More

    ಸಮಸ್ಯೆಗಳಿಗೆ ತಾಲೂಕು ಮಟ್ಟದಲ್ಲೇ ಪರಿಹಾರ

    ಲಿಂಗಸುಗೂರು: ಸಾರ್ವಜನಿಕರು ಜಮೀನು ಹಾಗೂ ಇತರ ಕೆಲಸಗಳಿಗಾಗಿ ತಾಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ತಾಲೂಕು ಮಟ್ಟದ ಜನತಾ ದರ್ಶನ ಸಹಕಾರಿಯಾಗಲಿದೆ ಎಂದು ಡಿಸಿ ಚಂದ್ರಶೇಖರ ನಾಯಕ ಹೇಳಿದರು.

    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಸರ್ಕಾರ ಸಾರ್ವಜನಿಕರ ಕುಂದು-ಕೊರತೆಗಳನ್ನು ನಿವಾರಿಸಲು ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ಮತ್ತು ತಾಲೂಕು ಮಟ್ಟದಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ನಡೆಸುವಂತೆ ನಿರ್ದೇಶನ ನೀಡಿದೆ. ಜನರ ಸಮಸ್ಯೆಗಳಿಗೆ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಕೆಲ ತಾಂತ್ರಿಕ ದೋಷಗಳಿದ್ದರೆ ಕಾಲಾವಕಾಶ ನೀಡಿ ಇತ್ಯರ್ಥ ಪಡಿಸಲಾಗುವುದೆಂದು ಹೇಳಿದರು.

    ಕೃಷ್ಣಾ ನದಿ ತೀರದ ವಿವಿಧ ಗಡ್ಡಿಗಳಲ್ಲಿ 19 ರೈತಾಪಿ ಕುಟಂಬಗಳು ವಾಸಿಸುತ್ತಿದ್ದು, ನದಿಯಲ್ಲಿ ಪ್ರವಾಹದ ವೇಳೆ ಕುಟಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಪರ್ಯಾಯ ಜಮೀನು ಖರೀದಿಸಿ ಕುಟುಂಬಗಳ ಶಾಶ್ವತ ಸ್ಥಳಾಂತರಕ್ಕೆ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿದೆ. ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಒತ್ತಾಯಿಸಿದರು. ಕುಟುಂಬಗಳ ಶಾಶ್ವತ ಸ್ಥಳಾಂತರಕ್ಕೆ ಸಿದ್ಧವಿದ್ದು, ಭೂಮಿ ಖರೀದಿ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ. ಸರ್ಕಾರಕ್ಕೆ ಮತ್ತೊಮ್ಮೆ ವರದಿ ನೀಡಲಾಗುವುದೆಂದು ಡಿಸಿ ತಿಳಿಸಿದರು.

    ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ಕೆಲವರು ದುರ್ಬಳಕೆ ಮಾಡುತ್ತಿದ್ದು, ರಿಯಲ್ ಎಸ್ಟೇಟ್ ಮಾಲಿಕರಿಂದ ಹಣ ಪಡೆದು ಅಧಿಕಾರಿಗಳ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲಾಗುತ್ತಿದೆ. ಇತ್ತೀಚಿಗೆ ಪುರಸಭೆ ಸಿಒ ರಡ್ಡಿ ರಾಯನಗೌಡ, ಬಿಸಿಎಂ ವಸತಿ ನಿಲಯದ ವಾರ್ಡನ್ ಶರಣಪ್ಪ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಇಂತಹ ಪ್ರಕರಣಗಳ ದಾಖಲಿಸುವ ಮುನ್ನ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಮುಂದುವರಿಯಬೇಕೆಂದು ಪ್ರಗತಿಪರ, ದಲಿತಪರ, ಕನ್ನಡಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು.

    ಸರ್ಕಾರದ ಎಲ್ಲ ಕಚೇರಿಗಳಿಗೆ ಅಂಗವಿಕಲರ ಅನುಕೂಲಕ್ಕಾಗಿ ರ‌್ಯಾಂಪ್ ನಿರ್ಮಿಸಬೇಕೆಂದು ವಿಕಲಚೇತನರ ಸಂಘಟನೆ ಮನವಿ ನೀಡಿತು. ಕುಪ್ಪಿಗುಡ್ಡ ಗ್ರಾಮದಲ್ಲಿ ಸರ್ಕಾರದಿಂದ ಮಂಜೂರಾದ ಸ್ಮಶಾನ ಭೂಮಿಯನ್ನು ಪಕ್ಕದ ಭೂ ಮಾಲೀಕರು ಒತ್ತುವರಿ ಮಾಡಿದ್ದು, ಕೂಡಲೇ ಸರ್ವೇ ಕೈಗೊಂಡು ಹದ್ದುಬಸ್ತು ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

    ಜನತಾ ದರ್ಶನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 52 ಸೇರಿ ಒಟ್ಟು 156 ಅರ್ಜಿಗಳು ಸಲ್ಲಿಕೆಯಾದವು. ಜಿಪಂ ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಹೆಚ್ಚುವರಿ ಎಸ್ಪಿ ಆರ್.ಶಿವಕುಮಾರ, ಎಸಿ ಅವಿನಾಶ ಶಿಂಧೆ, ತಹಸೀಲ್ದಾರ್ ಶಂಶಾಲಂ, ತಾಪಂ ಇಒ ಅಮರೇಶ ಯಾದವ್, ಟಿಎಚ್‌ಒ ಡಾ.ಅಮರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts