಟಿ: ವಿರುಪಾಪುರ ಗಡ್ಡಿಯಲ್ಲಿದ್ದ ರೆಸಾರ್ಟ್‌ತೆರವು ನಂತರ ಅಂಜನಾದ್ರಿ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಿರ್ಣಯಿಸಲಾಗಿತ್ತು. ಹರಿಗೋಲು ಸಂಚಾರಕ್ಕಾಗಿ ಟ್ರೀ ಪಾರ್ಕ್ ಯೋಜನೆ ಅಸ್ತಿತ್ವಕ್ಕೆ ಬಂದಿದ್ದು, ವಿರುಪಾಪುರ ಗಡ್ಡಿಯಿಂದ ಸಣಾಪುರ ಕೆರೆಯವರೆಗಿನ 50 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಯೋಜನೆ ಬಗ್ಗೆ ಅರಣ್ಯ ಸಿಬ್ಬಂದಿ ಹೇಳಿದ್ದರೂ, ಸ್ಪಷ್ಟತೆಯಿಲ್ಲ. ಉದ್ದೇಶಿತ ಪ್ರದೇಶವನ್ನು ಸಾಲುಮರದ ತಿಮ್ಮಕ್ಕ ಉದ್ಯಾನ ಎಂದು ಶಾಸಕ ರೆಡ್ಡಿ ಹೊಸ ಹೆಸರು ನೀಡಿದ್ದು, ಹರಿಗೋಲು ಸಂಚಾರದ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಉದ್ಯಾನದ ಬಗ್ಗೆ ಗ್ರಾಪಂ ಆಡಳಿತ ಮಂಡಳಿಗೂ ಗೊತ್ತಿಲ್ಲ, ಗ್ರಾಮಸ್ಥರಲ್ಲೂ ಮಾಹಿತಿಯಿಲ್ಲ. ಹರಿಗೋಲು ಹಾಕುವ ಕೆಲ ಬೆಂಬಲಿಗರ ಅನುಕೂಲಕ್ಕೆ ರೆಡ್ಡಿ ಆಡಳಿತ ದುರ್ಬಳಕೆ ಮಾಡುತ್ತಿದ್ದು, ಅರಣ್ಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ನಾಯಿ ಸಂರಕ್ಷಿತ ಪ್ರದೇಶದಲ್ಲಿ ಹರಿಗೋಲು ಸಂಚಾರಕ್ಕೆ ಅವಕಾಶ ನೀಡಿದ್ದು ವನ್ಯ ಜೀವಿ ಪ್ರೇಮಿಗಳಿಂದಲೂ ವಿರೋಧ ವ್ಯಕ್ತವಾಗಿದೆ.

  ಸ್ಥಳೀಯರ ವಿರೋಧ….


  ಹರಿಗೋಲು ಯೋಜನೆಗೆ ಸ್ಥಳೀಯರ ವಿರೋಧವಿದ್ದು, ಬಲಿಷ್ಠರ ತಂಡ ಮಾತ್ರ ನಿರ್ವಹಿಸುತ್ತಿರುವುದರಿಂದ ನಮಗೇನೂ ಲಾಭವಿಲ್ಲ ಎನ್ನುತ್ತಿದ್ದಾರೆ. ಹರಿಗೋಲಿನಲ್ಲಿ ನಾಲ್ವರಿಗೆ ಮಾತ್ರ ಅವಕಾಶವಿದ್ದು, ಲ್ೈ ಜಾಕೇಟ್ ಕಡ್ಡಾಯ. ಆದರೆ ಹರಿಗೋಲಿನಲ್ಲಿ 10ಕ್ಕೂ ಹೆಚ್ಚು ಜನರನ್ನು ಹಾಕಲಾಗುತ್ತಿದೆ. ಇನ್ನೂ ಉದ್ದೇಶಿತ ಸ್ಥಳ 8 ಹಳ್ಳಿಗಳಿಗೆ ಕುಡಿವ ನೀರಿನ ಮೂಲ. ಪ್ರವಾಸಿಗರಿಗಾಗಿ ಮದ್ಯ, ಗಾಂಜಾ, ಡ್ರಗ್ಸ್ ಮಾರಾಟವು ಸುಲಭವಾಗಲಿದೆ. ಇದರಿಂದ ಯವಕರು ಹಾಳಾಗುವ ಸಾಧ್ಯತೆಗಳಿವೆ. ಇವೆಲ್ಲ ಕಾರಣಕ್ಕೆ ಕಾನೂನುಬದ್ಧವಾಗಿ ಮಾಡಿ, ಮೌಖಿಕ ಆದೇಶಿಸಿದರೆ ಕಾಯ್ದೆ ಉಲ್ಲಂಘನೆಯಾಗಲಿದ್ದು, ನಮ್ಮಲ್ಲಿ ಜಗಳ ಶುರುವಾಗಲಿದೆ. ಮೀನು ಹಿಡಿಯಲು ಕೆರೆಯಲ್ಲಿ ವರ್ಷಕ್ಕೆ 50 ಸಾವಿರ ರೂ.ನಂತೆ ಟೆಂಡರ್ ಪಡೆದಿದ್ದು, ಹರಿಗೋಲಿನಿಂದ ಮೀನು ಸಿಗಲ್ಲ. ವಿರೋಧಿಸಿದರೆ ರೆಡ್ಡಿ ಬೆಂಬಲಿಗರೆಂದು ಹೇಳಿಕೊಂಡು ದೌರ್ಜನ್ಯಕ್ಕೆ ಮುಂದಾದರೂ ಅಶ್ಚರರ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

  ಜಾಕೇಟ್ ಇಲ್ಲದೆ ನೀರಲ್ಲಿ ಆಟ

  ಟ್ರೀಪಾರ್ಕ್ ಅಭಿವೃದ್ಧಿ ಹೆಸರಿನಲ್ಲಿ ಹರಿಗೋಲು ಸಂಚಾರಕ್ಕೆ ಅವಕಾಶ ನೀಡಿದ್ದರೂ, ಜಿಲ್ಲಾಡಳಿತ ಅಥವಾ ಅರಣ್ಯ ಇಲಾಖೆಯ ಯಾವುದೇ ಆದೇಶವಾಗಿಲ್ಲ. ಹರಿಗೋಲು ಹಾಕುವವರು ಈಜು ಪರಿಣಿತರಾಗಿದ್ದು, ಲೋಕೋಪಯೋಗಿ ಮತ್ತು ಬಂದರು ಇಲಾಖೆಯಿಂದ ಪರವಾನಗಿ ಕಡ್ಡಾಯ. ಇಲಾಖೆ ನೀಡಿದರೂ ಯಾಂತ್ರಿಕ ದೋಣಿಗೆ ಮಾತ್ರ ನೀಡಲಿದೆ. ಹರಿಗೋಲು ಯಾರೂ ಹಾಕಬೇಕೆನ್ನುವುದು ಅರಣ್ಯ ಅಧಿಕಾರಿಗಳಲ್ಲಿ ಸ್ಪಷ್ಟತೆಯಿಲ್ಲ. ಲ್ೈ ಜಾಕೇಟ್ ಬಳಕೆಗೂ ನೋಂದಾಯಿತ ಸಂಸ್ಥೆಯಿಂದ ಕ್ಲಿಯರೆನ್ಸ್ ಬೇಕಿದೆ. ಇದ್ಯಾವ ಮಾನದಂಡ ಅನುಸರಿಸದೇ ಬಲಿಷ್ಟರಿಗೆ ಅವಕಾಶ ನೀಡಿದ್ದು, ಹರಿಗೋಲು ಬಳಕೆ ನೆಪದಲ್ಲಿ ಒಡೆದು ಆಳುವ ನೀತಿ ಶುರುವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹರಿಗೋಲು ನಿಷೇಧ ಹಿನ್ನೆಲೆಯಲ್ಲಿ ವಾರದ ಹಿಂದೆ 10ಕ್ಕೂ ಹೆಚ್ಚು ಹರಿಗೋಲುಗಳನ್ನು ಅರಣ್ಯ ಇಲಾಖೆ ಜಪ್ತಿ ಮಾಡಿದ್ದು, ನಿಷೇಧ ಕಾನೂನು ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಶಾಸಕ ರೆಡ್ಡಿ ಮೌಖಿಕ ಆದೇಶದ ಹಿನ್ನೆಲೆಯಲ್ಲಿ 16 ಹರಿಗೋಲುಗಳಿಗೆ ಅವಕಾಶ ನೀಡುವ ಮೂಲಕ ಅರಣ್ಯ ಇಲಾಖೆ, ಕಾನೂನಾತ್ಮಕ ಎಡವಟ್ಟು ಮಾಡಿಕೊಂಡಿದೆ. ಕನಿಷ್ಠ ಸೌಲಭ್ಯವಿಲ್ಲದಿದ್ದರೂ 24 ಗಂಟೆಯಲ್ಲಿ ಟಿಕೆಟ್ ಕೌಂಟರ್ ತೆರೆಯಲು ಅವಕಾಶ ನೀಡಲಾಗಿದೆ. ಹರಿಗೋಲು ಸಂಚಾರಕ್ಕೆ ಒಬ್ಬರಿಗೆ 20ನಿಮಿಷಕ್ಕೆ 150ರೂ. ಶುಲ್ಕ ನಿಗದಿಪಡಿಸಿದ್ದು, 50 ರೂ. ಅರಣ್ಯ ಇಲಾಖೆಗೆ, 100ರೂ. ಹರಿಗೋಲು ಮಾಲೀಕರಿಗೆ ನೀಡಲು ನಿರ್ಧರಿಸಲಾಗಿದೆ.

  ಸತ್ತವರ ಸಂಖ್ಯೆ ಎಷ್ಟು? ಹರಿಗೋಲು ನಿಷೇಧ ಹಿನ್ನೆಲೆಯಲ್ಲಿ ವಾರದ ಹಿಂದೆ 10ಕ್ಕೂ ಹೆಚ್ಚು ಹರಿಗೋಲುಗಳನ್ನು ಅರಣ್ಯ ಇಲಾಖೆ ಜಪ್ತಿ ಮಾಡಿದ್ದು, ನಿಷೇಧ ಕಾನೂನು ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಶಾಸಕ ರೆಡ್ಡಿ ಮೌಖಿಕ ಆದೇಶದ ಹಿನ್ನೆಲೆಯಲ್ಲಿ 16 ಹರಿಗೋಲುಗಳಿಗೆ ಅವಕಾಶ ನೀಡುವ ಮೂಲಕ ಅರಣ್ಯ ಇಲಾಖೆ, ಕಾನೂನಾತ್ಮಕ ಎಡವಟ್ಟು ಮಾಡಿಕೊಂಡಿದೆ.

  ಪ್ರವಾಸೋದ್ಯಮ ಬೆಳೆಯುವ ಉದ್ದೇಶದಿಂದ ಸಣಾಪುರ ಕೆರೆಯಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ಮಾಣ ಯೋಜನೆಯಿದ್ದು, ಯುವಕರಿಗೆ ಉದ್ಯೋಗ ನೀಡುವುದಕ್ಕೆ ಹರಿಗೋಲು ಸಂಚಾರದ ಯೋಜನೆ ಜಾರಿಗೊಳಿಸಲಾಗಿದೆ. ನಿಷೇಧಿತ ಪ್ರದೇಶದ ಬಗ್ಗೆ ಯಾವುದೇ ಮಾಹಿತಿಯಿಲ್ಲ.

  ಗಾಲಿ ಜನಾರ್ದನರೆಡ್ಡಿ, ಶಾಸಕ, ಗಂಗಾವತಿ

  ವಿರುಪಾಪುರ ಗಡ್ಡಿ, ಸಣಾಪುರ ಕೆರೆಯವರೆಗೂ ಟ್ರೀ ಪಾರ್ಕ್ ನಿರ್ಮಾಣಕ್ಕಾಗಿ ಇಲಾಖೆಯಲ್ಲಿ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ ಹರಿಗೋಲು ಸಂಚಾರ ಯೋಜನೆ ಜಾರಿಗೊಳಿಸಲಾಗಿದೆ. ಕೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದರಿಂದ ಬೇರೆ ಇಲಾಖೆ ಅನುಮತಿ ಅಗತ್ಯವಿಲ್ಲ.

  ಸುಭಾಶ್‌ಚಂದ್ರ, ವಲಯ ಅರಣ್ಯಾಧಿಕಾರಿ

  ಗ್ರಾಪಂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಶಾಸಕ ಗಾಲಿ ಜನಾರ್ದನರೆಡ್ಡಿ ಸಣಾಪುರ ಹರಿಗೋಲು ಸಂಚಾರ ಯೋಜನೆ ರೂಪಿಸಿದ್ದು, ಯಾವುದೂ ಲಿಖಿತ ಆದೇಶವಿಲ್ಲ. ಅರಣ್ಯಾಧಿಕಾರಿಗಳು ಶಾಮೀಲಾಗಿ ಅರಾಜಕತೆಗೆ ಮುಂದಾಗಿದ್ದಾರೆ.
  ಕೆ.ನಾಗೇಶ, ಗ್ರಾಪಂ ಸದಸ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts