More

    ಪುಟಾಣಿ ರೈಲಿಗೆ ಮತ್ತೆ ಕಂಟಕ, ಇಂಜಿನ್, ಹಳಿ ಸಮಸ್ಯೆ ನಿರಂತರ

    ಭರತ್ ಶೆಟ್ಟಿಗಾರ್ ಮಂಗಳೂರು

    ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿರುವ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಓಡಿದ್ದಕ್ಕಿಂತ, ವಿವಿಧ ಸಮಸ್ಯೆಯಿಂದ ನಿಂತಿದ್ದೇ ಅಧಿಕ ಎನ್ನಬಹುದು. 15 ದಿನಗಳಿಂದ ಮತ್ತೆ ಸಂಚಾರ ಆರಂಭಿಸಿದರೂ, ಯಾವುದೇ ಕ್ಷಣ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

    ಪ್ರತಿಸಲವೂ ಇಂಜಿನ್ ಸಮಸ್ಯೆ ಎದುರಾಗುತ್ತಿದೆ. ಸ್ವಲ್ಪ ಕಾಲ ಕಾರ್ಯಾಚರಣೆ ನಿಲ್ಲಿಸಿದರೆ ಇಂಜಿನ್ ಸ್ಟಾರ್ಟ್ ಆಗುವುದಿಲ್ಲ. ಮಳೆಗಾಲದಲ್ಲಿ ಒಳಗೆ ನೀರು ಹೋದರಂತೂ ದುರಸ್ತಿ ಮಾಡಲೇಬೇಕು. ಜತೆಗೆ ಶನಿವಾರ-ಭಾನುವಾರ ಹೊರತುಪಡಿಸಿ, ಇತರ ದಿನ ಸಂಚರಿಸುವವರೂ ಇರುವುದಿಲ್ಲ. ಒಂದು ಸುತ್ತು ಹಾಕುವುದೇ ಕಷ್ಟ. ಇದರಿಂದ ಗುತ್ತಿಗೆ ಪಡೆದವರು ಓಡಿಸಲು ಹಿಂದೆ-ಮುಂದೆ ನೋಡುತ್ತಿದ್ದಾರೆ.

    ಹಳಿ ತಪ್ಪುತ್ತಿದೆ ರೈಲು: ಪಾರ್ಕ್ ಸುತ್ತ ಕಾಂಕ್ರೀಟ್ ಬೆಡ್ ಮೇಲೆ ಟ್ರಾೃಕ್ ನಿರ್ಮಿಸಲಾಗಿದೆ. ಸುಮಾರು 1.2 ಕಿ.ಮೀ ವಿಸ್ತಾರವಾಗಿ ರೈಲು ಚಲಿಸುತ್ತದೆ. ಪ್ರಸ್ತುತ ಹಳಿಯಲ್ಲಿ ಸಂಚರಿಸುವಾಗ ಇಂಜಿನ್ ಹಳಿ ತಪ್ಪುವಂಥ ಘಟನೆ ಎದುರಾಗುತ್ತಿದೆ. ಈಗಾಗಲೇ ಒಂದೆರಡು ಬಾರಿ ಹಳಿ ತಪ್ಪಿದ್ದು, ನಿಧಾನವಾಗಿ ಚಲಿಸುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಪಾರ್ಕ್‌ಗೆ ಸುತ್ತು ಬರಬೇಕಾದರೆ ಸಿಗುವ ಸುರಂಗ ಮಾರ್ಗದ ಬಳಿಕ ಹಳಿ ಅವೈಜ್ಞಾನಿಕವಾಗಿದೆ. ಮುಂದಕ್ಕೆ ಹೋಗುವ ಬದಲು ಹಿಂದಕ್ಕೆ ಎಳೆಯುತ್ತದೆ ಎನ್ನುತ್ತಾರೆ ರೈಲು ಚಾಲಕ.

    1.09 ಕೋಟಿ ರೂ. ವೆಚ್ಚ: 2017ರಲ್ಲಿ ಬಾಲಭವನ ಸೊಸೈಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹೊಸ ಇಂಜಿನ್ ಮತ್ತು ಬೋಗಿಗಳನ್ನು ಮೈಸೂರಿನಿಂದ ಮಂಗಳೂರಿಗೆ ತರಲಾಗಿತ್ತು. ಟ್ರಾೃಕ್ ಮತ್ತು ರೈಲು ನಿರ್ಮಾಣಕ್ಕೆ ಒಟ್ಟು 1.09 ಕೋಟಿ ರೂ. ವೆಚ್ಚವಾಗಿತ್ತು. ಮೈಸೂರಿನ ರೈಲ್ವೆ ವರ್ಕ್‌ಶಾಪ್‌ನಲ್ಲಿ ರೈಲಿನ ನಿರ್ಮಾಣ ಕೆಲಸಗಳು ನಡೆದಿವೆ. ಆದರೆ ದೊಡ್ಡ ಮೊತ್ತ ಖರ್ಚು ಮಾಡಿ ನಿರ್ಮಿಸಲಾದ ರೈಲು ನಾಲ್ಕೇ ವರ್ಷದಲ್ಲಿ ಪದೇಪದೆ ಹಾಳಾಗಲು ಕಾರಣವೇನು ಎಂಬ ಪ್ರಶ್ನೆ ಎದುರಾಗಿದೆ.

    ಹೊಸ ಇಂಜಿನ್‌ಗೆ ಬೇಡಿಕೆ: ಹೊಸ ಇಂಜಿನ್ ಒದಗಿಸುವ ಬದಲು ಹಳೇ ಇಂಜಿನ್ ದುರಸ್ತಿ ಮಾಡಿ, ಪೇಂಟ್ ಮಾಡಿ ನೀಡಲಾಗಿದೆ. ಮೈಸೂರಿನಲ್ಲಿ ಓಡುತ್ತಿದ್ದ ಇಂಜಿನ್ ಎನ್ನುವ ಆರೋಪ ಕೇಳಿಬಂದಿದೆ. ಇದನ್ನು ಬಾಲಭವನ ಸಮಿತಿ ಸದಸ್ಯರು ನಿರಾಕರಿಸಿದ್ದು, 91 ಲಕ್ಷ ರೂ. ವೆಚ್ಚದಲ್ಲಿ ಹೊಸ ಇಂಜಿನ್ ನಿರ್ಮಿಸಲಾಗಿದೆ ಎನ್ನುತಾರೆ. ಪ್ರಸ್ತುತ ಇರುವ ಇಂಜಿನ್ ಯಾವುದೇ ಕ್ಷಣದಲ್ಲಿ ಕೈಕೊಡುವ ಸಾಧ್ಯತೆಯಿದೆ. ಆದ್ದರಿಂದ ಹೊಸ ಇಂಜಿನ್‌ಗೆ ಬೇಡಿಕೆ ಕೇಳಿ ಬಂದಿದೆ.

    ಜಿಲ್ಲಾ ಬಾಲಭವನ ಸಮಿತಿ ಸಭೆಯಲ್ಲಿ ಈ ವಿಚಾರ ಚರ್ಚಿಸಿ, ರಾಜ್ಯ ಬಾಲಭವನ ಸೊಸೈಟಿಗೆ ಪ್ರಸ್ತಾವನೆ ಕಳುಹಿಸಿದರೆ ಹಳಿ ದುರಸ್ತಿ ಸೇರಿದಂತೆ ಅವಶ್ಯ ಮೊತ್ತ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಹೊಸ ಇಂಜಿನ್ ಖರೀದಿಗೆ ಚಿಂತನೆ ನಡೆಸುತ್ತೇನೆ.

    ಚಿಕ್ಕಮ್ಮ ಬಸವರಾಜ್
    ಬಾಲಭವನ ಸೊಸೈಟಿ ಅಧ್ಯಕ್ಷೆ

    ರೈಲಿನ ಇಂಜಿನ ಕಾರ್ಯಕ್ಷಮತೆ ನೋಡಿದಾಗ ಹಳೇ ಇಂಜಿನ್ ದುರಸ್ತಿ ಮಾಡಿ ನೀಡಿದಂತಿದೆ. ಮಳೆಗಾಲದಲ್ಲಿ ನೀರು ಹೋದರೆ ಸ್ಟಾರ್ಟ್ ಆಗುವುದಿಲ್ಲ. ಜತೆಗೆ ಹಳಿಗಳು ರೈಲಿನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಕೆಲವು ಕಡೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎತ್ತರದಲ್ಲಿದೆ. ಶನಿವಾರ ಭಾನುವಾರ ಹೊರತುಪಡಿಸಿ, ಮಕ್ಕಳೂ ಬರುವುದಿಲ್ಲ.

    ರಾಜ್‌ಗೋಪಾಲ ರೈ
    ರೈಲು ಗುತ್ತಿಗೆ ಪಡೆದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts