More

    ಲಾಭದತ್ತ ಗಣಿ ಕಂಪನಿ, 9 ತಿಂಗಳಿಗೆ 926 ಕೆ.ಜಿ ಚಿನ್ನ ಉತ್ಪಾದನೆ

    ಹಟ್ಟಿಚಿನ್ನದಗಣಿ: 2023-24ನೇ ಆರ್ಥಿಕ ವರ್ಷಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿಚಿನ್ನದಗಣಿ ಕಂಪನಿ ಆರ್ಥಿಕ ವರ್ಷದ 9 ತಿಂಗಳಲ್ಲಿ (ಏಪ್ರಿಲ್ 2024ರಿಂದ ಡಿಸೆಂಬರ್ 2024ರವರೆಗೆ) 926.198 ಕೆ.ಜಿ. ಚಿನ್ನ ಉತ್ಪಾದಿಸಿದೆ. 9 ತಿಂಗಳಿಗೆ 1192 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಿತ್ತು. 266 ಕೆ.ಜಿ ಉತ್ಪಾದನೆ ಹಿನ್ನಡೆ ಕಂಡಿದೆ.

    ಇದನ್ನೂ ಓದಿ: ಗಮನ ಬೇರೆಡೆ ಸೆಳೆದು 6 ಲಕ್ಷ ರೂ ಚಿನ್ನಾಭರಣ ವಂಚಿಸಿದ ಮೂವರ ಬಂಧನ

    ಪ್ರತಿ ಟನ್ ಅದಿರಿನಲ್ಲಿ 2.81 ಗ್ರಾಂ ಉತ್ಪಾದನೆ ಗುರಿ ಹೊಂದಿದ್ದು, ಟನ್ನಿಗೆ 2.63 ಗ್ರಾಂ. ಹಳದಿ ಲೋಹ ಉತ್ಪಾದನೆ ಸಾಧನೆಯಾಗಿದೆ. ಏಪ್ರಿಲ್‌ನಲ್ಲಿ 98, ಮೇ 94, ಜೂನ್ 98, ಜುಲೈ 99, ಅಗಸ್ಟ್ 110, ಸೆಪ್ಟೆಂಬರ್ 109, ಅಕ್ಟೋಬರ್ 113, ನವೆಂಬರ್ 83 ಕೆ.ಜಿ ಚಿನ್ನವನ್ನು ಕ್ರಮವಾಗಿ ಉತ್ಪಾದಿಸಿತ್ತು. ಡಿಸೆಂಬರ್‌ವೊಂದರಲ್ಲೆ 118 ಕೆ.ಜಿ (9 ತಿಂಗಳಲ್ಲೇ ಅತ್ಯಧಿಕ) ಚಿನ್ನ ಉತ್ಪಾದಿಸಲಾಗಿದೆ. 5 ತಿಂಗಳಲ್ಲಿ ನೂರು ಕೆ.ಜಿ ಉತ್ಪಾದನೆ ದಾಟಿರಲಿಲ್ಲ. ಅದರಲ್ಲೂ ನವೆಂಬರ್‌ನಲ್ಲಿ ಕೇವಲ 83 ಕೆ.ಜಿ ಅತ್ಯಂತ ಕಳಪೆ ಉತ್ಪಾದನೆ ಗೈದಿದೆ.

    ಆರ್ಥಿಕ ವರ್ಷದ ಪ್ರಾರಂಭದಲ್ಲಿ 1800 ಕೆ.ಜಿ ಗುರಿ ಹೊಂದಲಾಗಿತ್ತು. ಕಂಪನಿ ಉತ್ಪಾದಿಸುವ 24 ಕ್ಯಾರೆಟ್ ಚಿನ್ನದ ದರ ಇಂದಿನ ಮಾರುಕಟ್ಟೆಯಲ್ಲಿ 55 ಸಾವಿರ ರೂ. ಆಸು-ಪಾಸಿನಲ್ಲಿದೆ. ಅಲ್ಪಸ್ವಲ್ಪ ಬೆಲೆಯಲ್ಲಿ ಏರಿಳಿಕೆ ಕಂಡರೂ ಇಂದಿನ ದರಕ್ಕೆ ಹೋಲಿಸಿದರೆ ತಿಂಗಳಿಗೆ ಸರಾಸರಿ 75 ರಿಂದ 80 ಕೆ.ಜಿ ಚಿನ್ನ ಉತ್ಪಾದಿಸಿದರೆ ಗಣಿಯ ಕಾರ್ಯಕ್ಷಮತೆ ಉಳಿಸಿಕೊಂಡು ಅಧಿಕ ಲಾಭ ಗಳಿಸಬಹುದೆಂಬ ಲೆಕ್ಕಾಚಾರದಲ್ಲಿ ಕಳೆದ ವರ್ಷದ ಲಾಭಕ್ಕೆ ಕಡಿಮೆಯಾಗದಂತೆ ಸರಿದೂಗಿಸಿ, ಗಣಿಯ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತ ವರ್ಗ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

    ಕಂಪನಿ 2021-22 ನೇ ಆರ್ಥಿಕ ಸಾಲಿಗೆ 180 ಕೋಟಿ ರೂ. ಲಾಭಗಳಿಸಿದ್ದು, ವೆಚ್ಚವೆಲ್ಲವನ್ನು ತೆಗೆದರೆ 130 ಕೋಟಿ ರೂ. ನಿವ್ವಳ ಲಾಭಗಳಿಸಿತ್ತು. 2022-23 ನೇಸಾಲಿಗೆ 150 ಕೋಟಿ ರೂ. ಲಾಭಗಳಿಸಿತ್ತು. ಇಂದಿನ ಚಿನ್ನದ ದರ ಹೀಗೆ ಮುಂದುವರಿದರೆ ಕಳೆದ ಬಾರಿ ಲಾಭಕ್ಕಿಂತ ಹೆಚ್ಚಿನ ಲಾಭ ಗಳಿಕೆಯ ನಿರೀಕ್ಷೆ ಕಂಪನಿಗಿದೆ.

    ಗಣಿ ಕಂಪನಿ ಅಧಿನದ ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಹೊಸ ಯೋಜನೆಯಲ್ಲಿ ಉತ್ಪಾದನೆ ಕುಂಟುತ್ತ ಸಾಗಿದೆ. ಪ್ರತಿ ಟನ್ ಅದಿರಿಗೆ ಚಿನ್ನದ ಪ್ರಮಾಣ ಕಡಿಮೆ ಸಿಗುತ್ತಿದ್ದರು ಸಹಿತ ಸರಾಸರಿಯಲ್ಲಿ ಸರಿದೂಗಿಸಲಾಗುತ್ತಿದೆ. ಬ್ರಿಟಿಷರ ಕಾಲಾವಧಿಯಲ್ಲಿ ನಡೆಸಿ ಬಿಟ್ಟ ವಂದಲಿ ಚಿನ್ನದಗಣಿಯ ಪುನರಾರಂಭಕ್ಕೆ ಕಾಲ ಸನ್ನಿಹಿತವಾಗಿದ್ದು, ಹಲವು ಹಂತದ ಡ್ರಿಲ್ಲಿಂಗ್ ಕಾರ್ಯ ನಡೆದು ಪ್ರಕ್ರಿಯೆಗಳೆಲ್ಲವು ಮುಗಿದಿದ್ದು, ಕೂಡಲೆ ಪ್ರಾರಂಭಿಸಬೇಕೆಂಬ ಒತ್ತಡ ಹೆಚ್ಚಾಗಿದೆ.

    ಪ್ರಾರಂಭದಲ್ಲಿ ಉತ್ಪಾದನೆ ಹಿನ್ನಡೆ ಕಂಡರು ಕೂಡಾ ವರ್ಷಾಂತ್ಯಕ್ಕೆ ಕಳೆದ ವರ್ಷದ ಲಾಭದ ದಾಖಲೆ ಮುರಿಯುವ ನಿರೀಕ್ಷೆ ಇದೆ. ನಿಸರ್ಗದ ವಿರುದ್ಧವಾಗಿ ಕಾರ್ಯ ನಿರ್ವಹಿಸುವ ಕಾರ್ಮಿಕ-ಅಧಿಕಾರಿ ವರ್ಗದ ಶ್ರಮದ ಫಲದಿಂದ, ಗಂಭೀರ ಅವಘಡಗಳು ಶೂನ್ಯಕ್ಕಿಳಿದಿವೆ.
    | ಪ್ರಕಾಶ್, ಗಣಿ ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts