ಭೂ ಮಾರಾಟಕ್ಕೆ 11ಇ ನಕ್ಷೆ ತೊಡಕು

– ಅವಿನ್ ಶೆಟ್ಟಿ ಉಡುಪಿ

ಕಂದಾಯ ಸಂಬಂಧಿತ ಸೇವೆಯಲ್ಲಿ ಉಡುಪಿ ಜಿಲ್ಲೆ ಸತತ 12 ತಿಂಗಳಿನಿಂದ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಕಂದಾಯ ವಿಭಾಗದಲ್ಲಿ 11ಇ ನಕ್ಷೆ ಸೇವೆ ಮಾತ್ರ ಸಂದಿಗ್ಧತೆಯಲ್ಲಿದೆ. ಭೂಮಿ, ಕೃಷಿ ಜಮೀನು ಮಾರಾಟ ಸಂಬಂಧ ಪ್ರಮುಖ ದಾಖಲೆಯಾದ 11ಇ ನಕ್ಷೆ ಪಡೆಯಲು ಸಾರ್ವಜನಿಕರಿಗೆ ಸಾಕಷ್ಟು ತೊಡಕುಂಟಾಗಿದೆ.

ಭೂಮಿ ಮಾರಾಟ ಉದ್ದೇಶಕ್ಕಾಗಿ 11ಇ ನಕ್ಷೆ ಕೋರಿ ಸಾರ್ವಜನಿಕರು ಸಹಾಯಕ ಭೂ ದಾಖಲೆ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದಾಗ, ಅವರ ದಾಖಲೆಯಲ್ಲಿ ಆಕಾರ ಬಂದ್ ಮತ್ತು ಪಹಣಿ ದಾಖಲೆ ವ್ಯತ್ಯಾಸ ಇದ್ದಲ್ಲಿ ಮತ್ತು ಪಹಣಿ ಲೋಪದೋಷ ಇರುವ ಪ್ರಕರಣಗಳ ಕಡತವನ್ನು ತಹಸೀಲ್ದಾರ್‌ಗೆ ವರ್ಗಾಯಿಸಲಾಗುತ್ತದೆ. ಜಿಲ್ಲೆಯಲ್ಲಿ ತಾಲೂಕುವಾರು 5 ಸಾವಿರಕ್ಕೂ ಹೆಚ್ಚು ಇಂತಹ ಬಾಕಿ ಪ್ರಕರಣಗಳಿವೆ.
ಇಂತಹ ಪ್ರಕರಣಗಳ ಶೀಘ್ರ ವಿಲೇ ಮಾಡದ ಪರಿಣಾಮ 4-5 ವರ್ಷಗಳ ಕಾಲ ತಾಲೂಕು ಕಚೇರಿಗಳಿಗೆ ಜನರು ಅಲೆದಾಡುವಂತಾಗಿದೆ.

ಕುಟುಂಬದಲ್ಲಿ ಮದುವೆ, ಹೊಸ ಮನೆ ನಿರ್ಮಾಣ, ಆರ್ಥಿಕ ಸಂಕಷ್ಟದಲ್ಲಿ ಹಣಕಾಸು ನಿರ್ವಹಣೆ ಸೇರಿದಂತೆ ಅತಿ ಅಗತ್ಯ ಕೆಲಸಗಳಿಗೆ ಜಮೀನು ಮಾರಾಟ ಮಾಡಲು ಹೊರಟವರು ಸಕಾಲದಲ್ಲಿ ಜಮೀನು ಮಾರಲಾಗದೆ ತೊಂದರೆ ಅನುಭವಿಸು ವಂತಾಗಿದೆ. ಈ ಗಂಭೀರ ಸಮಸ್ಯೆ ಸರ್ಕಾರದ ಗಮನಕ್ಕೂ ಬಂದಿದೆ. ಇಂತಹ ಪ್ರಕರಣಗಳಲ್ಲಿ ಸಂಬಂಧಿಸಿದ ತಹಸೀಲ್ದಾರ್ ಶೀಘ್ರ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಎಸಿ ವಿಶೇಷ ಮುತುವರ್ಜಿ ವಹಿಸಿ ಪ್ರಕರಣದ ವಿಲೇ ಕುರಿತು ತಾಲೂಕುವಾರು ವಿಶೇಷ ಕಂದಾಯ ಆದಾಲತ್ ಅಥವಾ ಕಡತ ವಿಲೇವಾರಿ ಕಾರ್ಯ ಹಮ್ಮಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಆಕಾರ ಬಂದ್ ವಿಸ್ತಿರ್ಣಕ್ಕಿಂತ, ಪಹಣಿ ವಿಸ್ತಿರ್ಣ ಹೆಚ್ಚಾಗಿದ್ದು ಈಗಾಗಲೇ ದಸ್ತಾವೇಜು ಮೂಲಕ ಜಮೀನುಗಳು ವಹಿವಾಟುಗೊಂಡ ಪ್ರಕರಣದಲ್ಲಿ ಅರ್ಜಿ ವಿಲೇಗೆ ಸಮಸ್ಯೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಪಹಣಿಯ ವಿಸ್ತೀರ್ಣ ಕಡಿತಕ್ಕೆ ನಿಯಮಾನುಸಾರ ನೋಟಿಸ್ ನೀಡಲಾಗುತ್ತದೆ. ಸಂಬಂಧಪಟ್ಟ ಪಹಣಿದಾರರು, ಆಕ್ಷೇಪಣೆ ಸಲ್ಲಿಸುತ್ತಿರುವ ಪ್ರಕರಣ ಹೆಚ್ಚುತ್ತಿರುವುದು ಕಂದಾಯ ಇಲಾಖೆಗೂ ತಲೆನೋವಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಾಲೂಕುವಾರು ಅರ್ಜಿ ಬಾಕಿ: 11ಇ ನಕ್ಷೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಸಲ್ಲಿಕೆಯಾದ 5,921 ಅರ್ಜಿಗಳ ಪೈಕಿ ಕಳೆದ ತಿಂಗಳವರೆಗೆ 324 ಅರ್ಜಿ ವಿಲೇ ಆಗಿದೆ. ಆಕಾರ ಬಂದ್, ಪಹಣಿ, ಸರ್ವೆ ನಂಬರ್ ವ್ಯತ್ಯಾಸಗಳಿಂದಾಗಿ 5,953 ಅರ್ಜಿಗಳು ಬಾಕಿ ಇದೆ. 11ಇ ನಕ್ಷೆ ಕೋರಿ ಕುಂದಾಪುರ 1,250, ಉಡುಪಿ 824, ಕಾರ್ಕಳ 710, ಬೈಂದೂರು 1381, ಬ್ರಹ್ಮಾವರ 717, ಕಾಪು 699, ಹೆಬ್ರಿ 372 ಅರ್ಜಿಗಳು ಬಾಕಿ ಇದೆ. ಇದರಲ್ಲಿ ಹೆಚ್ಚಿನ ಸಂಖ್ಯೆ ಅರ್ಜಿಗಳು ಐದಾರು ವರ್ಷಗಳಿಂದ ವಿಲೇ ಆಗದೆ ಬಾಕಿ ಉಳಿದಿವೆ.

ದ.ಕ.ಜಿಲ್ಲೆಯಲ್ಲೂ 6000 11ಇ ನಕ್ಷೆ ಬಾಕಿ
ಮಂಗಳೂರು: ದಕ್ಷಿಣ ಕನ್ನಡದಲ್ಲೂ 6,000ದಷ್ಟು 11ಇ ನಕ್ಷೆ ಅರ್ಜಿಗಳು ಉಳಿದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕಾರ್‌ಬಂದ್ ಮತ್ತು ಪಹಣಿ ಹೊಂದಾಣಿಕೆ ಆಗದ ಕಾರಣಕ್ಕೆ ಅರ್ಜಿಗಳು ಶಿರಸ್ತೇದಾರರಿಗೆ ಪರಿಶೀಲನೆಗೆ ಹೋಗಿದೆ. ಪಹಣಿ ಸರಿಯಾಗದೆ ಪರಿಷ್ಕರಣೆ ಸಾಧ್ಯವಿಲ್ಲ. 2-3 ವರ್ಷಗಳ ಅರ್ಜಿಗಳೇ ಹೆಚ್ಚಿದ್ದು, ಕೆಲವು 4-5 ವರ್ಷಗಳಿಂದ ಬಾಕಿಯಾಗಿರುವ ಪ್ರಕರಣಗಳೂ ಇವೆ. ಕಾರ್‌ಬಂದ್ ವಿಸ್ತೀರ್ಣಕ್ಕೆ ಪಹಣಿ ತಿದ್ದುಪಡಿ ಮಾಡಿ ಸರಿಪಡಿಸಬೇಕು, ಇಲ್ಲವಾದರೆ ಪೋಡಿ ಆಗುವುದಿಲ್ಲ. ಆಕಾರ್‌ಬಂದ್‌ನಲ್ಲಿ 1 ಎಕರೆ ಇದ್ದು, ಆರ್‌ಟಿಸಿಯಲ್ಲಿ 1ಎಕರೆ 10 ಸೆಂಟ್ಸ್ ಇದ್ದರೆ, ಆ 10ಸೆಂಟ್ಸ್ ಎಲ್ಲಿಂದಲೂ ಸೇರಿಸಲಾಗದು. ಆಕಾರ್‌ಬಂದ್ ಸರಿ ಇರುತ್ತದೆ, ಅದಕ್ಕೆ ಆಯಾ ಗ್ರಾಮ ಲೆಕ್ಕಿಗರು ಎಲ್ಲಿ ಆರ್‌ಟಿಸಿ ತಪ್ಪಿದೆ ಎಂದು ಪರಿಶೀಲಿಸಿ ಸರಿಪಡಿಸಬೇಕು ಎನ್ನುತ್ತಾರೆ ದಕ್ಷಿಣ ಕನ್ನಡ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ನಿರಂಜನ್.

ಮೂರು ದಾಖಲೆಗಳಲ್ಲಿ (ಸರ್ವೆ ನಂಬರ್, ಆಕಾರ ಬಂದ್, ಪಹಣಿ ವಿಸ್ತೀರ್ಣ) ವ್ಯತ್ಯಾಸ ಕಂಡುಬಂದರೆ ಅರ್ಜಿಗಳ ವಿಲೇಗೆ ತೊಡಕುಂಟಾಗುತ್ತದೆ. ನಗರ ಪ್ರದೇಶದ ದೊಡ್ಡ ಸರ್ವೆ ನಂಬರ್‌ಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು. ಈ ಪೈಕಿ ಆರ್‌ಟಿಸಿ, ವಹಿವಾಟು ಆಗಿರುವ ಜಮೀನು ಆಗಿದೆ. 11ಇ ಆರ್‌ಟಿಸಿ ವಿಲೇವಾರಿಗಾಗಿ ವಿಶೇಷ ಆದ್ಯತೆ ನೀಡುವಂತೆ ಸರ್ಕಾರ ಸೂಚಿಸಿದೆ. ಹಳೆ ದಾಖಲೆಗಳ ಪುನರ್ ಪರಿಶೀಲನೆ, ಹೆಚ್ಚುವರಿ ಆರ್‌ಟಿಸಿ ನೋಡಿಕೊಂಡು, ಮಿಸ್‌ಮ್ಯಾಚ್ ಇದ್ದರೆ ಭೂ ನ್ಯಾಯ ಮಂಡಳಿಯಲ್ಲಿ ತಿದ್ದು ಪಡಿಗೂ ಅವಕಾಶವಿದೆ. ಆದರೆ, ಇಂಥ ಪ್ರಕರಣಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ.
– ಸದಾಶಿವ ಪ್ರಭು, ಎಡಿಸಿ ಉಡುಪಿ

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…